ನೆಟ್‌ಫ್ಲಿಕ್ಸ್ ಬಳಕೆದಾರರಿಗೆ ಬ್ಯಾಡ್ ನ್ಯೂಸ್! – ಇನ್ನುಮುಂದೆ ಇಂತಹ ಸಿನಿಮಾಗಳನ್ನು ಪ್ರಸಾರ ಮಾಡಲ್ಲ!
ಜಗತ್ತಿನ ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್ ಗಳಲ್ಲಿ ನೆಟ್‌ಫ್ಲಿಕ್ಸ್ ಕೂಡ ಒಂದು. ಈ ಅಪ್ಲಿಕೇಷನ್ ಹೊಸ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ತನ್ನ ಪ್ರತಿ ಸ್ಪರ್ಧಿಗಳಾದ ಡಿಸ್ನಿಪ್ಲಸ್ ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಇತರೆ ಆ್ಯಪ್‌ಗಳಿಗೆ ಪೈಪೋಟಿ ನೀಡುತ್ತಿದೆ. ಹೊಸ ಸಿನಿಮಾಗಳನ್ನು ಖರೀದಿಸಿ ತನ್ನ ವೇದಿಕೆಯಲ್ಲೇ ಗ್ರಾಹಕರ ವೀಕ್ಷಣೆಗೆ ನೆಟ್‌ಫ್ಲಿಕ್ಸ್ ಅವಕಾಶ ಕಲ್ಪಿಸುತ್ತಿದೆ. ಮೂವಿಗಳು ಅಷ್ಟೇ ಅಲ್ಲ, ವೆಬ್ ಸರಣಿಗಳು, ಟಿವಿ ಶೋಗಳು, ಮಕ್ಕಳ ಕಾರ್ಯಕ್ರಮಗಳು ಹೀಗೆ ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ತನ್ನ ಗ್ರಾಹಕರಿಗೆ ಉಣಬಡಿಸುತ್ತಿದೆ. ಇದೀಗ ನೆಟ್‌ಫ್ಲಿಕ್ಸ್ ನಿರ್ಧಾರದಿಂದ ಭಾರತದ ಸಿನಿಪ್ರಿಯರಿಗೆ ಬೇಸರ ಆಗಿದೆ. ‘ಇದು ನಾವು ತೆಗೆದುಕೊಂಡ ನಿರ್ಧಾರ ಅಲ್ಲ. ಇದರ ಹಿಂದೆ ಸೆನ್ಸಾರ್ ಮಂಡಳಿಯ ಸೂಚನೆ ಇದೆ’ ಎಂದು ಸ್ಪಷ್ಟಪಡಿಸಿದೆ. ಅಷ್ಟಕ್ಕೂ ಬದಲಾದ ನಿರ್ಧಾರ ಏನು? ಸಿನಿಪ್ರಿಯರು ಬೇಸರಗೊಂಡಿದ್ದು ಏಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ದೇಶದಲ್ಲಿ ಕೊರೊನಾ ಕರಿನೆರಳು – ಕರ್ನಾಟಕದಲ್ಲಿ ಹೈಅಲರ್ಟ್, KSRTC, BMTC ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ!
ಭಾರತದಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಬೇಕಾದ್ರೆ ಸೆನ್ಸಾರ್ ಮಂಡಳಿ ಬಳಿಯಲ್ಲಿ ನಿರ್ಧಾರವಾಗಬೇಕು. ಸೆನ್ಸಾರ್ ಆದ ಬಳಿಕವೇ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತದೆ. ಸಿನಿಮಾದಲ್ಲಿ ಯಾವುದಾದರೂ ಹೆಚ್ಚುವರಿ ದೃಶ್ಯ ಸೇರ್ಪಡೆ ಮಾಡಿದರೆ ಮತ್ತೆ ಅದನ್ನು ಸೆನ್ಸಾರ್ ಮಂಡಳಿಯ ಎದುರು ಇಟ್ಟ ಬಳಿಕವೇ ಅದನ್ನು ಪ್ರದರ್ಶಿಸಲು ಅವಕಾಶ ಇದೆ. ಆದರೆ, ಒಟಿಟಿ ಪ್ಲಾಟ್ಫಾರ್ಮ್ಗಳಿಗೆ ಈ ರೀತಿಯ ನಿರ್ಬಂಧ ಇಲ್ಲ. ಅಲ್ಲಿ ಪ್ರಸಾರ ಆಗುವ ಸಿನಿಮಾಗಳಿಗೆ ಯಾವುದೇ ಸೆನ್ಸಾರ್ ಪ್ರಕ್ರಿಯೆಯ ಅಗತ್ಯವಿಲ್ಲ. ಹೀಗಾಗಿ, ಕಟ್ ಮಾಡಲ್ಪಟ್ಟ ದೃಶ್ಯಗಳನ್ನು ಸೇರಿಸಿ ಒಟಿಟಿಯಲ್ಲಿ ಸಿನಿಮಾ ಪ್ರಸಾರ ಮಾಡಲಾಗುತ್ತಿತ್ತು. ಈ ರೀತಿ ಮಾಡದಂತೆ ನೆಟ್ಫ್ಲಿಕ್ಸ್ಗೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ.
ಸೆನ್ಸಾರ್ ಆಗದೇ ಇರುವ ವರ್ಷನ್ನ ಪ್ರಸಾರ ಮಾಡದಂತೆ ನೆಟ್ಫ್ಲಿಕ್ಸ್ಗೆ ಸೆನ್ಸಾರ್ ಮಂಡಳಿ ಹೇಳಿದೆ. ಈ ಸೂಚನೆಯನ್ನು ನೆಟ್‌ಫ್ಲಿಕ್ಸ್ ಪಾಲಿಸಲು ಆರಂಭಿಸಿದೆ. ‘ಭೀಡ್’ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತಿತರ ರಾಜಕೀಯ ನಾಯಕರ ಉಲ್ಲೇಖ ಇದೆ. ಇದನ್ನು ಪ್ರಸಾರ ಮಾಡಲಾಗುತ್ತಿತ್ತು. ಆದರೆ, ಇದಕ್ಕೆ ಕತ್ತರಿ ಬಿದ್ದಿದೆ. ಇನ್ನು ಲಿಯೋ ಸಿನಿಮಾ, ಒಎಂಜಿ2 ಸಿನಿಮಾಗಳಲ್ಲಿ ಈ ಮೊದಲು ಕತ್ತರಿ ಹಾಕಿದ ಭಾಗಗಳನ್ನು ಸೇರ್ಪಡೆ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈಗ ಹೊಸ ಸೂಚನೆ ಮೇರೆಗೆ ನೆಟ್‌ಫ್ಲಿಕ್ಸ್ ಸೆನ್ಸಾರ್ ವರ್ಷನ್ನ ಮಾತ್ರ ಪ್ರಸಾರ ಮಾಡಲು ಪ್ರಾರಂಭಿಸಿದೆ. ಸೆನ್ಸಾರ್ ಮಂಡಳಿಯ ಸೂಚನೆಯಂತೆ ನೆಟ್‌ಫ್ಲಿಕ್ಸ್ ತೆಗೆದುಕೊಂಡಿರುವ ನಿರ್ಧಾರದಿಂದ ನಿರ್ದೇಶಕರು ಹಾಗೂ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ‘ಅನಿಮಲ್’ ಹಾಗೂ ‘ಸಲಾರ್’ ಸಿನಿಮಾದ ಪರಿಸ್ಥಿತಿ ಏನಾಗಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.