ಮಕ್ಕಳು, ಮಹಿಳೆಯರ ಮಾರಣಹೋಮ.. ಇಸ್ರೇಲ್ ವಿರುದ್ಧ ಕೆನಡಾ ಕೆಂಡ – ಗುಡುಗಿದ ಟ್ರುಡೋಗೆ ನೆತನ್ಯಾಹು ಎಚ್ಚರಿಕೆ!
ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ನಿರ್ಣಾಯಕ ಘಟ್ಟ ತಲುಪಿದೆ. ಪ್ಯಾಲೆಸ್ತೀನ್ ನ ಗಾಜಾಪಟ್ಟಿಯನ್ನು ಛಿದ್ರ ಛಿದ್ರ ಮಾಡಿರುವ ಇಸ್ರೇಲ್ ಸೇನೆ ಇಡೀ ನಗರವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈಗಾಗಲೇ ಹಮಾಸ್ ನ ನೂರಾರು ಸುರಂಗಗಳನ್ನ ಧ್ವಂಸ ಮಾಡಿದೆ. ಅಲ್ ಶಿಫಾ ಆಸ್ಪತ್ರೆಯಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎನ್ನುತ್ತಿರುವ ಇಸ್ರೇಲ್ ಸೇನೆ ಬುಲ್ಡೋಜರ್ ನುಗ್ಗಿಸಿ ಗುಂಡಿನ ಮಳೆ ಸುರಿಸುತ್ತಿದೆ. ಇಸ್ರೇಲ್ ಸೇನೆಯ ಇದೇ ದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯರು, ಮಕ್ಕಳ ಮೇಲೆ ನಡೆಯುತ್ತಿರುವ ದಾಳಿಗೆ ಖಂಡನೆ ವ್ಯಕ್ತವಾಗುತ್ತಿದೆ. ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಕೂಡ ಇಸ್ರೇಲ್ ನಡೆಗೆ ಕಿಡಿ ಕಾರಿದ್ದಾರೆ. ಆದ್ರೆ ತನ್ನ ಯುದ್ಧೋತ್ಸಾಹವನ್ನ ಸಮರ್ಥಿಸಿಕೊಳ್ಳುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಟ್ರುಡೋ ವಿರುದ್ಧ ಗುಡುಗಿದ್ದಾರೆ. ಕೆನಡಾ ಪ್ರಧಾನಿ ಹೇಳಿದ್ದೇನು..? ಇಸ್ರೇಲ್ ಅಧ್ಯಕ್ಷರು ಕೊಟ್ಟ ತಿರುಗೇಟು ಏನು..? ಗಾಜಾದ ಜನರ ಪರಿಸ್ಥಿತಿ ಹೇಗಿದೆ..? ಅಲ್ ಶಿಫಾ ಆಸ್ಪತ್ರೆಯಲ್ಲಿ ಉಗ್ರರು ಅವಿತಿದ್ದಾರಾ..? ಈ ಬಗೆಗಿನ ಕಂಪ್ಲೀಟ್ ಮಾಹಿತಿಯನ್ನ ಇವತ್ತಿನ ಸ್ಪೆಷಲ್ ಸ್ಟೋರಿಯಲ್ಲಿ ತಿಳಿಸಿಕೊಡ್ತೇವೆ. ನೀವು ಸುದ್ದಿಯಾನದ ಸಬ್ ಸ್ಕ್ರೈಬರ್ ಆಗೋದಿಕ್ಕೆ ಮರೀಬೇಡಿ.
ಪ್ಯಾಲೆಸ್ತೀನ್ ನ ಗಾಜಾಪಟ್ಟಿ ಭೂಮಿ ಮೇಲಿನ ನರಕದಂತಾಗಿದೆ. ಬಾಂಬ್, ಗುಂಡೇಟು, ರಾಕೆಟ್ ಗಳ ದಾಳಿಗೆ ಸಿಲುಕಿ ಇಡೀ ನಗರ ಅಸ್ಥಿಪಂಜರದಂತಾಗಿದೆ. 12 ಸಾವಿರಕ್ಕೂ ಹೆಚ್ಚು ನಾಗರಿಕರು ಉಸಿರುಚೆಲ್ಲಿದ್ದು ಬದುಕುಳಿದವರ ಪಾಡಂತೂ ಹೇಳತೀರದಾಗಿದೆ. ಮಕ್ಕಳ ಮಾರಣಹೋಮವೇ ನಡೆಯುತ್ತಿದ್ದು ಒಂದೊಂದು ದೃಶ್ಯವೂ ಭಯಾನಕವಾಗಿದೆ. ಪುಟ್ಟ ಪುಟ್ಟ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಅಮಾಯಕ ಪ್ಯಾಲೆಸ್ತೀನಿಯರ ಸಾವಿಗೆ ಇಡೀ ಜಗತ್ತೇ ಮಿಡಿಯುತ್ತಿದೆ. ಯಹೂದಿ ರಾಷ್ಟ್ರದ ವಿರುದ್ಧ ಬೆಂಕಿ ಉಗುಳುತ್ತಿದ್ದಾರೆ. ಹಮಾಸ್ ಉಗ್ರರನ್ನ ಬುಡಸಮೇತ ಕಿತ್ತು ಹಾಕೋವರೆಗೂ ರಕ್ತದಾಹ ನಿಲ್ಲಲ್ಲ ಎನ್ನುತ್ತಿರುವ ಇಸ್ರೇಲ್ ಸೇನೆ ಇದೀಗ ಗಾಜಾ ನಗರದ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾಗೂ ನುಗ್ಗಿದೆ. ಈಗಾಗಲೇ ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿಕೊಂಡು ಉಗ್ರರು ಆಶ್ರಯ ಪಡೆದಿರುವುದನ್ನು ಪತ್ತೆ ಮಾಡಿದ್ದ ಇಸ್ರೇಲ್ ಸೇನೆ, ಉಗ್ರರಿಗೆ ಶರಣಾಗುವಂತೆ ಸಂದೇಶ ರವಾನಿಸಿದೆ. ಆದ್ರೆ ಭಯೋತ್ಪಾದಕರನ್ನ ಟಾರ್ಗೆಟ್ ಮಾಡಿ ಅಮಾಯಕರನ್ನ ಕೊಲ್ಲುತ್ತಿರೋದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಇಸ್ರೇಲ್ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಗಾಜಾದ ಅತಿ ದೊಡ್ಡ ಆಸ್ಪತ್ರೆ ಕೆಳಗೆ ಹಮಾಸ್ ಕೇಂದ್ರ ಕಚೇರಿ – ಉಗ್ರರಿಗಾಗಿ ರೋಗಿಗಳ ಮಾರಣಹೋಮ?
ಪ್ಯಾಲೆಸ್ತೀನ್ ನ ಗಾಜಾಪಟ್ಟಿ ಮೇಲೆ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅಸಮಾಧಾನ ಹೊರ ಹಾಕಿದ್ದಾರೆ. ಇಸ್ರೇಲ್ ಸರ್ಕಾರವು ಗರಿಷ್ಠ ಸಹನೆ ಪ್ರದರ್ಶಿಸಬೇಕೆಂದು ಆಗ್ರಹಿಸಿದ್ದಾರೆ. ಇಡೀ ಜಗತ್ತು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳನ್ನು ನೋಡುತ್ತಿದೆ. ವೈದ್ಯರು, ಕುಟುಂಬದ ಸದಸ್ಯರು, ಬದುಕುಳಿದವರು, ತಮ್ಮ ಪೋಷಕರನ್ನು ಕಳೆದುಕೊಂಡಿರುವ ಸಾವಿರಾರು ಮಕ್ಕಳು ಸಾಕ್ಷ್ಯಗಳನ್ನು ಕೇಳುತ್ತಿದ್ದಾರೆ. ಪ್ಯಾಲೆಸ್ತೀನ್ ನಲ್ಲಿ ಮಹಿಳೆಯರು, ಮಕ್ಕಳು ಹಾಗೂ ನವಜಾತ ಶಿಶುಗಳ ಹತ್ಯೆಗೆ ಇಡೀ ಜಗತ್ತು ಸಾಕ್ಷಿಯಾಗುತ್ತಿದೆ. ಇದು ತಕ್ಷಣವೇ ನಿಲ್ಲಬೇಕು, ಹಮಾಸ್ ತನ್ನ ಬಳಿ ಇರುವ 200ಕ್ಕೂ ಹೆಚ್ಚು ಇಸ್ರೇಲ್ ಒತ್ತೆಯಾಳುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆಗ್ರಹಿಸಿದ್ದಾರೆ. ಟ್ರುಡೋ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸುವುದು ಇಸ್ರೇಲ್ ಅಲ್ಲ ಹಮಾಸ್. ಯಹೂದಿಗಳ ಮೇಲೆ ಅತ್ಯಂತ ಭಯಾನಕ ದಾಳಿ ನಡೆಸಿ ಇಸ್ರೇಲ್ ನಾಗರಿಕರ ಶಿರಚ್ಛೇದ ಮಾಡಿ ಸುಟ್ಟು ಹಾಕಲಾಗಿದೆ. ನಾಗರಿಕರಿಗೆ ಹಾನಿಯಾಗದಂತೆ ತಡೆಯಲು ಇಸ್ರೇಲ್ ಎಲ್ಲಾ ಪ್ರಯತ್ನಗಳನ್ನ ಮಾಡುತ್ತಿದೆ. ಆದ್ರೆ ಹಮಾಸ್ ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಗಾಜಾದ ಜನ್ರಿಗೆ ಮಾನವೀಯ ಕಾರಿಡಾರ್‌ಗಳು ಮತ್ತು ಸುರಕ್ಷಿತ ವಲಯಗಳಿಗೆ ತೆರಳಲು ಇಸ್ರೇಲ್ ಅನುವು ಮಾಡಿಕೊಡ್ತಿದೆ. ಆದರೆ ಹಮಾಸ್ ಹೊರಹೋಗದಂತೆ ತಡೆಯುತ್ತಿದ್ದಾರೆ. ನಾಗರಿಕರನ್ನ ಮುಂದೆ ಬಿಟ್ಟು ಹಿಂದೆ ಅಡಗಿ ಕುಳಿತಿರುವ ಹಮಾಸ್ ಯುದ್ಧ ಅಪರಾಧ ಎಸಗುತ್ತಿದೆ. ಹಮಾಸ್ ಅನಾಗರಿಕತೆಯನ್ನು ಸೋಲಿಸಲು ನಾಗರಿಕತೆಯ ಶಕ್ತಿಗಳು ಇಸ್ರೇಲ್ ಗೆ ಬೆಂಬಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ ಹಮಾಸ್ ಉಗ್ರರನ್ನೇ ಟಾರ್ಗೆಟ್ ಮಾಡಿರುವ ಇಸ್ರೇಲ್ ಸೇನೆ ಅದಾಗಲೇ ಗಾಜಾಪಟ್ಟಿಯನ್ನ ತನ್ನ ಕಂಟ್ರೋಲ್ ಗೆ ತೆಗೆದುಕೊಂಡಿದೆ. ಗಾಜಾನಗರದ ಪ್ರಮುಖ ವೈದ್ಯಕೀಯ ಕೇಂದ್ರ ಅಲ್ ಶಿಫಾ ಆಸ್ಪತ್ರೆ ಮೇಲೆ ದಾಳಿ ನಡೆಸಿ ಹಲವರನ್ನ ಕೊಂದು ಹಾಕಿದೆ.
ಅಲ್ ಶಿಫಾ ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಅಡಗಿದ್ದಾರೆಂಬ ಮಾಹಿತಿ ಹಿನ್ನೆಲೆ ಇಸ್ರೇಲ್ ಸೇನೆ ಶಿಫಾ ಆಸ್ಪತ್ರೆಯ ಪಶ್ಚಿಮ ಭಾಗದ ಮೇಲೆ ದಾಳಿ ನಡೆಸಿದೆ. ಭೂ ದಾಳಿ ಜತೆಗೆ ವಾಯುದಾಳಿ ಮೂಲಕ ಬಾಂಬ್ ಗಳ ಸುರಿಮಳೆಗೈಯಲಾಗುತ್ತಿದೆ. ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿಕೊಂಡು ಉಗ್ರರು ಆಶ್ರಯ ಪಡೆದಿರುವುದನ್ನ ಪತ್ತೆ ಮಾಡಿದೆ. ಹಾಗೇ ಆಸ್ಪತ್ರೆಯ ಪಶ್ಚಿಮ ಭಾಗ ಸುತ್ತುವರಿದು ಕೂಡಲೇ ಶರಣಾಗಬೇಕು. 16 ವರ್ಷ ಮೇಲ್ಪಟ್ಟವರು ಯಾರಿದ್ದರೂ ಹೊರಗೆ ಬನ್ನಿ ಎಂದು ಮೈಕ್ ಮೂಲಕ ಇಸ್ರೇಲ್ ಸೇನೆ ಅನೌನ್ಸ್ ಮಾಡಿದೆ. ಬಳಿಕ ನೂರಾರು ಇಸ್ರೇಲ್ ಯೋಧರು ಗುಂಡು ಹಾರಿಸುತ್ತ ಆಸ್ಪತ್ರೆಯೊಳಗೆ ನುಗ್ಗಿದ್ದು, ಆಸ್ಪತ್ರೆಯ ಪ್ರತಿ ಕೊಠಡಿಯಲ್ಲೂ ಕಾರ್ಯಾಚರಣೆ ನಡೆಸಿದ್ದಾರೆ. ಮಾತ್ರವಲ್ಲದೆ ಅಲ್ ಶಿಫಾ ಆಸ್ಪತ್ರೆಯೊಳಗೆ ಇಸ್ರೇಲ್ ಸೇನೆ ಬುಲ್ಡೋಜರ್ ಗಳನ್ನ ನುಗ್ಗಿಸಿದೆ ಎಂದು ಇಸ್ರೇಲ್ ಸೇನೆ ಆರೋಪಿಸಿದೆ. ಮತ್ತೊಂದೆಡೆ ಹಮಾಸ್ ಮುಖ್ಯ ಕಚೇರಿ ಆಸ್ಪತ್ರೆ ಅಡಿಯಲ್ಲಿನ ಸುರಂಗದಲ್ಲಿದೆ ಎನ್ನುತ್ತಿರುವ ಇಸ್ರೇಲ್ ಹಮಾಸ್ ಉಗ್ರರ ಅಡಗುತಾಣದ ವಿಡಿಯೋ ಬಿಡುಗಡೆ ಮಾಡಿದೆ. ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಉಗ್ರರು ಸಂಗ್ರಹಿಸಿದ್ದ ಗ್ರೆನೇಡ್, ಬಾಂಬ್, ನೆಲ ಬಾಂಬ್‌ಬುಲೆಟ್ ಪ್ರೂಫ್ ಜಾಕೆಟ್, ರಾಕೆಟ್ ಲಾಂಚರ್, ಗನ್ ಸೇರಿ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದಿದೆ.
ಇಸ್ರೇಲ್ ಸೇನಾ ಪ್ರಹಾರಕ್ಕೆ ಅಲ್ ಶಿಫಾ ಆಸ್ಪತ್ರೆಯಲ್ಲಿದ್ದ ನವಜಾತ ಶಿಶುಗಳು ಸ್ಥಿತಿ ಭಯಾನಕವಾಗಿದೆ. ಬಾಂಬ್ ಹಾಗೂ ಸೇನಾ ವಾಹನಗಳ ಸೈರನ್ ಸದ್ದಿಗೆ ಮಕ್ಕಳು ಬೆಚ್ಚಿ ಬಿದ್ದಿವೆ. ರೋಗಿಗಳು, ಸಿಬ್ಬಂದಿ ಮತ್ತು ಸ್ಥಳಾಂತರಗೊಂಡ ನಾಗರಿಕರು ಸೇರಿದಂತೆ 10,000ಕ್ಕೂ ಹೆಚ್ಚು ಜನ ಅಲ್ ಶಿಫಾದೊಳಗೆ ಇರಬಹುದು ಎನ್ನಲಾಗಿದೆ. ಆದರೆ ಆಸ್ಪತ್ರೆ ಸುತ್ತ ಇಸ್ರೇಲ್ ಪಡೆಗಳು ಸುತ್ತುವರಿದಿರುವ ಕಾರಣ ಅವರನ್ನ ಸ್ಥಳಾಂತರಿಸೋದು ಸಮಸ್ಯೆಯಾಗಿದೆ. ಅಲ್-ಶಿಫಾದ ಹೊರಗೆ ಎಲ್ಲೆಡೆ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆಯುತ್ತಿದ್ದು, ಪ್ರತಿ ಸೆಕೆಂಡಿಗೆ ಸ್ಫೋಟದ ಶಬ್ದ ಕೇಳುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಸಂಘರ್ಷ ಪೀಡಿತ ಪ್ಯಾಲೇಸ್ತೀನ್‌ನಲ್ಲಿ ತುರ್ತು ಅಗತ್ಯ ಪೂರೈಸಲು ಇಸ್ರೇಲ್ ಸರ್ಕಾರ 24 ಸಾವಿರ ಲೀಟರ್ ಇಂಧನ ಪೂರೈಸಲು ಒಪ್ಪಿಕೊಂಡಿದೆ. ಆಹಾರ, ನೀರು, ಔಷಧ ಮತ್ತಿತರ ತುರ್ತು ಅಗತ್ಯ ವಸ್ತುಗಳನ್ನು ಪೂರೈಸಲು ವಿಶ್ವಸಂಸ್ಥೆಯ ಟ್ರಕ್‌ಗಳಿಗೆ 24 ಸಾವಿರ ಲೀಟರ್ ಡೀಸೆಲ್ ಪೂರೈಸಿರುವುದಾಗಿ ಇಸ್ರೇಲ್ ಮಾಹಿತಿ ನೀಡಿದೆ.
ಇಸ್ರೇಲ್ ಸೇನೆ ಎದುರು ನೆಲ ಕಚ್ಚಿರುವ ಹಮಾಸ್ ಬಂಡುಕೋರರು ಸೋತು ಶರಣಾಗುವ ಹಂತಕ್ಕೆ ಬಂದಿದ್ದಾರೆ. ಆದ್ರೆ ಇಷ್ಟು ದಿನ ಹಮಾಸ್ ಹಿಂದೆ ನಿಂತು ಇಸ್ರೇಲ್ ವಿರುದ್ಧ ಗುಡುಗುತ್ತಿದ್ದ ನೆರೆ ರಾಷ್ಟ್ರಗಳು ಸದ್ದಿಲ್ಲದೆ ಹಿಂದೆ ಸರಿಯುತ್ತಿವೆ. ಆರಂಭದಿಂದಲೂ ಹಮಾಸ್ ಪರ ನಿಂತಿದ್ದ ಇರಾನ್ ಇದೀಗ ನೇರವಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸುವುದಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಅಮೆರಿಕ ಕೂಡ ಗಾಜಾ ಪಟ್ಟಿ ಆಕ್ರಮಿಸುವ ಇಸ್ರೇಲ್ ನಡೆಗೆ ವಿರೋಧ ವ್ಯಕ್ತಪಡಿಸಿದೆ. ಇದು ಇಸ್ರೇಲಿ ಜನರಿಗೆ ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿದೆ. ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯನ್ನು ಮರು ಆಕ್ರಮಿಸಿಕೊಳ್ಳುವುದು ಸರಿಯಾದ ಕೆಲಸವಲ್ಲ ಎಂದಿದೆ. ಇಸ್ರೇಲ್ ಮತ್ತು ಅಮೆರಿಕ ಒಳ್ಳೆಯ ಸ್ನೇಹಿತರು, ಹಾಗೆಂದ ಮಾತ್ರಕ್ಕೆ ನಾವು ಪ್ರತಿಯೊಂದು ವಿಷಯವನ್ನು ಒಪ್ಪಿಕೊಳ್ಳಬೇಕಾಗಿಲ್ಲ, ನೆತನ್ಯಾಹು ಮತ್ತು ಬೈಡೆನ್ ಯಾವಾಗಲೂ ಪ್ರತಿಯೊಂದು ವಿಷಯಕ್ಕೂ ಜೊತೆಯಾಗಿರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಒಟ್ಟಾರೆ ಗಾಜಾ ಮೇಲಿನ ಇಸ್ರೇಲ್ ದಾಳಿಗೆ ಖಂಡನೆ ವ್ಯಕ್ತಪಡಿಸಿದ್ದ ರಾಷ್ಟ್ರಗಳು ಇದೀಗ ಅಲ್ ಶಿಫಾ ಮೇಲಿನ ದಾಳಿಗೂ ವಿರೋಧ ವ್ಯಕ್ತಪಡಿಸಿವೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಯುದ್ಧೋತ್ಸಾಹವನ್ನ ಮುಂದುವರಿಸಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.