ಯೂತ್‌ ಪವರ್‌ಗೆ ಮಣಿದ ಸರ್ಕಾರ! – ಸೋಶಿಯಲ್ ಮೀಡಿಯಾ ಮೇಲಿನ ನಿಷೇಧ ಹಿಂಪಡೆದ ನೇಪಾಳ

ಯೂತ್‌ ಪವರ್‌ಗೆ ಮಣಿದ ಸರ್ಕಾರ! – ಸೋಶಿಯಲ್ ಮೀಡಿಯಾ ಮೇಲಿನ ನಿಷೇಧ ಹಿಂಪಡೆದ ನೇಪಾಳ

ನೇಪಾಳ ಸರ್ಕಾರ ಫೇಸ್‌ಬುಕ್‌, ಯೂಟ್ಯೂಬ್‌ ಸೇರಿದಂತೆ 26 ಸೋಶಿಯಲ್‌ ಮೀಡಿಯಾ ಆಪ್‌ ಬ್ಯಾನ್‌ ಮಾಡಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಅಲ್ಲಿನ ಯುವಕ, ಯುವತಿಯರು ಬೀದಿಗಿಳಿದು ಉಗ್ರ ಪ್ರತಿಭಟನೆ ನಡೆಸಿದ್ರು. ಇದೀಗ ಸರ್ಕಾರ ಜೇನ್‌ ಜೆಡ್‌ ಸಮುದಾಯದ ಪ್ರತಿಭಟನೆಗೆ ಮಣಿದಿದ್ದು, ಕಡೆಗೂ ಸೋಶಿಯಲ್ ಮೀಡಿಯಾಗಳ ಮೇಲಿನ ನಿಷೇಧ ಹಿಂಪಡೆದಿದೆ.

ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಹುದ್ದೆಗೆ ಎಲೆಕ್ಷನ್ – ಸಿಪಿ ರಾಧಾಕೃಷ್ಣನ್ Vs ಮಾಜಿ ನ್ಯಾ. ಬಿ ಸುದರ್ಶನ್ ರೆಡ್ಡಿ ನಡುವೆ ಫೈಟ್

ಸಾಮಾಜಿಕ ಜಾಲತಾಣದಲ್ಲಿ ಕೆಲ ಬಳಕೆದಾರರು ನಕಲಿ ಐಡಿಗಳನ್ನು ಸೃಷ್ಟಿಸಿ ಈ ವೇದಿಕೆಗಳನ್ನು ದ್ವೇಷ ಭಾಷಣ ಮತ್ತು ನಕಲಿ ಸುದ್ದಿಗಳನ್ನು ಹರಡುವುದು, ವಂಚನೆ ಮತ್ತು ಇತರ ಅಪರಾಧಗಳನ್ನು ಮಾಡಲು ಬಳಸುತ್ತಾರೆ. ಹೀಗಾಗಿ ನೋಂದಾಯಿಸದ ಸಾಮಾಜಿಕ ಮಾಧ್ಯಮವನ್ನು ನಿಷ್ಕ್ರಿಯಗೊಳಿಸುವಂತೆ ನೇಪಾಳದ ದೂರಸಂಪರ್ಕ ನಿಯಂತ್ರಕ ಪ್ರಾಧಿಕಾರಕ್ಕೆ ಸರ್ಕಾರಿ ಸೂಚನೆಯು ನಿರ್ದೇಶನ ನೀಡಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಿಗೆ ನಿಷೇಧ ಹೇರಲಾಗಿತ್ತು. ಈ ಬೆನ್ನಲ್ಲೇ ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಮೇಲಿನ ನಿಷೇಧ ಖಂಡಿಸಿ ನಡೆದ ಪ್ರತಿಭಟನೆ ನಡೆಸಿದ್ರು. ಕೆಲವೇ ಹೊತ್ತಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪರಿಣಾಮ 19 ಜನರು ಸಾವಿಗೀಡಾಗಿದ್ದಾರೆ. ಈ ಘಟನೆಯ ನಂತರ ಕೊನೆಗೂ ನೇಪಾಳ ಸರ್ಕಾರ ಸೋಶಿಯಲ್ ಮೀಡಿಯಾ ಮೇಲಿನ ಬ್ಯಾನ್ ಹಿಂಪಡೆದಿದೆ. ನೇಪಾಳದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪೃಥ್ವಿ ಸುಬ್ಬ ಗುರುಂಗ್ ಸರ್ಕಾರ ಈ ನಿರ್ಧಾರವನ್ನು ಘೋಷಣೆ ಮಾಡಿದ್ದಲ್ಲದೇ, ಪ್ರತಿಭಟನೆಗಳನ್ನು ಹಿಂತೆಗೆದುಕೊಳ್ಳುವಂತೆ ಜೇನ್‌ ಝಡ್‌ಗೆ ಮನವಿ ಮಾಡಿದೆ ಎಂದು ಅವರು ಹೇಳಿದರು.

ಜೇನ್ ಜೆಡ್ ತಲೆಮಾರಿನ(ಜೇನ್ ಜೆಡ್‌ ಎಂದರೆ 1996ರಿಂದ 2010ರ ನಡುವೆ ಜನಿಸಿದ ಸಮುದಾಯವಾಗಿದೆ.)  ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 19ಜನ ಸಾವಿಗೀಡಾದ ಹಿನ್ನೆಲೆ ಸರ್ಕಾರ ತಡರಾತ್ರಿ ತುರ್ತಾಗಿ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಪೊಲೀಸರು ಹಾಗೂ ಪ್ರತಿಭಟನಾಕಾರರ ಸಂಘರ್ಷದದಲ್ಲಿ ಒಟ್ಟು 19 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಧ್ಯರಾತ್ರಿಯೇ ತುರ್ತು ಸಚಿವ ಸಂಪುಟ ಸಭೆ ಕರೆದ ನೇಪಾಳ ಸರ್ಕಾರ, ಜನರೇಷನ್‌ ಜೆಡ್ ತಲೆಮಾರಿನ ಒತ್ತಾಯಕ್ಕೆ ಮಣಿದು ಸೋಶಿಯಲ್ ಮೀಡಿಯಾ ಮೇಲಿನ ನಿಷೇಧವನ್ನು ವಾಪಸ್ ಪಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾ ಮೇಲೆ ನಿಷೇಧ ಹೇರಿರುವ, ಸರ್ಕಾರದ ಹಿಂದಿನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಗೌರಂಗ್ ಪ್ರತಿಭಟನೆ ನಿಲ್ಲಿಸುವಂತೆ ಕರೆ ನೀಡಿದರು.

Shwetha M