ಕರ್ಫ್ಯೂ, ನಿಷೇಧಾಜ್ಞೆ ವಾಪಸ್ – ಸಹಜ ಸ್ಥಿತಿಯತ್ತ ಮರುಳುತ್ತಿರೋ ನೇಪಾಳ

ಗಲಭೆಯ ನಂತ್ರ ನೇಪಾಳ ಸಹಜ ಸ್ಥಿತಿಯತ್ತ ಮರುಳುತ್ತಿದೆ. ಕರ್ಫ್ಯೂ ಮತ್ತು ನಿಷೇಧಾಜ್ಞೆಗಳನ್ನು ತೆಗೆದುಹಾಕಲಾಗಿದ್ದು, ಸ್ವಚ್ಛತೆ ಕಾರ್ಯಗಳು ನಡೆಯುತ್ತಿದೆ. ನೇಪಾಳ ಮೊದಲ ಮಹಿಳಾ ಪ್ರಧಾನಿಯಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಸ್ವೀಕರಿಸಿದ ನಂತರ ನೇಪಾಳ ಹಿಡಿತಕ್ಕೆ ಸಿಗುತ್ತಿದೆ. ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಇಂದು ಬೆಳಿಗ್ಗೆ 5 ಗಂಟೆಯಿಂದ ಕರ್ಫ್ಯೂ ಮತ್ತು ನಿಷೇಧಾಜ್ಞೆಗಳನ್ನು ತೆಗೆದುಹಾಕಲಾಗಿದೆ. ಮಧ್ಯಂತರ ಸರ್ಕಾರ ರಚನೆಯಾದ ನಂತರ, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ಆದರೆ, ನೇಪಾಳದ ಬೀದಿಗಳಲ್ಲಿ ಸೈನ್ಯ ಒಂದಷ್ಟು ದಿನಗಳ ಕಾಲ ಇರಲಿದೆ.
ಸುಶೀಲಾ ಕರ್ಕಿ ಪ್ರಧಾನಿಯಾದ ನಂತರ, ನೇಪಾಳದ ಜನರು ಭ್ರಷ್ಟಾಚಾರ ಮುಕ್ತ ಆಡಳಿತದ ನಿರೀಕ್ಷೆ ಮಾತ್ರವಲ್ಲದೇ, ಈ ಹಿಂದೆ ಭ್ರಷ್ಟಾಚಾರ ಆರೋಪಗಳಲ್ಲಿ ಭಾಗಿಯಾಗಿರುವ ಮಾಜಿ ಪ್ರಧಾನಿ ಸೇರಿದಂತೆ ಎಲ್ಲಾ ಸಚಿವರ ಆಸ್ತಿಯನ್ನು ತನಿಖೆ ಮಾಡುವುದರ ಜೊತೆಗೆ ನೇಪಾಳವನ್ನು ಭ್ರಷ್ಟಾಚಾರ ಮುಕ್ತವನ್ನಾಗಿಸುವ ಭರವಸೆ ನೀಡಿದ್ದಾರೆ.
ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೆ ಏರಿಕೆ
ನೇಪಾಳದಲ್ಲಿ ಜೆನ್ ಝಡ್ ಜನರು ನಡೆಸಿದ ಪ್ರತಿಭಟನೆಗಳಲ್ಲಿ ನಡೆದ ಹಿಂಸಾಚಾರದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇದರಲ್ಲಿ 21 ಪ್ರತಿಭಟನಾಕಾರರು, 9 ಕೈದಿಗಳು, 3 ಪೊಲೀಸರು ಮತ್ತು 18 ಇತರ ಜನರು ಸೇರಿದ್ದಾರೆ. ಇನ್ನೊಂದು ಮುಖ್ಯ ಸಂಗತಿ ಅಂದ್ರೆ, ಈ ಹಿಂಸಾಚಾರದಿಂದಾಗಿ ನೇಪಾಳದ ಹೋಟೆಲ್ ಉದ್ಯಮದ ಮೇಲೆ ಅತಿ ದೊಡ್ಡ ಪರಿಣಾಮ ಬೀರಿದ್ದು, ವರದಿಗಳ ಪ್ರಕಾರ, ನೂರಾರು ಹೋಟೆಲ್‌ಗಳಲ್ಲಿ ನಡೆದ ವಿಧ್ವಂಸಕ ಕೃತ್ಯ, ಲೂಟಿ ಮತ್ತು ಬೆಂಕಿ ಹಚ್ಚುವಿಕೆ ಘಟನೆಗಳಿಂದಾಗಿ ಹೋಟೆಲ್ ಉದ್ಯಮವು ಸುಮಾರು 2500 ಕೋಟಿ ನೇಪಾಳಿ ರೂಪಾಯಿಗಳಿಗೂ ಹೆಚ್ಚು ನಷ್ಟವನ್ನು ಅನುಭವಿಸಿದೆ ಎಂದು ತಿಳಿದು ಬಂದಿದೆ.
ಸಾರ್ವಜನಿಕರು ಸಹಕರಿಸುವಂತೆ ಖಾಕಿ ಮನವಿ
ನೇಪಾಳದಾದ್ಯಂತ ನಡೆದ ಹಿಂಸಾಚಾರ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಘಟನೆಗಳ ಬಗ್ಗೆ ನೇಪಾಳ ಪೊಲೀಸರು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಹಿಂಸಾಚಾರ ಘಟನೆಗಳಿಗೆ ಸಂಬಂಧಿಸಿದ ವೀಡಿಯೊಗಳು ಅಥವಾ ಸಾಕ್ಷಿಗಳನ್ನು ಹೊಂದಿರುವವರು ಅವುಗಳನ್ನು ನಮ್ಮ ಜೊತೆ ಹಂಚಿಕೊಳ್ಳಬೇಕು, ಇದರಿಂದ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕಾಗಿ, ಪೊಲೀಸರು ಅಧಿಕೃತ ಇಮೇಲ್ ಅನ್ನು ಬಿಡುಗಡೆ ಮಾಡಿದ್ದು, ಅಂತಹ ಎಲ್ಲಾ ವೀಡಿಯೊಗಳನ್ನು ಕಳುಹಿಸಲು ಮನವಿ ಮಾಡಿದ್ದಾರೆ.
ಹೊಸ ಪ್ರಧಾನಿಗೆ ಸಾಕಷ್ಟು ಸವಾಲುಗಳು
ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳು, ಹಿಂಸಾಚಾರಗಳು ಈಗ ಹತೋಟಿಗೆ ಬಂದಿದ್ದರೂ ಸಹ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ ಅನ್ನೋದು ಸತ್ಯ. ಹೀಗಾಗಿ ನೇಪಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವುದು ಕೂಡ ನೂತನ ಪ್ರಧಾನಿಯ ಮುಂದಿರುವ ಕಠಿಣ ಸವಾಲಾಗಿದೆ. ಈ ಪ್ರತಿಭಟನಾ ಸಮಯದಲ್ಲಿ ಕನಿಷ್ಠ 11,505 ಕೈದಿಗಳು ವಿವಿಧ ಜೈಲುಗಳಿಂದ ತಪ್ಪಿಸಿಕೊಂಡಿದ್ದಾರೆ. ಜೈಲಿನಿಂದ ಪರಾರಿಯಾಗಿದ್ದ ಸುಮಾರು 1,459 ಕೈದಿಗಳನ್ನು ಭದ್ರತಾ ಪಡೆಗಳು ಮರುಬಂಧಿಸಿದ್ದಾರೆ. ಆದರೆ ಗಮನಾರ್ಹ ಸಂಖ್ಯೆಯ ಕೈದಿಗಳು ಹೊರಗಿರುವುದರಿಂದ, ಅವರು ದೇಶದ ಕಾನೂನು ಸುವ್ಯವಸ್ಥೆಗೆ ಗಂಭೀರ ಸವಾಲನ್ನು ಒಡ್ಡುವ ಸಾಧ್ಯತೆ ಇದೆ. ಹೀಗಾಗಿ ಅಂತಹ ಕೈದಿಗಳನ್ನು ಬಂಧಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವುದು ಪೊಲೀಸರು ಮತ್ತು ಭದ್ರತಾ ಪಡೆಗಳಿಗೆ ಇರುವ ದೊಡ್ಡ ತಲೆನೋವಾಗಿದೆ.ಇನ್ನೂ ಗಲಭೆಯಿಂದ ನಗರಗಳು ಕೊಂಪೆಯಂತೆ ಆಗಿತ್ತು, ಅದ್ದನ್ನ ಸ್ವಚ್ಛ ಮಾಡೋ ಕೆಲಸದಲ್ಲಿ ನೇಪಾಳದ ನಾಗರಿಕರು ತೊಡಗಿದ್ದಾರೆ.

ನೋಡಿರಿ

