ನೇಪಾಳದಲ್ಲಿ ಮೃತರ ಸಂಖ್ಯೆ 903ಕ್ಕೆ ಏರಿಕೆ- ಶವಾಗಾರಗಳಲ್ಲಿ ಸ್ಥಳಾವಕಾಶದ ಕೊರತೆ

ನೇಪಾಳ–ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದ ಬಳಿಕ ಮೃತರ ಸಂಖ್ಯೆ 903ಕ್ಕೆ ಏರಿಕೆಯಾಗಿದೆ. ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರದ ಸೋಮವಾರದ ಅಪ್ಡೇಟ್ ಪ್ರಕಾರ, 4,247 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.
ಆಗಸ್ಟ್ 26ರಂದು ಹಿಮನದಿ ಕುಸಿತ ಮತ್ತು ಭಾರಿ ನೀರಿನ ಹರಿವಿನಿಂದ ಭೋಟೆ ಕೋಶಿ ಸೇರಿದಂತೆ ಹಲವು ನದಿಗಳಲ್ಲಿ ಏಕಾಏಕಿ ಪ್ರವಾಹ ಉಂಟಾಗಿ, ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಭಾರಿ ಹಾನಿಯಾಗಿದೆ. ಸುಮಾರು 10,451 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಲ್ದ್ವಾನಿಯಲ್ಲಿ ಖರ್ಗೆ ಶುದ್ಧೀಕರಣ ವಿವಾದ – ರಾಹುಲ್ ಗಾಂಧಿ ವಿರುದ್ಧ FIR
ಇದೀಗ ರಕ್ಷಣಾ ಕಾರ್ಯಾಚರಣೆಯ ಪ್ರಮುಖ ಗಮನ ಜಲವಿದ್ಯುತ್ ಯೋಜನೆಗಳ ಸುರಂಗಗಳತ್ತ ತಿರುಗಿದೆ. ಸುಮಾರು 900 ಮಂದಿ ವಿವಿಧ ಹೈಡ್ರೋಪವರ್ ಸುರಂಗಗಳಲ್ಲಿ ಸಿಲುಕಿರುವ ಶಂಕೆಯಿದ್ದು, ಮಣ್ಣು ಮತ್ತು ಅವಶೇಷಗಳನ್ನು ತೆರವುಗೊಳಿಸಿ ರಕ್ಷಿಸಲು ನೇಪಾಳ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.
ಭಾರತ ಮತ್ತು ಚೀನಾದ ತಜ್ಞರೂ ರಕ್ಷಣಾ ಪ್ರಯತ್ನಗಳಿಗೆ ನೆರವಾಗುತ್ತಿದ್ದಾರೆ. ಚೀನಾದ ಟಿಬೆಟ್ ಭಾಗದಲ್ಲಿ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ನೇಪಾಳ ಮತ್ತು ಟಿಬೆಟ್ ಸೇರಿ ಒಟ್ಟು ಸಾವಿನ ಸಂಖ್ಯೆ 919ಕ್ಕೆ ತಲುಪಿದೆ.
ರಾಷ್ಟ್ರೀಯ ವಿಪತ್ತು ಅಪಾಯ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ಪ್ರಕಾರ, ಚಿತ್ವಾನ್‌ನಿಂದ 272, ನವಲ್ಪರಾಸಿ ಪೂರ್ವದಿಂದ 207, ನವಲ್ಪರಾಸಿ ಪಶ್ಚಿಮದಿಂದ 151 ಮತ್ತು ಗೂರ್ಖಾ ಜಿಲ್ಲೆಗಳಿಂದ 62 ಮೃತದೇಹಗಳನ್ನು ಹೊರತೆಗೆಯಲಾಗಿದೆ. ನುವಾಕೋಟ್‌ನಿಂದ 95, ಧಾಡಿಂಗ್‌ನಿಂದ 55, ತನಾಹುದಿಂದ 37 ಮತ್ತು ರಸುವಾದಿಂದ 24 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ನೇಪಾಳದಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಶವಾಗಾರಗಳಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದೆ. ಭವಿಷ್ಯದ ಗುರುತಿಸುವಿಕೆಗಾಗಿ ಗುರುತಿಸಲಾಗದ ಮತ್ತು ಹಕ್ಕುದಾರರಿಲ್ಲದ ಶವಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ಹೂಳಲು ಅಧಿಕಾರಿಗಳು ಈಗ ನಿರ್ಧರಿಸಿದ್ದಾರೆ.

ನೋಡಿರಿ

