ಕಥೆ ಅಪೂರ್ಣ, ದಿಢೀರ್ ಸೀರಿಯಲ್ ಮುಕ್ತಾಯ – ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವ ಮೊದಲೇ ಫೇಮಸ್ ಧಾರಾವಾಹಿ ಎಂಡ್!

ಕಥೆ ಅಪೂರ್ಣ, ದಿಢೀರ್ ಸೀರಿಯಲ್ ಮುಕ್ತಾಯ – ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವ ಮೊದಲೇ ಫೇಮಸ್ ಧಾರಾವಾಹಿ ಎಂಡ್!

ವೀಕ್ಷಕರ ಮನಗೆದ್ದಿದ್ದ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ನೀನಾದೆ ನಾ ಧಾರಾವಾಹಿ ಇದೀಗ ದಿಢೀರ್ ಆಗಿ ಮುಕ್ತಾಯಗೊಂಡಿದೆ. ನೀನಾದೆ ನಾ ಧಾರಾವಾಹಿ ಏಕಾಏಕಿ ಅಂತ್ಯ ಕಂಡಿದ್ದು ವೀಕ್ಷಕರಿಗೆ ನಿರಾಶೆಯಾಗಿದೆ. ಈ ಹಿಂದೆ ಈ ಧಾರಾವಾಹಿಯ ಸೀಸನ್‌ 1 ಶುರು ಆಗಿತ್ತು. ಆಮೇಲೆ ಸೀಸನ್‌ 2 ಎಂದು ವಿಕ್ರಮ್‌, ವೇದಾ ಜೊತೆಗೆ ಹೊಸ ಕಥೆ ಶುರುವಾಗಿತ್ತು. ಈಗ ಈ ಸೀಸನ್‌ ಕೂಡ ಯಾವ ಪ್ರಶ್ನೆಗಳಿಗೂ ಉತ್ತರ ಕೊಡದೇ ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಸ್ನೇಹಾ ಡ್ರಾಮಾ ಕಡೆಗೂ ಬಯಲು.. 1 ಸುಳ್ಳು.. ಕಂಠಿಯಿಂದ ದೂರ? – ಮನೆಯಿಂದ ಆಚೆ ಹಾಕ್ತಾನಾ ಶ್ರೀ?

ಚಿಕ್ಕ ವಯಸ್ಸಿನಲ್ಲೇ ಬಿಟ್ಟು ಹೋದ ತಾಯಿ, ಈಗ ಮತ್ತೆ ವಿಕ್ರಮ್‌ ಮನೆಗೆ ಬಂದರೂ ಕೂಡ ಅವನು ಇನ್ನೂ ಅವಳನ್ನು ಕ್ಷಮಿಸಿಲ್ಲ. ಇನ್ನೊಂದು ಕಡೆ ಕುಡಿದು ಮತ್ತಿನಲ್ಲಿ ವೇದಾಗೆ ವಿಕ್ರಮ್ ತಾಳಿ ಕಟ್ಟಿದ್ದಾನೆ. ಅವಳು ಅವನನ್ನು ಕ್ಷಮಿಸಿದರೂ ಕೂಡ ಕಥೆಗೆ ಕ್ಲಾರಿಟಿ ಸಿಕ್ಕಿಲ್ಲ. ವಿಕ್ರಮ್‌ ತಂದೆ, ಅಣ್ಣ, ಅಜ್ಜ ಎಲ್ಲರೂ ರೌಡಿಗಳೇ. ಅವರನ್ನೆಲ್ಲಾ ರೌಡಿಸಂನಿಂದ ಹೊರಗಡೆ ತರಬೇಕು ಅಂತ ವೇದಾ ಕನಸು ಕಂಡಿದ್ದಳು. ಅದು ಕೂಡ ನೆರವೇರಿಲ್ಲ. ಇನ್ನು ವಿಕ್ರಮ್‌ ತಂದೆಗೆ ಅವನ ತಾಯಿ ಕಂಡರೆ ಆಗೋದಿಲ್ಲ. ಇವರಿಬ್ಬರು ಒಂದಾಗಿಲ್ಲ. ಇಷ್ಟೆಲ್ಲಾ ಪ್ರಶ್ನೆಗಳು ವೀಕ್ಷಕರನ್ನು ಕಾಡುತ್ತಿರುವಾಗಲೇ ಧಾರಾವಾಹಿಯನ್ನು ಅಂತ್ಯ ಮಾಡಲಾಗಿದೆ.

ಪ್ರೀತಮ್ ಶೆಟ್ಟಿ ‘ಪಿಂಗಾರ ಪ್ರೊಡಕ್ಷನ್’ ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಈ ಧಾರಾವಾಗಿಯ ಹೊಸ ಕಥೆ ತುಳುನಾಡಿನಲ್ಲಿ ಆರಂಭವಾಗಿತ್ತು. ನಾಯಕ ವಿಕ್ರಂ ದಂಧೆ ನಡೆಸುತ್ತಾ, ಗೂಂಡಾಗಿರಿ ಮಾಡಿಕೊಂಡು ಕುಡ್ಲದ ಕರುಣಾಕರ್ ಶೆಟ್ಟಿ ಎಂಬ ಡಾನ್‌ನ ಬಲಗೈ ಬಂಟನಾಗಿರ್ತಾನೆ. ಕಥಾ ನಾಯಕಿ ವೇದಾ ಸಂಪ್ರದಾಯಸ್ಥ ಮನೆತನದ ಮಗಳಾಗಿದ್ದು, ಉಡುಪಿ ಕೃಷ್ಣನ ಭಕ್ತೆಯಾಗಿರ್ತಾಳೆ. ಜೊತೆಗೆ ಬೇರೆ ಬೇರೆ ರೀತಿಯ ವಸ್ತ್ರಗಳಿರುವ ಕಾಸ್ಟ್ಯೂಮ್ ಅಂಗಡಿಯನ್ನು ಹೊಂದಿರುತ್ತಾಳೆ. ಒಂದ್ಕಡೆ ರೌಡಿಯಾಗಿದ್ರೂ ಒಳ್ಳೇದನ್ನೆ ಮಾಡೋ ವಿಕ್ರಂ, ಇನ್ನೊಂದ್ಕಡೆ ನೇರ ನಡೆಯನ್ನು ಹೊಂದಿದ್ದು ಯಾವ ಸವಾಲಿಗೂ ಸೈ ಅನ್ನೋ ವೇದಾ. ಇವರಿಬ್ಬರು ಹೇಗೆ ಒಂದಾಗ್ತಾರೆ? ಅನ್ನೋ ಕುತೂಹಲವೇ ಧಾರಾವಾಹಿಯ ಮುಖ್ಯ ಕಥೆಯಾಗಿತ್ತು.

ಈ ಹಿಂದಿನ ಧಾರಾವಾಹಿ ಕಥೆಯ ಬಗ್ಗೆ ಹೇಳುವುದಾದರೆ, ನಾಯಕ ವಿಕ್ರಂ ರೌಡಿಸಂ ಮಾಡುತ್ತಿದ್ದ. ಬಳಿಕ ವೇದಾಳನ್ನು ವರಿಸುತ್ತಾನೆ ವಿಕ್ರಂ. ಬಳಿಕ ವಿಕ್ರಂಗೆ ಕೋಟೆ ರಾಜೇಂದ್ರನ ಅಸಲಿ ಮುಖವನ್ನು ವೇದಾ ರಿವೀಲ್‌ ಮಾಡುತ್ತಾಳೆ, ಇಬ್ಬರ ಮಧ್ಯೆ ಪ್ರೀತಿ ಮೂಡಿ ದಾಂಪತ್ಯ ಜೀವನವನ್ನು ನಡೆಸುತ್ತಾರೆ. ಆದರೆ ಇದಾದ ಬಳಿಕ ಮೊದಲಿನಿಂದಲೂ ಪ್ರೀತಂ ಎನ್ನುವ ಲಾಯರ್ ವೇದಾಳನ್ನು ಮದುವೆಯಾಗಬೇಕು ಅಂತ ಆಸೆ ಪಡುತ್ತಿದ್ದನು. ಆದರೆ ವಿಕ್ರಮ್, ವೇದಾ ಮದುವೆ ನಡೆದಿತ್ತು. ವೇದಾ ಮದುವೆಯಾದ ಮೇಲೂ ಕೂಡ ಅವಳನ್ನು ಪಡೆದುಕೊಳ್ಳಬೇಕು ಅಂತ ಪ್ರೀತಂ ಅಂದುಕೊಂಡಿದ್ದ. ವೇದಾ ಬೆಟ್ಟದ ಮೇಲಿನಿಂದ ಬಿದ್ದು ಪೆಟ್ಟಾಗಿದ್ದರಿಂದ, ನೆನಪಿನ ಶಕ್ತಿ ಕಳೆದುಕೊಂಡಳು. ಆಗ ವೇದಾಳಿಗೆ ನಾನೇ ನಿನ್ನ ಗಂಡ ಅಂತ ಪ್ರೀತಂ ಸುಳ್ಳು ಹೇಳುತ್ತಾನೆ. ಹೀಗೆ ಸುಳ್ಳು ಹೇಳಿ ಮತ್ತೆ ವೇದಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳೋದು ಅವನ ಹುನ್ನಾರ ಆಗಿತ್ತು. ಇದಾದ ಬಳಿಕ ವೇದಾಗೆ ಮತ್ತೆ ಹಳೆಯ ನೆನಪು ಮರುಕಳಿಸಿ ವಿಕ್ರಂ ವೇದಾ ಒಂದಾಗುತ್ತಾರೆ. ಅಲ್ಲಿಗೆ ಮೊದಲಿನ ಧಾರಾವಾಹಿ ಅಂತ್ಯಗೊಂಡಿತ್ತು.

ವಿಕ್ರಮ್‌ ಪಾತ್ರದಲ್ಲಿ ದಿಲೀಪ್‌ ಶೆಟ್ಟಿ, ವೇದಾ ಪಾತ್ರದಲ್ಲಿ ಖುಷಿ ಶಿವು, ಸ್ಪಂದನಾ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದರು. ಇದೀಗ ಧಾರಾವಾಹಿ ದಿಢೀರ್ ಅಂತ್ಯಕಂಡಿದ್ದು ಏಕೆ ಎಂಬ ಬಗ್ಗೆ ಸೀರಿಯಲ್ ತಂಡ ಸ್ಪಷ್ಟನೆ ನೀಡಿಲ್ಲ.

Sulekha