ಭಾರತದ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿ ರಿಲೀಸ್
ಟಾಪ್ 10 ಪಟ್ಟಿಯಲ್ಲಿ ಡಿಕೆಶಿ ಸೇರಿ ನಾಲ್ವರಿಗೆ ಸ್ಥಾನ

ಭಾರತದ ಅತ್ಯಂತ ಶ್ರೀಮಂತ ಹಾಗೂ ಬಡ ಶಾಸಕರು ಯಾರು ಎನ್ನುವ ವರದಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿದೆ. ಎಡಿಆರ್ ವರದಿಯ ಪ್ರಕಾರ, ಮುಂಬೈನ ಘಾಟ್ಕೋಪರ್ ಪೂರ್ವದ ಬಿಜೆಪಿ ಶಾಸಕ ಪರಾಗ್ ಶಾ ಭಾರತದ ಅತ್ಯಂತ ಶ್ರೀಮಂತ ಶಾಸಕ. ಇವರ ಆಸ್ತಿಯ ಮೌಲ್ಯ ಸುಮಾರು 3400 ಕೋಟಿ ರೂ. ಅವರ ನಂತರ ಕರ್ನಾಟಕದ ಕನಕಪುರದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ಆಸ್ತಿ 1,413 ಕೋಟಿ ರೂ.ಗಳಿಗಿಂತ ಹೆಚ್ಚಿದೆ. ಕರ್ನಾಟಕದ ಸ್ವತಂತ್ರ ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಅವರ ಆಸ್ತಿ 1,267 ಕೋಟಿ ರೂ. ಕರ್ನಾಟಕದ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಅವರ ಆಸ್ತಿ 1,156 ಕೋಟಿ ರೂ. ಇದೆ. ವಿಶೇಷವೇನೆಂದರೆ ಟಾಪ್ 10ರಲ್ಲಿ ಕರ್ನಾಟಕದ ನಾಲ್ವರು ಶಾಸಕರು ಸ್ಥಾನ ಪಡೆದಿದ್ದಾರೆ.
ಎಡಿಆರ್ ವರದಿಯು ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮೊದಲು ಸಲ್ಲಿಸಿದ ಅಫಿಡವಿಟ್‌ಗಳಲ್ಲಿರುವ ಮಾಹಿತಿಯನ್ನೇ ಇದು ಹೇಳುತ್ತದೆ. ಈ ಸಂಶೋಧನೆಯು 28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 4092 ಶಾಸಕರನ್ನು ಒಳಗೊಂಡಿದೆ. ಈ ವರದಿಯ ಪ್ರಕಾರ, ಬಿಜೆಪಿಯ ಪರಾಗ್ ಶಾ ಅತ್ಯಂತ ಶ್ರೀಮಂತ ಶಾಸಕ. ಪಶ್ಚಿಮ ಬಂಗಾಳದ ನಿರ್ಮಲ್ ಕುಮಾರ್ ಧಾರಾ ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ. ಅವರ ಬಳಿ ಕೇವಲ 1700 ರೂ. ಇದೆ. ರ್ಮಲ್ ಕುಮಾರ್ ಧಾರಾ ಪಶ್ಚಿಮ ಬಂಗಾಳದ ಇಂಡಸ್ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.
ಕರ್ನಾಟಕದ ಶಾಸಕರು ಒಟ್ಟಾರೆಯಾಗಿ 14,179 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ಮಹಾರಾಷ್ಟ್ರ ಶಾಸಕರ ಆಸ್ತಿ 12,424 ಕೋಟಿ ರೂ. ಆಂಧ್ರಪ್ರದೇಶದ ಶಾಸಕರು 11,323 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ರಾಜ್ಯಗಳಲ್ಲಿ ತ್ರಿಪುರ, ಮಣಿಪುರ ಮತ್ತು ಪುದುಚೇರಿ ಸೇರಿವೆ.
ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಹಲವು ದೊಡ್ಡ ಹೆಸರುಗಳಿವೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆಸ್ತಿ 931 ಕೋಟಿ ರೂ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಆಸ್ತಿ 757 ಕೋಟಿ ರೂ. ಇದೆ.
ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ ಶಾಸಕರು ಅತಿ ಹೆಚ್ಚು ಆಸ್ತಿ ಹೊಂದಿದ್ದಾರೆ. ಅವರ ಬಳಿ 26,270 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಕಾಂಗ್ರೆಸ್ ಶಾಸಕರು 17,357 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಟಿಡಿಪಿ ಶಾಸಕರು 9,108 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಿವಸೇನಾ ಶಾಸಕರು 1,758 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಎಎಪಿ ಶಾಸಕರು ಸರಾಸರಿ ಪ್ರತಿ ಶಾಸಕರ ಆಸ್ತಿ 7.33 ಕೋಟಿ ರೂ. ಇದೆ.