ಮೋದಿ ಗದ್ದುಗೆಗೆ ಮಂತ್ರಿಗಿರಿ ಮುಳ್ಳು – ಸಚಿವ ಪಟ್ಟಕ್ಕಾಗಿ ಸಂಸದರ ರೇಸ್
ಕರ್ನಾಟಕದಿಂದ ಯಾರಾಗ್ತಾರಾ ಮಿನಿಸ್ಟರ್

ನರೇಂದ್ರ ಮೋದಿ 3.ಓ ಸರ್ಕಾರ ರಚನೆಗೆ ಕೌಂಟ್ಡೌನ್ ಶುರುವಾಗಿದೆ. ದೋಸ್ತಿಗಳ ಬಲದೊಂದಿಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರೋಕೆ ನಮೋ ರೆಡಿಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮ್ಯಾಜಿಕ್ ನಂಬರ್ ತಲುಪಲು ಆಗದಿದ್ರೂ ಮಿತ್ರಪಕ್ಷಗಳ ಬೆಂಬಲದೊಂದಿದೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಭಾನುವಾರ ಅಂದ್ರೆ ಜೂನ್ 9ರ ಸಂಜೆ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದ್ರೆ 2014 ಮತ್ತು 2019ರಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. ಹೀಗಾಗಿ ಸರ್ಕಾರ ನಡೆಸೋಕೆ ಯಾವುದೇ ಸಮಸ್ಯೆ ಆಗಿರ್ಲಿಲ್ಲ. ಬಟ್ ಈ ಸಲ ಸ್ಪಷ್ಟ ಬಹುಮತವಿಲ್ಲದ ಕಾರಣ ಪ್ರತೀ ಹೆಜ್ಜೆ ಇಡಬೇಕಂದ್ರೂ ಮಿತ್ರರ ಒಪ್ಪಿಗೆ ಪಡೆದೇ ಸಾಗಬೇಕಿದೆ. ಹೀಗಾಗಿ ಭಾನುವಾರ ಪ್ರಧಾನಿ ಗದ್ದುಗೆ ಏರಿದ್ರೂ ಸಾಲು ಸಾಲು ಸವಾಲುಗಳಿವೆ. ಅದ್ರಲ್ಲಿ ಪ್ರಮುಖವಾಗಿ ಇರೋದೇ ಸಚಿವರಿಗಿ ಹಂಚಿಕೆ. ಭಾನುವಾರ ಸಂಜೆಯಿಂದಲೇ ಭಾರತದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪರ್ವ ಶುರುವಾಗಲಿದೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್, ಜೆಡಿಎಸ್‌ನಿಂದ ಹೆಚ್‌ಡಿ ಕುಮಾರಸ್ವಾಮಿ ಬೆಂಬಲದೊಂದಿಗೆ ಮೋದಿ ಆಡಳಿತ ಶುರುವಾಗಲಿದೆ. ಆದರೆ, ಸರ್ಕಾರ ರಚನೆಗೂ ಮುನ್ನವೇ ಸಂಪುಟ ಸೇರಲು ಸಚಿವಾಕಾಂಕ್ಷಿಗಳು ಲಾಬಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಚಿವ ಸಂಪುಟ ಸೇರಲು ಸಂಸದರ ದಂಡೇ ರೇಸ್‌ನಲ್ಲಿದೆ. ಮಿತ್ರಪಕ್ಷಗಳು ಬೇಡಿಕೆ ಮೇಲೆ ಬೇಡಿಕೆ ಇಡುತ್ತಿದ್ದರೆ, ಬಿಜೆಪಿ ಸಂಸದರು ಕೂಡ ಭಾರೀ ಪೈಪೋಟಿ ನಡೆಸುತ್ತಿದ್ದಾರೆ.
ಸಂಭಾವ್ಯ ಸಚಿವರು!
ಕಳೆದ ಬಾರಿ ವಿದೇಶಾಂಗ ಖಾತೆ ನಿರ್ವಹಿಸಿದ್ದ ಎಸ್ ಜೈಶಂಕರ್‌ಗೆ ರಾಜ್ಯಸಭಾ ಕೋಟಾದಡಿ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅಮಿತ್ ಶಾ, ನಿತಿನ್ ಗಡ್ಕರಿಗೆ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ. ಇದರ ಜೊತೆಗೆ ಲಖನೌದಿಂದ ಸ್ಪರ್ಧಿಸಿ ಗೆದ್ದಿರುವ ರಾಜನಾಥ್ ಸಿಂಗ್‌ಗೆ ಮತ್ತು ಅಮೇಠಿಯಿಂದ ಸ್ಪರ್ಧಿಸಿ ಸೋತಿರುವ ಸ್ಮೃತಿ ಇರಾನಿಗೆ ಈ ಬಾರಿಯೂ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ಅನುರಾಗ್ ಠಾಕೂರ್, ಪಿಯೂಷ್ ಗೋಯಲ್, ರಾಜಸ್ಥಾನದಿಂದ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಭೂಪೇಂದ್ರ ಯಾದವ್ಗೂ ಪಟ್ಟ ಸಿಗಬಹುದು. ದೆಹಲಿಯಿಂದ ಬಾನ್ಸೂರಿ ಸ್ವರಾಜ್, ರಾಂವೀರ್ ಸಿಂಗ್ ಬಿಧುರಿ, ಬಿಹಾರದಿಂದ ರಾಜೀವ್ ಪ್ರತಾಪ್ ರೂಡಿ ರೇಸ್‌ನಲ್ಲಿದ್ದಾರೆ. ಇನ್ನು ಮಿತ್ರಪಕ್ಷಗಳಲ್ಲಿ ಯಾರಿಗೆ ಅವಕಾಶ ಸಿಗಬಹುದು ಅನ್ನೋದನ್ನ ನೋಡೋದಾದ್ರೆ ಬಿಹಾರದಿಂದ ಎಲ್ಜೆಪಿಯ ಚಿರಾಗ್ ಪಾಸ್ವಾನ್, ಹಾಗೇ ಜೆಡಿಯುನ ಲಲ್ಲನ್ ಸಿಂಗ್, ಉತ್ತರ ಪ್ರದೇಶದ ಆಪ್ನಾದಳ್ ಪಕ್ಷದಿಂದ ಅನುಪ್ರಿಯಾ ಪಟೇಲ್, ಬಿಹಾರದ ಹೆಚ್ಎಎಂನಿಂದ ಜೀತನ್ ರಾಮ್ ಮಾಂಝಿ ಲಿಸ್ಟ್ನಲ್ಲಿದ್ದಾರೆ.
ಹಾಗೇ ಕರ್ನಾಟಕದಿಂದಲೂ ಹಲವರು ರೇಸ್‌ನಲ್ಲಿದ್ದಾರೆ. ಮೋದಿ ಸಂಪುಟ ಸೇರಲು ತಮ್ಮ ನಾಯಕರ ಮೂಲಕ ಲಾಬಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮೂರರಿಂದ ನಾಲ್ವರು ಸಂಸದರಿಗೆ ಸಚಿವ ಸ್ಥಾನ ಸಿಗಬಹುದು. ಆದರೆ ಡಜನ್‌ಗಟ್ಟಲೆ ನಾಯಕರು ರೇಸ್‌ನಲ್ಲಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾಗಿರೋ ಪ್ರಲ್ಹಾದ್ ಜೋಶಿ ಸಚಿವ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗ್ತಿದೆ. ಬಸವರಾಜ ಬೊಮ್ಮಾಯಿಗೆ ಅಮಿತ್ ಶಾ ಬೆಂಬಲವಿದೆ. ಶೆಟ್ಟರ್‌ಗೆ ಬಿಎಸ್‌ವೈ ಬಲವಿದ್ದು, ಇಬ್ಬರ ನಡುವೆ ಫೈಟ್ ಇದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದಿರುವ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದಿಂದ ಜಯ ಸಾಧಿಸಿರುವ ಪಿಸಿ ಮೋಹನ್ ಹೆಸರು ಚರ್ಚೆಯಲ್ಲಿದೆ. ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದ ಬಾಗಲಕೋಟೆಯ ಪಿ.ಸಿ ಗದ್ದಿಗೌಡರ್ ಕೂಡಾ ರೇಸ್‌ನಲ್ಲಿದ್ದಾರೆ. ಹಾಗೆಯೇ ಗೋವಿಂದ ಕಾರಜೋಳ ಜೊತೆಗೆ ಜೆಡಿಎಸ್ ಜೊತೆ ಮೈತ್ರಿಯಾಗಿರುವುದರಿಂದ ಹೆಚ್‌ಡಿ ಕುಮಾರಸ್ವಾಮಿಗೆ ಪಟ್ಟ ಖಚಿತ ಎನ್ನಲಾಗುತ್ತಿದೆ.
ಸದ್ಯ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದ್ರೆ 2019 ರಲ್ಲಿ 303 ಸ್ಥಾನಗಳನ್ನ ಪಡೆದುಕೊಂಡಿತ್ತು. ಮತ್ತೊಂದೆಡೆ ಕಾಂಗ್ರೆಸ್ 99 ಸ್ಥಾನಗಳನ್ನು ಗೆಲ್ಲುವ ಮೂಲಕ ಗಣನೀಯ ಏರಿಕೆ ದಾಖಲಿಸಿದೆ. ಬಿಜೆಪಿ ಕಡಿಮೆ ಸ್ಥಾನ ಹೊಂದಿದ್ರೂ ಮಿತ್ರಪಕ್ಷಗಳ ಬಲದೊಂದಿಗೆ ಗದ್ದುಗೆಗೆ ಏರಲು ಸಜ್ಜಾಗಿದೆ. ಭಾನುವಾರ ಸಂಜೆ ಮೋದಿ ಜತೆ ಎಷ್ಟು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲವಾಗಿಯೇ ಇದೆ. ಸೋಮವಾರದ ಬಳಿಕ ಸಚಿವ ಸ್ಥಾನ ಹಂಚಿಕೆ ಫೈನಲ್ ಆಗಲಿದ್ದು, ಯಾರಿಗೆ ಅದೃಷ್ಟ ಖುಲಾಯಿಸಲಿದೆ ಎಂಬುದು ಗೊತ್ತಾಗಲಿದೆ