ಶರದ್ ಪವಾರ್ ರಾಜೀನಾಮೆ ತಿರಸ್ಕರಿಸಿದ ಎನ್ ಸಿಪಿ ಕಮಿಟಿ!
ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಕೋರ್ ಕಮಿಟಿ ಸ್ಥಾನವನ್ನು ತೊರೆದಿರುವ ಶರದ್ ಪವಾರ್ ಅವರ ರಾಜೀನಾಮೆಯನ್ನು, ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ರಚಿಸಲಾಗಿದ್ದ ಎನ್ ಸಿಪಿ ಕಮಿಟಿ ಶುಕ್ರವಾರ ತಿರಸ್ಕರಿಸಿದೆ. ಎನ್ ಸಿಪಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ಮುನ್ನಡೆಸಿಕೊಂಡು ಹೋಗುವಂತೆ ವಿನಂತಿಸಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ.
ಶರದ್ ಪವಾರ್ ಅವರು ಮೇ 2 ರಂದು ಎನ್‌ಸಿಪಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ನಂತರ ಸ್ವತಃ ಶರದ್ ಪವಾರ್ ಅವರೇ ನೂತನ ಅಧ್ಯಕ್ಷರ ನೇಮಕ ಸಂಬಂಧ ಅಜಿತ್ ಪವಾರ್, ಸುಪ್ರಿಯಾ ಸುಳೆ, ಮಾಜಿ ಕೇಂದ್ರ ಸಚಿವ ಪರ್ಫುಲ್ ಪಟೇಲ್ ಮತ್ತು ಛಗನ್ ಭುಜಬಲ್ ಅವರನ್ನೊಳಗೊಂಡ 18 ಜನರ ಸಮಿತಿಯನ್ನು ರಚಿಸಿದ್ದರು. ಶುಕ್ರವಾರ ಮುಂಬೈನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶರದ್ ಪವಾರ್ ಅವರ ರಾಜೀನಾಮೆಯನ್ನು ತಿರಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: ‘ಆಲ್ ಇಂಡಿಯಾ ರೇಡಿಯೋ’ ಹೆಸರು ಬದಲು! – ಆದೇಶದಲ್ಲಿ ಏನಿದೆ?
ಸಮಿತಿಯ ಸಭೆಯ ನಂತರ ಮಾತನಾಡಿದ ಪ್ರಫುಲ್ ಪಟೇಲ್, ಸಮಿತಿಯು ಸರ್ವಾನುಮತದಿಂದ ಶರದ್ ಪವಾರ್ ಅವರ ರಾಜೀನಾಮೆ ತಿರಸ್ಕರಿಸಿ ನಿರ್ಣಯ ಅಂಗೀಕರಿಸಿದೆ. ಇದು ಅವರ ರಾಜೀನಾಮೆ ನಿರ್ಧಾರವನ್ನು ಸರ್ವಾನುಮತದಿಂದ ತಿರಸ್ಕರಿಸುತ್ತದೆ ಮತ್ತು ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ ಒತ್ತಾಯಿಸುತ್ತದೆ. ನಾವು ಈ ನಿರ್ಣಯದೊಂದಿಗೆ ಪವಾರ್ ಸಾಹೇಬ್ ಅವರನ್ನು ಭೇಟಿ ಮಾಡುತ್ತೇವೆ ಮತ್ತು ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪಕ್ಷ ಮತ್ತು ದೇಶಕ್ಕೆ ಶರದ್ ಪವಾರ್ ಅವರಂತಹ ನಾಯಕನ ಅಗತ್ಯವಿದೆ. ಪವಾರ್ ಸಾಹೇಬ್ ಅವರು ದೇಶದ ಗೌರವಾನ್ವಿತ ನಾಯಕರಾಗಿದ್ದಾರೆ. ಪವಾರ್ ಅವರ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವರ ಭಾವನೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.
ಸಭೆ ಆರಂಭವಾಗುತ್ತಿದ್ದಂತೆ, ಹಲವಾರು ಎನ್‌ಸಿಪಿ ಕಾರ್ಯಕರ್ತರು “ಐ ಆಮ್ ವಿತ್ ಸಾಹೇಬ್” ಎಂಬ ಸಂದೇಶದೊಂದಿಗೆ ಕ್ಯಾಪ್ ಧರಿಸಿ ಪವಾರ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ. ಶರದ್ ಪವಾರ್ ಅವರ ಅಭಿಮಾನಿಗಳು ಮುಂಜಾನೆಯಿಂದಲೇ ಪಕ್ಷದ ಕಚೇರಿ ಮುಂದೆ ಜಾಮಾಯಿಸಿ ಪವಾರ್ ಹುದ್ದೆ ತೊರೆಯಬಾರದು ಎಂದು ಆಗ್ರಹಿಸಿದ್ದಾರೆ.