ಚುನಾವಣಾ ಪ್ರಚಾರಕ್ಕೆ ಹುಲಿ, ಸಿಂಹಗಳನ್ನೇ ಕರೆತಂದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್!

ಚುನಾವಣಾ ಪ್ರಚಾರಕ್ಕೆ ಹುಲಿ, ಸಿಂಹಗಳನ್ನೇ ಕರೆತಂದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್!

ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರು ಮತದಾರರ ಮನಗೆಲ್ಲಲು ನಾನಾ ಸರ್ಕಸ್‌ ಮಾಡ್ತಾರೆ. ಜನರನ್ನ ನೋಡಿದ ಕೂಡ್ಲೇ ಹೊಸ ಡ್ರಾಮ ಶುರು ಮಾಡ್ತಾರೆ. ನಿಂತ ಸ್ಥಳದಲ್ಲೇ ಜನರ ಸಮಸ್ಯೆಗಳಿಗೆ ಪರಿಹಾರ ಕೊಡ್ತಾರೆ. ಅಷ್ಟೇ ಅಲ್ಲದೇ ಸ್ಪರ್ಧಿಗಳ ಪರ ಪ್ರಚಾರ ಮಾಡಲು ಸೆಲೆಬ್ರಿಟಿಗಳನ್ನು ಕರ್ಕೊಂಡು ಬರ್ತಾರೆ. ಆದ್ರೆ ಇಲ್ಲೊಂದು ಕಡೆ ಚುನಾವಣಾ ಪ್ರಚಾರಕ್ಕೆ ಸೆಲೆಬ್ರಿಟಿ, ಬೆಂಬಲಿಗರನ್ನು ಕರ್ಕೊಂಡು ಬರೋ ಬದಲು ಹುಲಿ ಸಿಂಹಗಳನ್ನು ಕರ್ಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಸರ್ಫರಾಝ್ ಖಾನ್ ಸಿಡಿಲಬ್ಬರದ ಶತಕ – ಸ್ಫೋಟಕ ಸೆಂಚುರಿ ಸಿಡಿಸಿ ತಕ್ಕ ಉತ್ತರ ನೀಡಿದ ಯುವ ದಾಂಡಿಗ

ಅಚ್ಚರಿಯಾದ್ರೂ ಸತ್ಯ. ಪಾಕಿಸ್ತಾನದಲ್ಲಿ ಈ ಘಟನೆ ನಡೆದಿದೆ. ಕೆಲವೇ ದಿನಗಳಲ್ಲಿ ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಭರ್ಜರಿಯಾಗಿ ಪ್ರಚಾರ ನಡೆಸ್ತಿದ್ದಾರೆ. ಮತದಾರರ ಮನವೊಲಿಸೋಕೆ ಪ್ರಯತ್ನಿಸ್ತಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಕೂಡ ಈ ಚುನಾವಣೆಯಲ್ಲಿ ಸ್ಪರ್ಧಿಸ್ತಿದ್ದು, ಅವರು ನಡೆಸಿದ ಚುನಾವಣಾ ರ್ಯಾಲಿಯಲ್ಲಿ ಸಿಂಹ, ಹುಲಿಗಳು ಕಂಡು ಬಂದಿದೆ.

ಹೌದು, ಕಳೆದ ಮಂಗಳವಾರ ಲಾಹೋರ್‌ನಲ್ಲಿ ನವಾಜ್ ಷರೀಫ್ ನೇತೃತ್ವದ ರ್ಯಾಲಿಯನ್ನು ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಬೆಂಬಲಿಗರು ರ್ಯಾಲಿಗೆ ಸಿಂಹ ಮತ್ತು ಹುಲಿಯನ್ನು ಕರೆತಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಸ್ವಾಗತಿಸಲು ಪಕ್ಷದ ಚಿಹ್ನೆಯನ್ನು ಪ್ರತಿನಿಧಿಸುವ ಪ್ರಾಣಿಗಳನ್ನು ತಂದಿದ್ದಾರೆ ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದ್ದು, 130 ಕ್ಷೇತ್ರದಲ್ಲಿ ಭರದಿಂದ ಪಿಎಂಎಲ್-ಎನ್ ಪಕ್ಷ ಪ್ರಚಾರ ಮಾಡುತ್ತಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿರುವ ವಿಡಿಯೋದಲ್ಲಿ PML-N ಬೆಂಬಲಿಗರು, ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಕಬ್ಬಿಣದ ಪಂಜರದ ಒಳಗೆ ಹಾಕಿರುವ ಸಿಂಹ ಮತ್ತು ಹುಲಿಯನ್ನು ಕಾಣಬಹುದು. ಈ ಸಮಯದಲ್ಲಿ ಅನೇಕರು ಸಿಂಹ ಮತ್ತು ಹುಲಿಯ ಜತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಮೋಹಿನಿ ರಸ್ತೆಯಲ್ಲಿ ನಡೆದ ರ್ಯಾಲಿಗೆ ಸಿಂಹವನ್ನು ತೆಗೆದುಕೊಂಡು ಬಂದಿದ್ದಾರೆ. ಈ ಮೂಲಕ ನವಾಜ್ ಷರೀಫ್ ಅವರ ಗಮನ ಸೆಳೆದಿದ್ದಾರೆ. ನಂತರ ಷರೀಫ್ ಅವರ ಸೂಚನೆಯಂತೆ ಸಿಂಹ ಮತ್ತು ಹುಲಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗಿದೆ. ಇನ್ನು ಮುಂದೆ ನಮ್ಮ ಪಕ್ಷದ ಯಾವುದೇ ರ್ಯಾಲಿಯಲ್ಲಿ ಕಾಡು ಪ್ರಾಣಿಗಳನ್ನು ತೆಗೆದುಕೊಂಡು ಬರದಂತೆ ನವಾಜ್ ಷರೀಫ್ ಆದೇಶ ನೀಡಿದ್ದಾರೆ.

ರ್ಯಾಲಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಪ್ರಧಾನಿ ಕಚೇರಿಯಿಂದ ನನ್ನನ್ನು ಒತ್ತಡ ಹಾಕಿ ಹೊರಗೆ ಹಾಕಲಾಗಿದೆ. ಪಾಕಿಸ್ತಾನವನ್ನು ಪರಮಾಣು ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ನನ್ನನ್ನು ಜೈಲಿಗೆ ಹಾಕಲಾಗಿತ್ತು ಎಂದು ಹೇಳಿದ್ದಾರೆ. ತನ್ನ ಮಗನಿಗಾಗಿ ಸರ್ಕಾರಿ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಅವರನ್ನು ಜೈಲಿಗೆ ಹಾಕಲಾಗಿತ್ತು. ಅಲ್ಲಿಂದ ಅವರು ಲಂಡನ್​​​ಗೆ ಪಲಾಯನ ಹೋಗಿದ್ದರು. ಇದೀಗ ಮತ್ತೆ ಪಾಕಿಸ್ತಾನಕ್ಕೆ ಬಂದಿದ್ದಾರೆ. ಈ ಮೂಲಕ ಪಾಕ್​​​ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

Shwetha M