ಖ್ಯಾತ ನಟ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲು – ಮೂರು ತಿಂಗಳು ವಿಶ್ರಾಂತಿಗೆ ವೈದ್ಯರ ಸೂಚನೆ
ಶಸ್ತ್ರಚಿಕಿತ್ಸೆ ಯಶಸ್ವಿ – ಬೇಗ ಗುಣಮುಖರಾಗುವಂತೆ ಅಭಿಮಾನಿಗಳ ಹಾರೈಕೆ–
ತುಳು ಸಿನಿಮಾರಂಗದ ಖ್ಯಾತ ನಟ ನವೀನ್ ಡಿ ಪಡೀಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾದ ಚಿತ್ರೀಕರಣ ವೇಳೆ ನವೀನ್ ಪಡೀಲ್ ಅವರ ತೊಡೆ ಮೂಳೆ ಮುರಿದು ಹೋಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಈಗಾಗಲೇ ಶಸ್ತ್ರಚಿಕಿತ್ಸೆ ಕೂಡಾ ಮಾಡಲಾಗಿದ್ದು, ನವೀಲ್ ಪಡೀಲ್ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ : ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು – ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿ ನವೀನ್ ಡಿ ಪಡೀಲ್ ಪಾಲ್ಗೊಂಡಿದ್ದರು. ತುಳು, ಕನ್ನಡ, ಮಲಯಾಳಂ ಭಾಷೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನವೀನ್ ಡಿ ಪಡೀಲ್ ಬಿದ್ದು ಏಟು ಮಾಡಿಕೊಂಡಿದ್ದಾರೆ. ತೊಡೆಗೆ ಬಲವಾದ ಏಟು ಬಿದ್ದಿದ್ದು ಮೂಳೆ ಮುರಿತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೂಡಾ ನೆರವೇರಿಸಲಾಗಿದೆ. ಸದ್ಯ ನವೀನ್ ಡಿ ಪಡೀಲ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಮೂರು ತಿಂಗಳು ವಿಶ್ರಾಂತಿಯ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಟ ನವೀನ್ ಡಿ ಪಡೀಲ್, ತುಳು ಮತ್ತು ಕನ್ನಡ ಸಿನಿಮಾಗಳ ಜೊತೆಗೆ ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡ ಕಿರುತೆರೆಯಲ್ಲೂ ನವೀನ್ ಜನಮನ್ನಣೆ ಗಳಿಸಿದ್ದಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರದಲ್ಲಿ ವಕೀಲನಾಗಿ ಕಾಣಿಸಿಕೊಂಡ ನವೀನ್ ಡಿ ಪಡೀಲ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನೆಚ್ಚಿನ ನಟ ಬೇಗ ಗುಣಮುಖರಾಗಲಿ ಅನ್ನೋದು ಅಭಿಮಾನಿಗಳು ಮತ್ತು ಸ್ನೇಹಿತರ ಹಾರೈಕೆಯಾಗಿದೆ.