ಯೂಟ್ಯೂಬ್ ವಿಡಿಯೋ ನೋಡಿಕೊಂಡು ಪತ್ನಿ ಹೆರಿಗೆ ಮಾಡಿಸಿದ ಪತಿ – ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು, ಬದುಕುಳಿದ ಮಗು

ಯೂಟ್ಯೂಬ್ ವಿಡಿಯೋ ನೋಡಿಕೊಂಡು ಪತ್ನಿ ಹೆರಿಗೆ ಮಾಡಿಸಿದ ಪತಿ – ತೀವ್ರ ರಕ್ತಸ್ರಾವದಿಂದ ಬಾಣಂತಿ ಸಾವು, ಬದುಕುಳಿದ ಮಗು

ಪ್ರತಿಯೊಬ್ಬ ಮಹಿಳೆಗೂ ತಾಯ್ತನ ಎನ್ನುವುದು ಒಂದು ವರ. ಒಂದು ಮಗುವಿಗೆ ಜನ್ಮ ನೀಡುವುದು ಮರುಜನ್ಮ ಪಡೆದಂತೆ ಎಂದು ಹೇಳಲಾಗುತ್ತದೆ. ಎಷ್ಟೇ ನೋವು ನೀಡಿದರೂ ಮಗು ಜನನದ ಬಳಿಕ ಅಷ್ಟೇ ಸಂತೋಷವನ್ನೂ ನೀಡುತ್ತದೆ. ಕರುಳಿನ ಕುಡಿಯನ್ನು ಪಡೆಯಲು ಯಾವುದೇ ತಾಯಿ ಎಷ್ಟೇ ನೋವು ಬೇಕಾದರೂ ಅನುಭವಿಸಲು ಸಿದ್ಧಳಿರುತ್ತಾಳೆ. ಚೊಚ್ಚಲ ಹೆರಿಗೆಗೆ ತಯಾರಿ ನಡೆಸುತ್ತಿರುವ ಮಹಿಳೆಯರಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿಯೇ ಮನೆ ಮಾಡಿರುತ್ತದೆ. ಕೆಲವರು ಸಹಜ ಹೆರಿಗೆಗೆ ಒಲವು ತೋರಿದರೆ ಇನ್ನೂ ಕೆಲವರು ಸಿಸೇರಿಯನ್ ಹೆರಿಗೆ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಪತಿ ಯೂಟ್ಯೂಬ್ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಿಸಲು ಹೋಗಿ ದೊಡ್ಡ ಅವಾಂತರವನ್ನೇ ಮಾಡಿದ್ದಾನೆ.

ಇದನ್ನೂ ಓದಿ : ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದಿದ್ದ ತಂದೆ-ಮಗ ಜಲಾಹುತಿ

ಗರ್ಭಿಣಿ ಪತ್ನಿಗೆ ನಾರ್ಮಲ್ ಡೆಲಿವರಿ (Normal Delivery) ಮಾಡಿಸಲು ಮುಂದಾದ ಪತಿ ಈಗ ಆಕೆಯನ್ನೇ ಕಳೆದುಕೊಂಡಿದ್ದಾನೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಇಂಥಾದ್ದೊಂದು ದುರಂತ ನಡೆದಿದೆ. ಲೋಕನಾಯಕಿ ಎಂಬ ಮಹಿಳೆಗೆ ಎರಡು ವರ್ಷಗಳ ಹಿಂದೆ ಮಾದೇಶ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. ಕೃಷಿಯಲ್ಲಿ ಬಿಎಸ್ಸಿ ಮುಗಿಸಿರುವ ದಂಪತಿ ಸರಳ ಜೀವನ ನಡೆಸುತ್ತಿದ್ದಾರೆ. ಲೋಕನಾಯಕಿ ಗರ್ಭವತಿಯಾಗುತ್ತಿದ್ದಂತೆ ಮಾದೇಶ್ ಆಕೆಗೆ ಸ್ವಾಭಾವಿಕವಾಗಿ ಹೆರಿಗೆ ಮಾಡಲು ತಿಳಿಯದ ಕೆಲಸ ಮಾಡಿದ. ಯೂಟ್ಯೂಬ್‌ನಲ್ಲಿ (YouTube) ನಾರ್ಮಲ್ ಡೆಲಿವರಿ ವಿಡಿಯೋ ನೋಡಿದ ಆತ ಪತ್ನಿ ಹೆರಿಗೆ ಮಾಡಿಸಲು ಮುಂದಾಗಿದ್ದ. ಆದರೆ ಅವರ ಪ್ರಯೋಗವು ವಿಫಲವಾಯಿತು. ಡೆಲಿವರಿ ಆಗುವಾಗ ಭಾರೀ ರಕ್ತಸ್ರಾವದಿಂದ ಮಹಿಳೆ ಸಾವನ್ನಪ್ಪಿದರು.

ಮಾದೇಶ್ ಎರಡು ವರ್ಷಗಳ ಹಿಂದೆ ಲೋಕನಾಯಕಿ ಅವರನ್ನು ವಿವಾಹವಾಗಿದ್ದರು. ಗಂಡ-ಹೆಂಡತಿ ಇಬ್ಬರೂ ಕೃಷಿ ಪದವಿ ಮಾಡಿದ್ದು, ತಮ್ಮ ಮನೆಯ ಆವರಣದಲ್ಲಿ ಸಾವಯವ ಪದ್ಧತಿಯಲ್ಲಿ ಹಸಿರು ತರಕಾರಿಗಳನ್ನು ಮಾರಿ, ಬೆಳೆದು ತಿನ್ನುತ್ತಿದ್ದರು. ಆರೋಗ್ಯ ತತ್ವಗಳನ್ನು ಪಾಲಿಸುವ ಈ ದಂಪತಿ ಹೆರಿಗೆ ವಿಚಾರದಲ್ಲೂ ವೈದ್ಯರನ್ನೇ ಅವಲಂಬಿಸದೆ ಸಹಜ ರೀತಿಯಲ್ಲಿ ಮಗುವಿಗೆ ಜನ್ಮ ನೀಡಲು ಮನೆಯಲ್ಲಿಯೇ ಹೆರಿಗೆ ವ್ಯವಸ್ಥೆ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿ ನಾರ್ಮಲ್ ಡೆಲಿವರಿ ಪ್ರೊಸೀಜರ್ ವಿಡಿಯೋ ನೋಡಿಕೊಂಡು ಲೋಕನಾಯಕಿ ಹೆರಿಗೆ ಮಾಡಿದ್ದಾರೆ.

ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ಲೋಕನಾಯಕಿ ತೀವ್ರ ರಕ್ತಸ್ರಾವವಾಗಿದ್ದು, ಮಾದೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಮಾದೇಶ್ ಈ ವಿಷಯವನ್ನು ಗೌಪ್ಯವಾಗಿಟ್ಟರೂ ಅಸಲಿ ಸತ್ಯ ಹೊರಬಿದ್ದಿದೆ. ಅಳಿಯ ದಡ್ಡನೋ ಅಮಾಯಕನೋ ಗೊತ್ತಿಲ್ಲ ಎಂದು ಮೃತನ ಪೋಷಕರು ತಲೆ ಮೇಲೆ ಕೈ ಇಟ್ಟುಕೊಂಡು ಕೂತಿದ್ದಾರೆ. ತನ್ನದಲ್ಲದ ತಪ್ಪಿಗೆ ಈಗ ಪುಟ್ಟ ಮಗು ಹುಟ್ಟುತ್ತಲೇ ಅಮ್ಮನನ್ನ ಕಳೆದುಕೊಂಡಿದೆ.

suddiyaana