ರಾಷ್ಟ್ರ ರಾಜಧಾನಿ ದೆಹಲಿಯ 75ನೇ ಗಣರಾಜ್ಯೋತ್ಸವ – ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ
ದೇಶದಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ – ಧ್ವಜಾರೋಹಣ ನೆರವೇರಿಸಿ, ಐದು ಗ್ಯಾರಂಟಿಗಳನ್ನು ಕೊಂಡಾಡಿದ ರಾಜ್ಯಪಾಲ ಗೆಹ್ಲೋಟ್
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಸಾಥ್ ನೀಡಿದರು. ಧ್ವಜಾರೋಹಣದ ಬಳಿಕ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು. ಬಳಿಕ ಗಣರಾಜ್ಯೋತ್ಸವದ ಪರೇಡ್ ಆರಂಭವಾಯಿತು. ರಾಜಪಥ್ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ 2ನೇ ಗಣರಾಜ್ಯೋತ್ಸವ ಇದಾಗಿದ್ದು, ಪರೇಡ್ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗುತ್ತಿದೆ.
ಇದಾದ ಬಳಿಕ ಬೆಳಗ್ಗೆ 10.30ರಿಂದ ವಿಜಯ್ ಚೌಕ್‌ನಿಂದ ಕರ್ತವ್ಯ ಪಥದವರೆಗೆ ಪರೇಡ್ ನಡೆಯಲಿದೆ. ದೇಶದ ಹಲವು ರಾಜ್ಯಗಳಿಂದ ಆಗಮಿಸಿದ ಸ್ತಬ್ಧಚಿತ್ರಗಳ ಮೆರವಣಿಗೆ ಕೂಡ ನಡೆಯಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಪರೇಡ್ ಮೈದಾನಕ್ಕೆ ಆಗಮಿಸಿದ್ದು, ಕೇಲವೇ ಕ್ಷಣಗಳಲ್ಲಿ ಪರೇಡ್ ಆರಂಭವಾಗಲಿದೆ.
ಈ ಬಾರಿ ವಿಶೇಷವಾಗಿ ಕಂಡುಬರುತ್ತಿರುವುದು ʻನಾರಿ ಶಕ್ತಿ ಪ್ರದರ್ಶನʼ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ʻಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣʼ ವಸ್ತು ವಿಷಯ ಅಡಿಯಲ್ಲಿ 194 ಮಹಿಳಾ ಪೊಲೀಸರು ಪರೇಡ್ ನಡೆಸಿಕೊಡಲಿದ್ದಾರೆ. ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನು ಮುನ್ನಡೆಸಲಿದ್ದಾರೆ. ಜೊತೆಗೆ 100 ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುವ ಮೆರೆವಣಿಗೆಯನ್ನು ನಡೆಸಿಕೊಡಲಿದ್ದಾರೆ. ಸಂಖ್, ನಾದಸ್ವರ, ನಗದ ಇತ್ಯಾದಿ ಸಂಗೀತದೊಂದಿಗೆ ಮೆರವಣಿಗೆ ಆರಂಭವಾಗಲಿದೆ.