ಕರ್ನಾಟಕದಲ್ಲಿ ನಾಥ್‌ ಆಪರೇಷನ್‌ – ಹೈ ಅಲರ್ಟ್‌ ಆದ ಕಾಂಗ್ರೆಸ್‌ ಹೈಕಮಾಂಡ್‌!

ಕರ್ನಾಟಕದಲ್ಲಿ ನಾಥ್‌ ಆಪರೇಷನ್‌ – ಹೈ ಅಲರ್ಟ್‌ ಆದ ಕಾಂಗ್ರೆಸ್‌ ಹೈಕಮಾಂಡ್‌!

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸರ್ಕಾರ ಪತನದ ಬಗ್ಗೆ ನೀಡಿರುವ ಸುಳಿವು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಹೈಕಮಾಂಡ್‌ ಹೈ ಅಲರ್ಟ್‌ ಆಗಿದೆ. ರಾಜ್ಯ ನಾಯಕರಿಂದ ಮಾಹಿತಿ ಕೇಳಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿ ಪ್ರಧಾನಿ ಮೋದಿ – ನಾಮಪತ್ರಕ್ಕೂ ಮುನ್ನ ಗಂಗಾ ಆರತಿ

ಇಡೀ ದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಬಲವಾಗಿದೆ. ಆದ್ರೂ ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಪತನ ಎಂಬ ಬಿಜೆಪಿ ನಾಯಕರ ಸಾಲು ಸಾಲು ಹೇಳಿಕೆ ನೀಡುತ್ತಾ ಬಂದಿದ್ದಾರೆ. ಈ ಬೆನ್ನಲ್ಲೇ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಕೂಡ  ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದಲ್ಲೂ ನಾಥ್‌ ಆಪರೇಷನ್‌ ಮಾಡಿ ಕಾಂಗ್ರೆಸ್‌‍ ಸರ್ಕಾರವನ್ನು ಪತನಗೊಳಿಸಲು ಚರ್ಚೆಗಳು ನಡೆದಿವೆ ಅಂತ ಹೇಳಿದ್ದರು. ಈ ಬೆನ್ನಲ್ಲೇ ಅಲರ್ಟ್‌ ಆದ ಕಾಂಗ್ರೆಸ್‌ ಹೈಕಮಾಂಡ್‌  ಹೇಳಿಕೆಗಳ ಹಿಂದಿನ ಕಾರಣಗಳನ್ನು ಪತ್ತೆ ಮಾಡಿ ಎಂಬ ಸಂದೇಶವೊಂದನ್ನು ನೀಡಿದೆ. ಪಕ್ಷದಲ್ಲಿ ಯಾರಾದರೂ ಅತೃಪ್ತರು, ಅಸಮಧಾನಿತರು ಇದ್ದರೆ ಮನವೊಲಿಸುವ ಕೆಲಸ ಮಾಡಿಕೊಳ್ಳಿ. ಹೈಕಮಾಂಡ್ ಮಟ್ಟಕ್ಕೆ ಸಮಸ್ಯೆ ಬರದಂತೆ ನೋಡಿಕೊಳ್ಳಿ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದೆ ಅಂತಾ ಹೇಳಲಾಗುತ್ತಿದೆ.

ಇನ್ನು ಬಿಜೆಪಿ ನಾಯಕರ ಜೊತೆ ನಮ್ಮ ಶಾಸಕರು ಯಾರಾದರೂ ಇದ್ದಾರಾ ಅಥವಾ ಬಿಜೆಪಿ ನಾಯಕರೇ ನಮ್ಮ ಯಾವ ಶಾಸಕರನ್ನ‌ ಸಂಪರ್ಕಿಸುತ್ತಿದ್ದಾರೆ? ಒಂದು ವೇಳೆ ಅಸಮಧಾನ‌ ಇದ್ದರೆ ಯಾವ ಕಾರಣಕ್ಕೆ? ಆಮಿಷಕ್ಕೊ? ಅಸಮಾಧಾನಕ್ಕೋ? ಎಂದು ತಿಳಿದುಕೊಂಡು ವರದಿ ಸಲ್ಲಿಸುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ ಎಂದು ತಿಳದು ಬಂದಿದೆ. ಈ ಮೂಲಕ ಅಸಮಧಾನಿತ ಶಾಸಕರ ಚಲನವಲನದ ಮೇಲೆ ಕಣ್ಣು ಇರಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಕೆ.ಸಿ.ವೇಣುಗೋಪಾಲ್ ಹಾಗೂ ರಣ್​ದೀಪ್ ಸುರ್ಜೆವಾಲ ಪಕ್ಷದಲ್ಲಿ ಸದ್ಯದ ಬೆಳವಣಿಗೆ ಏನು ಎಂದು ಚರ್ಚೆ ನಡೆಸಿದ್ದಾರಂತೆ. ಹೈಕಮಾಂಡ್ ಕರೆ ಹಿನ್ನೆಲೆ ಸಿಎಂ‌ ಸಿದ್ದರಾಮಯ್ಯ ಗುಪ್ತಚರ ಇಲಾಖೆಯಿಂದ‌ ವರದಿ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

Shwetha M