ಲೋಹೀಯ ಸಂಪತ್ತುಗಳಿಂದ ಕೂಡಿರುವ ಸೈಕ್ ಕ್ಷುದ್ರಗ್ರಹದ ಅನ್ವೇಷಣೆಗೆ ಹೊರಟ ನೌಕೆ –  6 ವರ್ಷಗಳ ಸುದೀರ್ಘ ಪ್ರಯಾಣ

ಲೋಹೀಯ ಸಂಪತ್ತುಗಳಿಂದ ಕೂಡಿರುವ ಸೈಕ್ ಕ್ಷುದ್ರಗ್ರಹದ ಅನ್ವೇಷಣೆಗೆ ಹೊರಟ ನೌಕೆ –  6 ವರ್ಷಗಳ ಸುದೀರ್ಘ ಪ್ರಯಾಣ

ಬಾಹ್ಯಾಕಾಶ ಸಂಶೋಧನೆ ಅನ್ನೋದು ಕೌತುಕಗಳ ಆಗರ. ಬಗೆದಷ್ಟೂ ಅಲ್ಲಿ ರಹಸ್ಯಗಳು ಬಯಲಾಗುತ್ತವೆ. ಅನ್ವೇಷಿಸಿದಷ್ಟೂ ಅದ್ಭುತಗಳು ಹೊರಬರುತ್ತವೆ. ಹೀಗಾಗೇ ತಂತ್ರಜ್ಞಾನ ಬೆಳೆದಂತೆಲ್ಲಾ ವಿಜ್ಞಾನಿಗಳ ಸಾಹಸವೂ ಹೆಚ್ಚಾಗುತ್ತಿದೆ. ಇದೀಗ ನಾಸಾ ಬಾಹ್ಯಾಕಾಶ ಸಂಸ್ಥೆಯು ತನ್ನ ಸೈಕ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನ ಕೈಗೆತ್ತಿಕೊಂಡಿದೆ. ‘16 ಸೈಕ್’ ಎಂದು ಕರೆಯಲ್ಪಡುವ ಅಪಾರ ಖನಿಜ ಸಂಪತ್ತುಗಳಿಂದ ಕೂಡಿರುವಂತಹ ಕ್ಷುದ್ರಗ್ರಹವನ್ನು ಅನ್ವೇಷಿಸಲು ಹೊರಟಿದೆ. 6 ವರ್ಷಗಳ ಸುಧೀರ್ಘ ಪಯಣ ಇದಾಗಿದೆ.

ಇದನ್ನೂ ಓದಿ : ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದಿಂದ ಮತ್ತೊಂದು ದೊಡ್ಡ ಸಾಧನೆ – ಕ್ಷುದ್ರಗ್ರಹದಿಂದ ಮಣ್ಣು ತಂದ ನಾಸಾ   

ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದಿಲ್ಲೊಂದು ರಾಷ್ಟ್ರಗಳು ಅಧ್ಯಯನದಲ್ಲಿ ತೊಡಗಿಕೊಂಡಿದೆ. ವಿಶ್ವದ ಪ್ರಸಿದ್ಧ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಒಂದಾಗಿರುವ ಅಮೆರಿಕಾದ ನಾಸಾ ಇದೀಗ ಅಪರೂಪದ ಲೋಹದಿಂದ ಆವೃತವಾದ ಸೈಕ್ ಕ್ಷುದ್ರಗ್ರಹಕ್ಕೆ ತನ್ನ ನೌಕೆಯನ್ನು ನಾಸಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಕಳುಹಿಸಿಕೊಟ್ಟಿದೆ. ಅಕ್ಟೋಬರ್ 12ರಂದು ಉಡಾವಣೆ ಮಾಡಿದ್ದು ಮುಂದಿನ ಆರು ವರ್ಷಗಳ ಸುದೀರ್ಘ ಕಾಲ ಇದು ತನ್ನ ಸುದೀರ್ಘ ಪ್ರಯಾಣವನ್ನು ಆರಂಭಿಸಿದೆ. 2.2 ಶತಕೋಟಿ ಮೈಲಿ ಪ್ರಯಾಣ ಇದಾಗಿದೆ. ನಾಸಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ನೌಕೆಯನ್ನು ಉಡಾವಣೆ ಮಾಡಲಾಗಿದ್ದು, 2029ರ ವೇಳೆಗೆ ಇದು ಕ್ಷುದ್ರಗ್ರಹ ತಲುಪುವ ನಿರೀಕ್ಷೆ ಹೊಂದಿದೆ. ಲೋಹ-ಸಮೃದ್ಧ ಕ್ಷುದ್ರಗ್ರಹದ ರಹಸ್ಯಗಳನ್ನು ಮತ್ತು ಗ್ರಹಗಳ ಕೋರ್‌ಗಳ ಒಳನೋಟಗಳನ್ನು ಪಡೆಯುವ ಉದ್ದೇಶವನ್ನ ‘ಸೈಕ್’ ಮಿಷನ್ ಹೊಂದಿದೆ. ಇಡೀ ಜಾಗತಿಕ ಆರ್ಥಿಕತೆಯನ್ನು ಮೀರಿಸುವಂತಹ ಮೌಲ್ಯವನ್ನು ಹೊಂದಿರುವ ಆಕಾಶಕಾಯವನ್ನು ಅನ್ವೇಷಿಸುವುದು ಈ ಮಿಷನ್‌ನ ಗುರಿಯಾಗಿದೆ.

ಕ್ಷುದ್ರಗ್ರಹ 16 ಸೈಕ್ ಎಂದರೇನು?

ಸಾಮಾನ್ಯವಾಗಿ ಬಂಡೆ ಅಥವಾ ಮಂಜುಗಡ್ಡೆಯಿಂದ ರೂಪಿತವಾಗಿರೋ ಕ್ಷುದ್ರಗ್ರಹಗಳಿಂದ ಭಿನ್ನವಾಗಿರೋ ‘16 ಸೈಕ್’ ಬೆಲೆ ಬಾಳುವ ಕಬ್ಬಿಣ ಮತ್ತು ಚಿನ್ನದಂತ ಲೋಹೀಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಇದು ಬಟಾಟೆ ಆಕಾರದಲ್ಲಿದ್ದು ಸುಮಾರು 226 ಕಿಲೋಮೀಟರ್ಸ್ ವ್ಯಾಸದಷ್ಟಿದೆ. ಮಂಗಳ ಮತ್ತು ಗುರುಗ್ರಹದ ನಡುವಿನ ಮುಖ್ಯ ಕ್ಷುದ್ರಗ್ರಹ ಪಟ್ಟಿಯ ಹೊರ ಪ್ರದೇಶದಲ್ಲಿ ನೆಲೆಗೊಂಡಿರುವ ಕ್ಷುದ್ರಗ್ರಹ 16 ಸೈಕ್ ಈ ಕಾರ್ಯಾಚರಣೆಯ ಕೇಂದ್ರಬಿಂದುವಾಗಿದೆ. ಅಪಾರ ಲೋಹೀಯ ಸಂಪತ್ತಿನಿಂದ ಕೂಡಿರುವಂತಹ ‘ಸೈಕ್ ‘ ಇದು 10,000 ಡಾಲರ್ ಕ್ವಾಡ್ರಿಲಿಯನ್ ಮೌಲ್ಯಯುತವಾಗಿದೆ. ಇದು ಕಲ್ಲು ಅಥವಾ ಮಂಜುಗಡ್ಡೆಯಿಂದ ಕೂಡಿದ ಕ್ಷುದ್ರಗ್ರಹಗಳನ್ನು ಪರಿಶೋಧಿಸಿದ ಹಿಂದಿನ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿದೆ. ಸೈಕ್ ಬಾಹ್ಯಾಕಾಶ ನೌಕೆಯು ಗುರುತ್ವಾಕರ್ಷಣೆಯ ಸಹಾಯವನ್ನು ಅನುಸರಿಸಿ ಸೌರ-ವಿದ್ಯುತ್ ಪ್ರೊಪಲ್ಷನ್ ಅನ್ನು ಬಳಸಿಕೊಂಡು ಕ್ಷುದ್ರಗ್ರಹಕ್ಕೆ ಪ್ರಯಾಣಿಸಲಿದೆ. ಮಿಷನ್ ಯೋಜನೆಯು ಕ್ಷುದ್ರಗ್ರಹವನ್ನು ಮ್ಯಾಪಿಂಗ್ ಮಾಡುತ್ತಾ ಅದರ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಿದೆ.

ಮಿಷನ್ ಉದ್ದೇಶವೇನು?

ಈ ಕ್ಷುದ್ರಗ್ರಹವು ಛಿದ್ರಗೊಂಡ ಗ್ರಹಗಳ ತುಣುಕು ಆಗಿರಬಹುದು, ಇದು ಗ್ರಹಗಳ ಮೊದಲ ಬಿಲ್ಡಿಂಗ್ ಬ್ಲಾಕ್ ಆಗಿರಲೂಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಇದು ಸರಿಯಾಗಿದ್ದರೆ ಕ್ಷುದ್ರಗ್ರಹವು ಭೂಮಿಯ ಒಳ ಭಾಗದ ರಹಸ್ಯವನ್ನ ಅನ್ವೇಷಿಸುವ ಜೊತೆಗೆ ಸೌರ ಮಂಡಲದ ಉಗಮದ ರಹಸ್ಯವನ್ನ ತಿಳಿದುಕೊಳ್ಳಲಿದೆ. ಮತ್ತು ಈ ಕ್ಷುದ್ರಗ್ರಹವು ಯಾಕೆ ಲೋಹ ಸಮೃದ್ಧವಾಗಿದೆ ಎಂಬುದನ್ನ ತಿಳಿಯಲು ಸಹಾಯಕವಾಗಲಿದೆ.  ಅಪರೂಪದ ಲೋಹದಿಂದ ಆವೃತ್ತವಾದ ನಿಗೂಢ ಕ್ಷುದ್ರಗ್ರಹವೊಂದಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ​ಸೈಕ್​ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿದೆ. ಈ ನೌಕೆ ಆರು ವರ್ಷ ಪ್ರಯಾಣಿಸಿ ಕ್ಷುದ್ರಗ್ರಹವನ್ನು ತಲುಪಲಿದೆ. ಬಹುತೇಕ ಕ್ಷುದ್ರಗ್ರಹಗಳು ಬಂಡೆಗಳಿಂದ ಕೂಡಿರುತ್ತವೆ. ಆದರೆ ಇದೇ ಮೊದಲ ಬಾರಿಗೆ ಲೋಹದಿಂದ ಕೂಡಿರುವ ಕ್ಷುದ್ರಗ್ರಹ ಪತ್ತೆಯಾಗಿದ್ದು, ಅದರ ಅನ್ವೇಷಣೆಗೆ ಹೊರಟ ಪ್ರಥಮ ಮಿಷನ್​ ಇದಾಗಿದೆ. ಇದು ಹಿಂದಿನ ಗ್ರಹವೊಂದರ ಮಧ್ಯಭಾಗದ ಉಳಿಕೆಯಾಗಿರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ. ಅದರ ಅನ್ವೇಷಣೆಯಿಂದ ಭೂಮಿಯ ಸಮೀಪಿಸಲಾಗದ ಮಧ್ಯ ಪದರ ಮತ್ತು ಇತರ ಕಲ್ಲುಬಂಡೆಗಳ ಗ್ರಹಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾಗಬಹುದೆಂದು ನಿರೀಕ್ಷಿಸಲಾಗಿದೆ. ​

ಇನ್ನು ಇಲ್ಲಿಯವರೆಗೆ ಪತ್ತೆಯಾದ ಒಂಬತ್ತು ಅಥವಾ ಅದಕ್ಕಿಂತ ಹೆಚ್ಚಿನ ಲೋಹ-ಸಮೃದ್ಧ ಕ್ಷುದ್ರಗ್ರಹಗಳಲ್ಲಿ, ಸೈಕ್ ಅತಿ ದೊಡ್ಡದಾಗಿದೆ ಎನ್ನಲಾಗಿದೆ. ಮಂಗಳ ಮತ್ತು ಗುರುಗಳ ನಡುವಿನ ಮುಖ್ಯ ಕ್ಷುದ್ರಗ್ರಹ ಪಟ್ಟಿಯ ಹೊರ ಭಾಗದಲ್ಲಿ ಲಕ್ಷಾಂತರ ಇತರ ಬಾಹ್ಯಾಕಾಶ ಬಂಡೆಗಳ ಜೊತೆಗೆ ಸೂರ್ಯನನ್ನು ಇದು ಸುತ್ತುತ್ತದೆ. ಇದನ್ನು 1852 ರಲ್ಲಿ ಕಂಡುಹಿಡಿಯಲಾಗಿದ್ದು, ಗ್ರೀಕ್ ಪುರಾಣದ ಆತ್ಮದ ಆಕರ್ಷಕ ದೇವತೆಯ ಹೆಸರನ್ನು ಇಡಲಾಯಿತು. ಹೆಚ್ಚಿನ ಕ್ಷುದ್ರಗ್ರಹಗಳು ಕಲ್ಲಿನ ಅಥವಾ ಹಿಮಾವೃತವಾಗಿದ್ದು, ಇದು ಲೋಹದ ಪ್ರಪಂಚದ ಮೊದಲ ಪರಿಶೋಧನೆಯಾಗಿದೆ. ವಿಜ್ಞಾನಿಗಳು ಇದು ಆರಂಭಿಕ ಗ್ರಹದ ಮಧ್ಯಭಾಗದ ಜರ್ಜರಿತ ಅವಶೇಷಗಳಾಗಿರಬಹುದು ಮತ್ತು ಭೂಮಿಯ ಮತ್ತು ಇತರ ಕಲ್ಲಿನ ಗ್ರಹಗಳ ಪ್ರವೇಶಿಸಲಾಗದ ಕೇಂದ್ರಗಳ ಮೇಲೆ ಬೆಳಕು ಚೆಲ್ಲಬಹುದು ಎಂದು ನಂಬಿದ್ದಾರೆ. ಒಟ್ಟಾರೆ 6 ವರ್ಷಗಳ ಸುದೀರ್ಘ ಪಯಣದ ಬಳಿಕ ಈ ನೌಕೆ ಕ್ಷುದ್ರಗ್ರಹವನ್ನ ತಲುಪಲಿದೆ. ಹೊಸದೊಂದು ಅನ್ವೇಷಣೆಗೆ ಮುನ್ನುಡಿ ಬರೆಯಲಿದೆ.

Shantha Kumari