ಜಿಮ್.. ರೂಮ್.. ಕೆಂಪು ಮರಳು – ಮಂಗಳ ಗ್ರಹದಲ್ಲಿ ವಾಸಿಸುವವರಿಗೆ ಮನೆಗಳು ರೆಡಿ..!

ಜಿಮ್.. ರೂಮ್.. ಕೆಂಪು ಮರಳು – ಮಂಗಳ ಗ್ರಹದಲ್ಲಿ ವಾಸಿಸುವವರಿಗೆ ಮನೆಗಳು ರೆಡಿ..!

ಮಂಗಳ ಗ್ರಹದಲ್ಲಿ ಮನೆ ಹೇಗಿರಬಹುದು ಅನ್ನುವ ಕುತೂಹಲ ಪ್ರತಿಯೊಬ್ಬ ಬಾಹ್ಯಾಕಾಶ ಉತ್ಸಾಹಿಗೂ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಇಂತಹ ಕುತೂಹಲವನ್ನ ನಿವಾರಿಸುವ ಪ್ರಯತ್ನವೆಂಬಂತೆ ನಾಸಾ ಸಂಸ್ಥೆಯು 3D ಮುದ್ರಿತ ವಸತಿಗಳನ್ನ ಅನಾವರಣಗೊಳಿಸಿದೆ.

ಮಂಗಳ ಗ್ರಹದ ಹವಾಮಾನವನ್ನ ಅನುಕರಿಸುವ ಉದ್ದೇಶಕ್ಕಾಗಿ ನಾಸಾ ರಚಿಸಿದ ಈ ಮನೆಯಲ್ಲಿ ಸ್ವಯಂಸೇವಕರು ಕೆಲವು ತಿಂಗಳ ಮಟ್ಟಿಗೆ ವಾಸಿಸುತ್ತಾರೆ. ಇದು 3D-ಮುದ್ರಿತ ಮಂಗಳ ಸಿಮ್ಯುಲೇಶನ್ ಆವಾಸಸ್ಥಾನವಾಗಿದ್ದು, ಮುಂಬರುವ ತಿಂಗಳುಗಳಲ್ಲಿ, ಸ್ವಯಂಸೇವಕ ಸಿಬ್ಬಂದಿ ಪ್ರವೇಶಿಸುತ್ತಾರೆ. ಮನೆಯಲ್ಲಿ ನಾಲ್ಕು ಸಣ್ಣ ಕೋಣೆಗಳು, ಜಿಮ್ ಮತ್ತು ಸಾಕಷ್ಟು ಕೆಂಪು ಮರಳನ್ನು ಹೊಂದಿದೆ. ಕ್ರೂ ಹೆಲ್ತ್ ಅಂಡ್ ಪರ್ಫಾರ್ಮೆನ್ಸ್ ಎಕ್ಸ್‌ಪ್ಲೋರೇಶನ್ ಅನಲಾಗ್ (CHAPEA) ಎಂಬ ಮೂರು ಯೋಜಿತ ಪ್ರಯೋಗಗಳಿಗಾಗಿ ರಚಿಸಲಾದ ಸೌಲಭ್ಯವು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ ಬೃಹತ್ ಸಂಶೋಧನಾ ನೆಲೆಯಲ್ಲಿದೆ.

ಇದನ್ನೂ ಓದಿ : ಮಂಗಳನ ಅಂಗಳದಲ್ಲಿ ಚಲಿಸುವ ಮೋಡಗಳು! – ಫೋಟೋ ಸೆರೆಹಿಡಿದ ನಾಸಾ

ಸ್ವಯಂಸೇವಕರು 1,700-ಚದರ-ಅಡಿ ಮನೆಯೊಳಗೆ ವಾಸಿಸುತ್ತಾರೆ, ಇದನ್ನು “ಮಾರ್ಸ್ ಡ್ಯೂನ್ ಆಲ್ಫಾ” ಎಂದು ಕರೆಯುತ್ತಾರೆ. ಇದರಲ್ಲಿ ಎರಡು ಸ್ನಾನಗೃಹಗಳು, ಸಲಾಡ್ ಬೆಳೆಯುವ ಫಾರ್ಮ್, ವೈದ್ಯಕೀಯ ಆರೈಕೆಗೆ ಮೀಸಲಾದ ಕೋಣೆ ಮತ್ತು ವಿಶ್ರಾಂತಿಗಾಗಿ ಪ್ರದೇಶವಿದೆ ಮತ್ತು ಹಲವಾರು ಕಾರ್ಯಸ್ಥಳಗಳಿವೆ. ಕೆಂಪು ಗ್ರಹದ ಕಡಿಮೆ ಗುರುತ್ವಾಕರ್ಷಣೆಯನ್ನು ಅನುಕರಿಸಲು ಗಗನಯಾತ್ರಿಗಳು ತೇಲಾಡುವಂತೆ ನಡೆಯುವ ಟ್ರೆಡ್‌ಮಿಲ್ ಕೂಡ ಇದೆ.

ಮಾನವರು ಮಂಗಳ ಗ್ರಹಕ್ಕೆ ಕಾಲಿಟ್ಟಾಗ ಸಿಬ್ಬಂದಿಯರು, ಸಂಪನ್ಮೂಲ ಕೊರತೆ ಮತ್ತು ಸಲಕರಣೆಗಳ ವೈಫಲ್ಯದೊಂದಿಗೆ ಪರಿಸರದ ಒತ್ತಡ ಮತ್ತು ಅರೋಗ್ಯದ ಒತ್ತಡವನ್ನ ಎದುರಿಸಬೇಕಾಗುತ್ತದೆ. ಸಿಬ್ಬಂದಿ ಸದಸ್ಯರು ತಮ್ಮ ಪರಿಶೋಧನಾ ಸಾಮರ್ಥ್ಯಗಳನ್ನು ವಿಸ್ತರಿಸಲು ಮಂಗಳ ಗ್ರಹ ಯಾತ್ರಿಗಳಿಗೆ ಅಗತ್ಯವಿರುವ ರೊಬೊಟಿಕ್ ಅಂಶಗಳನ್ನು ಈ ಆವಾಸಸ್ಥಾನದಲ್ಲಿ ತಿಳಿದುಕೊಳ್ಳಲಿದ್ದಾರೆ. ಮಂಗಳ ಗ್ರಹದ ಆವಾಸಸ್ಥಾನದ ಅವಶ್ಯಕತೆಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ನಾಸಾ ಅಂತಹ ಮೂರು ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ.

suddiyaana