ನಾಸಾದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆಗೆ ಹಿನ್ನಡೆ! – ಗಗನಯಾನಿಗಳು ಚಂದ್ರನ ಮೇಲೆ ಇಳಿಯುವುದು ಮತ್ತಷ್ಟು ವಿಳಂಬ

ನಾಸಾದ ಮಹತ್ವಾಕಾಂಕ್ಷಿ ಚಂದ್ರಯಾನ ಯೋಜನೆಗೆ ಹಿನ್ನಡೆ! – ಗಗನಯಾನಿಗಳು ಚಂದ್ರನ ಮೇಲೆ ಇಳಿಯುವುದು ಮತ್ತಷ್ಟು ವಿಳಂಬ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಮಹತ್ವಾಕಾಂಕ್ಷಿ ಯೋಜನೆ ಆರ್ಟೆಮಿಸ್- 3 ಈ ವರ್ಷವೇ ಸಾಕಾರಗೊಳ್ಳಬೇಕಿತ್ತು. ಆದರೆ ಈಗ ತಾಂತ್ರಿಕ ಕಾರಣಗಳಿಂದಾಗಿ ಈ ಯೋಜನೆಯನ್ನು ಮುಂದೂಡಲಾಗಿದೆ. ಸುಮಾರು ಒಂದು ವರ್ಷದ ಮಟ್ಟಿಗೆ ಮುಂದೂಡಿಕೆಯಾಗಿದೆ. ಹೀಗಾಗಿ ನಾಲ್ವರು ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಕಳುಹಿಸುವ ಯೋಜನೆ ಮತ್ತಷ್ಟು ವಿಳಂಬವಾಗಿದೆ.

ಇದನ್ನೂ ಓದಿ: ಭಾರತದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಅಂತರಿಕ್ಷ ನಿಲ್ದಾಣ! – 2028ರ ಹೊತ್ತಿಗೆ ಇಸ್ರೋ ಹೊಸ ಮೈಲುಗಲ್ಲು!

ಹೌದು, ನಾಲ್ವರು ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆ ಆರ್ಟೆಮಿಸ್- 3 ಮುಂದೂಡಿಕೆಯಾಗಿದೆ. ಪರೀಕ್ಷಾರ್ಥ ‘ಆರ್ಟೆಮಿಸ್‌-2’ ಯೋಜನೆಯಲ್ಲಿ ಒಂದು ವರ್ಷದ ಮಟ್ಟಿಗೆ ಮುಂದೂಡಿಕೆ ಮಾಡಲಾಗಿದೆ. ಇದರಲ್ಲಿ, ಮೊದಲನೇ ಬಾರಿಗೆ ಮಹಿಳೆಯೊಬ್ಬರು ಚಂದ್ರನಲ್ಲಿಗೆ ಪಯಣಿಸಬೇಕಿತ್ತು. ಸದ್ಯದ ಮಾಹಿತಿಯಂತೆ ನಾಸಾ ‘ಆರ್ಟೆಮಿಸ್‌-2’ ಯೋಜನೆ 2025ರ ಸೆಪ್ಟೆಂಬರ್‌ನಲ್ಲಿ ಸಾಕಾರಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ವರ್ಷದಲ್ಲಿಯೇ ಯೋಜನೆ ಸಾಕಾರಗೊಳ್ಳಬೇಕಿತ್ತು.

ಬೃಹತ್‌ ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ಮೂಲಕ ರಾಕೆಟ್‌ ಹಾಗೂ ಓರಿಯನ್‌ ಕ್ಯಾಪ್ಸೂಲ್‌ ಬಳಸಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲ ಮಿಷನ್‌ ‘ಆರ್ಟೆಮಿಸ್‌-2’ ಆಗಿತ್ತು. ಆದರೆ, ಕ್ಯಾಪ್ಸೂಲ್‌ನಲ್ಲಿರುವ ಗಗನಯಾತ್ರಿಗಳಿಗೆ ಉಂಟಾಗಬಹುದಾದ ಸಂಭಾವ್ಯ ಅಪಾಯಗಳನ್ನು ನಿವಾರಿಸುವುದಕ್ಕಾಗಿ, ತಾಂತ್ರಿಕ ದೋಷಗಳನ್ನು ಸರಿಪಡಿಸಲು ನಾಸಾ ಯೋಜನೆಯನ್ನು ಮುಂದಕ್ಕೆ ತಳ್ಳಿದೆ. ಇನ್ನುಳಿದಂತೆ ‘ಆರ್ಟೆಮಿಸ್‌-3’ ಯೋಜನೆಯನ್ನು 2026ರಂದು ನಡೆಸುವ ಗುರಿ ಇರಿಸಿಕೊಳ್ಳಲಾಗಿದೆ. ಅದೇ ರೀತಿ ‘ಆರ್ಟೆಮಿಸ್‌-4’ 2028ರಂದು ನಡೆಯಲಿದೆ. ‘ಆರ್ಟೆಮಿಸ್‌-3’ ಯೋಜನೆಯು ಗಗನಯಾನಿಗಳನ್ನು ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿಸುವ ಗುರಿಯನ್ನು ಹೊಂದಿದೆ.

ನಾಸಾವು ಮೊದಲ ಬಾರಿಗೆ ಚಂದ್ರನ ಮೇಲೆ ಮಾನವರನ್ನು ಇಳಿಸಿದ 1960-70ರ ದಶಕದ ಯೋಜನೆ ಅಪೋಲೋಗಿಂತ ಆರ್ಟೆಮಿಸ್‌ ಭಿನ್ನವಾಗಿದೆ. ಅಪೋಲೊ ಯೋಜನೆಯಲ್ಲಿ 3 ಗಗನಯಾತ್ರಿಗಳು ತೆರಳಿದ್ದರೆ, ಆರ್ಟೆಮಿಸ್‌ನಲ್ಲಿ ನಾಲ್ವರು ತೆರಳಲಿದ್ದಾರೆ. ಈ ವಾಹನದಲ್ಲಿ ಆರು ಜನರವರೆಗೂ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ. ಆರ್ಟೆಮಿಸ್‌ 2ರ ಓರಿಯನ್‌ ಕ್ಯಾಪ್ಸೂಲ್‌ ಭೂಮಿಯಿಂದ ಚಂದ್ರನವರೆಗೆ ಸುಮಾರು 2.40 ಲಕ್ಷ ಮೈಲು ದೂರ ಕ್ರಮಿಸಲಿದೆ. ಗುರಿ ತಲುಪಿದ ಬಳಿಕ ಚಂದ್ರನ ಗುರುತ್ವಾಕರ್ಷಣೆ ಬಲವನ್ನು ಬಳಸಿಕೊಂಡು ಭೂಮಿಗೆ ಹಿಂತಿರುಗಿ ಪೆಸಿಫಿಕ್‌ ಮಹಾಸಾಗರದಲ್ಲಿ ಬೀಳುತ್ತದೆ. ಇದು 10 ದಿನಗಳನ್ನು ತೆಗೆದುಕೊಳ್ಳಲಿದೆ.

Shwetha M