ಚಂದ್ರನತ್ತ ಪ್ರಯಾಣಕ್ಕೆ ಸಜ್ಜಾದ ನಾಲ್ವರು ಗಗನಯಾನಿಗಳು – ಯಾರ್ಯಾರು & ಹೇಗಿದೆ ಸಿದ್ಧತೆ?
ಆರ್ಟಿಮಿಸ್-1 ಮಿಷನ್ ಯಶಸ್ವಿಯಾಗಿ ನಡೆದ ನಂತರ ನಾಸಾ ಸಂಸ್ಥೆ ತನ್ನ ಮುಂದಿನ ಹೆಜ್ಜೆ ಇಟ್ಟಿದೆ. ಆರ್ಟಿಮಿಸ್ -2 ರ ಭಾಗವಾಗಿ ಚಂದ್ರನತ್ತ ಪ್ರಯಾಣಿಸುವ ನಾಲ್ಕು ಗಗನಯಾತ್ರಿಗಳ ಹೆಸರನ್ನ ಸಂಸ್ಥೆ ಪರಿಚಯಿಸಿದೆ.
ನಾಲ್ಕು ಗಗನಯಾತ್ರಿಗಳಲ್ಲಿ ಮೂವರು ಅಮೆರಿಕನ್ ಮತ್ತು ಒಬ್ಬ ಕೆನಡಿಯನ್ ಚಂದ್ರನ ಸುತ್ತ ಹಾರಲು ಪ್ರಯಾಣವನ್ನು ಕೈಗೊಳ್ಳಲಿದ್ದಾರೆ. ನಾಸಾ ಗಗನಯಾತ್ರಿಗಳಾದ ಕಮಾಂಡರ್ ರೀಡ್ ವೈಸ್‌ಮನ್, ಪೈಲಟ್ ವಿಕ್ಟರ್ ಗ್ಲೋವರ್, ಮಿಷನ್ ಸ್ಪೆಷಲಿಸ್ಟ್ ಕ್ರಿಸ್ಟಿನಾ ಕೋಚ್ ಮತ್ತು ಕೆನಡಾದ ಬಾಹ್ಯಾಕಾಶ ಏಜೆನ್ಸಿಯ ಮಿಷನ್ ಸ್ಪೆಷಲಿಸ್ಟ್ ಜೆರೆಮಿ ಹ್ಯಾನ್ಸೆನ್ ಚಂದ್ರನತ್ತ ಪ್ರಯಾಣಿಸುವ ನಾಲ್ವರು ಗಗನಯಾತ್ರಿಗಳು. ಅಂದಹಾಗೇ ಈ ತಂಡದಲ್ಲಿ ಈ ಯಾನದ ಮೊದಲ ಮಹಿಳಾ ಗಗನಯಾನಿಯೊಬ್ಬರಿದ್ದಾರೆ ಮತ್ತೂ ಚಂದ್ರಯಾನ ಮಾಡಲಿರುವ ಮೊದಲ ಕಪ್ಪುವರ್ಣೀಯ ಗಗನಯಾನಿಯೂ ತಂಡದಲ್ಲಿದ್ದಾರೆ.
ಇದನ್ನೂ ಓದಿ : ಮಂಗಳನ ಅಂಗಳದಲ್ಲಿ ಚಲಿಸುವ ಮೋಡಗಳು! – ಫೋಟೋ ಸೆರೆಹಿಡಿದ ನಾಸಾ
ನಿರಂತರ ಬಾಹ್ಯಾಕಾಶ ಯಾನದ ದಾಖಲೆಯನ್ನು ಹೊಂದಿರುವ ಮಹಿಳೆ ಕ್ರಿಸ್ಟಿನಾ ಕೋಚ್ ಅವರು ಆರ್ಟಿಮಿಸ್ -2 ರ ಪೈಲಟ್ ಆಗಿರುತ್ತಾರೆ. ಇವರನ್ನು ಈ ಮಿಷನ್‌ನ ಸ್ಪೆಷಲಿಸ್ಟ್ ಆಗಿ ಗುರುತಿಸಲಾಗಿದೆ. ಆರ್ಟೆಮಿಸ್ ಮಿಷನ್ ಮೂಲಕ ಮೊದಲ ಬಾರಿಗೆ ಚಂದ್ರಯಾನ ಕೈಗೊಳ್ಳುವ ಮಹಿಳೆ ಇವರಾಗಲಿದ್ದಾರೆ. ಸ್ಪೇಸ್‌ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್‌ನ ಎರಡನೇ ಸಿಬ್ಬಂದಿ ಹಾರಾಟದಲ್ಲಿ ಭಾಗವಹಿಸಿದ್ದ ಗ್ಲೋವರ್ ಅವರು ನಾಸಾದ ಚಂದ್ರನ ಕಾರ್ಯಾಚರಣೆಗೆ ಕಳುಹಿಸುವ ತಂಡದ ಮೊದಲ ಕಪ್ಪು ವರ್ಣೀಯ ಗಗನಯಾತ್ರಿಯಾಗುತ್ತಾರೆ. ಇವರು ಚಂದ್ರಯಾನ ಕೈಗೊಳ್ಳಲಿರುವ ಮೊದಲ ಕಪ್ಪು ವರ್ಣೀಯ ಗಗನಯಾನಿಯಾಗಲಿದ್ದಾರೆ.
ಆರ್ಟಿಮಿಸ್-2 ಮಿಷನ್ 2024 ರ ನವೆಂಬರ್ ನಲ್ಲಿ ಉಡಾವಣೆಯಾಗಲಿದೆ. ಇದು ಚಂದ್ರನ ಸುತ್ತ ಹಾರುವ ಪ್ರಯಾಣವನ್ನ ಕೈಗೊಳ್ಳಲಿದೆ. 1969 ರಿಂದ 1972 ರ ವರೆಗೆ ನಡೆದ ಅಪೋಲೋ ಮಿಷನ್ ನಂತರ ಇದೇ ಮೊದಲ ಬಾರಿಗೆ ಮಾನವರು ಚಂದ್ರನ ಬಳಿ ಸುಳಿಯಲಿದ್ದಾರೆ. ಆದರೆ ಚಂದ್ರನ ಮೇಲೆ ಕಾಲಿಡುವ ಪ್ರಯತ್ನವೂ ಆರ್ಟಿಮಿಸ್-3 ಮಿಷನ್ ನಲ್ಲಿ ನಡೆಯಲಿದೆ.
ಆರ್ಟಿಮಿಸ್-2 ಮಿಷನ್ ಚಂದ್ರನ ಸುತ್ತ ಮಾತ್ರ ಏಕೆ ಹಾರುತ್ತದೆ?
ಜುಲೈ 20, 1969 ರಲ್ಲಿ ರಲ್ಲಿ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಡುವ ಮೂಲಕ ಅಪೋಲೋ ಮಿಷನ್ ಮೊದಲ ಬಾರಿಗೆ ಮಾನವನನ್ನ ಚಂದ್ರನ ಮೇಲೆ ಇಳಿಸಿತ್ತು. ಈ ಹಂತದಲ್ಲಿ ನಡೆದ ಒಟ್ಟು 6 ಮಿಷನ್ ಗಳಲ್ಲಿ 12 ಗಗನಯಾತ್ರಿಗಳನ್ನ ಚಂದ್ರನ ಬಳಿ ಕಳುಹಿಸಿತ್ತು. ಆದರೆ ಆರ್ಟಿಮಿಸ್-2 ಚಂದ್ರನ ಸುತ್ತ ಮಾತ್ರ ಹಾರಲಿದೆ. ಯಾಕಂದರೆ ಕಳೆದ 50 ವರುಷಗಳಲ್ಲಿ ಬಾಹ್ಯಾಕಾಶ ಅಂಗವಾಗಿ ಹಲವಾರು ತಂತ್ರಜ್ಞಾನಗಳು ಬಂದಿವೆ. ಆದ್ದರಿಂದ 2025 ರಲ್ಲಿ ಆರ್ಟೆಮಿಸ್ 3 ಮಿಷನ್‌ನೊಂದಿಗೆ ಮತ್ತೊಮ್ಮೆ ಚಂದ್ರನ ಮೇಲ್ಮೈಯಲ್ಲಿ ಮಾನವರನ್ನು ಇಳಿಸುವ ಮೊದಲು ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಸಂಸ್ಥೆ ಯೋಜಿಸಿದೆ
ಈ ಕಾರ್ಯಾಚರಣೆಯು ಓರಿಯನ್ ನೌಕೆಯು ನಮ್ಮ ಗಗನಯಾತ್ರಿಗಳನ್ನು ಮುಂದೆ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ಉಳಿಸಿಕೊಳ್ಳಲು ಸಿದ್ಧವಾಗಿದೆ ಎಂದು ಸಾಬೀತುಪಡಿಸುತ್ತದೆ ಮತ್ತು ಆರ್ಟೆಮಿಸ್ 3 ರ ಯಶಸ್ಸಿಗೆ ಅಗತ್ಯವಾದ ಕಾರ್ಯಾಚರಣೆಗಳನ್ನು ಅಭ್ಯಾಸ ಮಾಡಲು ಸಿಬ್ಬಂದಿಗೆ ಅವಕಾಶ ನೀಡುತ್ತದೆ.
ಇದಲ್ಲದೆ, ಬಾಹ್ಯಾಕಾಶ ಪರಿಸರವು ಚಂದ್ರನ ಸುತ್ತ ತೀವ್ರವಾದ ವಿಕಿರಣ ಮಟ್ಟವನ್ನು ಹೊಂದಿದೆ ಎಂದು NASA ಹೇಳುತ್ತದೆ. ಇದು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಿರುವ ಕೆಳ ಭೂಮಿಯ ಕಕ್ಷೆಗಿಂತ ಹೆಚ್ಚು. ಆದ್ದರಿಂದ ಈ ವಿಕಿರಣದಿಂದ ಗಗನಯಾತ್ರಿಗಳನ್ನು ರಕ್ಷಿಸಲು ಮತ್ತು ಕಾರ್ಯಾಚರಣೆಯ ಉದ್ದಕ್ಕೂ ಅವರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿಡಲು ಓರಿಯನ್ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಡೇಟಾ ಅಗತ್ಯವಿದೆ.