ಹನುಮನಂತೆ ‘NASA’ ಸಾಹಸ – ಸೂರ್ಯನಿಂದ ನೌಕೆ ಜಸ್ಟ್ ಮಿಸ್
61 ಲಕ್ಷ KM ಹತ್ತಿರವಿದ್ರೂ ಸುಡಲಿಲ್ಲ
ಲಕ್ಷಾಂತರ ಕಿಲೋ ಮೀಟರ್ ದೂರ ಇರೋ ಸೂರ್ಯನ ಶಾಕ ನಮ್ಗೆ ತಡೆಯೋಕೆ ಆಗಲ್ಲ.. ಹೀಗಿರುವಾಗ ನಾಸಾ ಪ್ರಪಂಚವೇ ಬೆಕ್ಕಸ ಬೆರಗಾಗುವಂತೆ ಸಾಧನೆ ಮಾಡಿದೆ. ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನಿಗೆ ಅತ್ಯಂತ ಸಮೀಪ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಈ ನೌಕೆ ಸೂರ್ಯನಿಗೆ ಎಷ್ಟು ಹತ್ತಿರವಿತ್ತು ಅಂದ್ರೆ ಕೇವಲ 61 ಲಕ್ಷ ಕಿಲೋಮೀಟರ್ ದೂರದಲ್ಲಿ ಹೋಗಿ ಸಾಧನೆ ಮಾಡಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಸೂರ್ಯನ ಅತ್ಯಂತ ಹತ್ತಿರಕ್ಕೆ ತೆರಳಿದೆ ಎಂದು ಘೋಷಿಸಿದೆ. ಅಷ್ಟೇ ಅಲ್ಲ, ನಮ್ಮ ನೌಕೆ ಸಂಪೂರ್ಣ ಸುರಕ್ಷಿತವಾಗಿದ್ದು, ನಾವು ನಮ್ಮ ನೌಕೆಯ ಸಂಪರ್ಕ ಮಾಡಲಾಗಿದೆ ಎಂದು ತಿಳಿಸಿದೆ.
ಸುಡುವ ಸೌರ ಜ್ವಾಲೆಗಳ ನಡುವೆ ಹೊರ ಬಂದ ನೌಕೆ
ನಿಮ್ಗೆ ಗೊತ್ತಿರಲಿ.. ಇಲ್ಲಿಯವರೆಗೆ ಯಾವುದೇ ಬಾಹ್ಯಾಕಾಶ ನೌಕೆಯು ಈ ನಾಸಾ ಬಾಹ್ಯಾಕಾಶ ನೌಕೆ ತಲುಪಿದ ದೂರವನ್ನು ತಲುಪಲು ಸಾಧ್ಯವಾಗಿಲ್ಲ. ಈ ಬಾಹ್ಯಾಕಾಶ ನೌಕೆಯು ಸುಡುವ ಸೌರ ಜ್ವಾಲೆಗಳ ನಡುವೆ ಹೊರ ಬಂದಿದೆ. ಬಾಹ್ಯಾಕಾಶ ನೌಕೆಯು ತನ್ನ ಸ್ಥಾನದ ಬಗ್ಗೆ ವಿವರವಾದ ಟೆಲಿಮೆಟ್ರಿ ಡೇಟಾವನ್ನು ಜನವರಿಯಲ್ಲಿ ಕಳುಹಿಸುವ ನಿರೀಕ್ಷೆಯಿದೆ ಎಂದು ನಾಸಾ ಹೇಳಿಕೊಂಡಿದೆ.
ಅತ್ಯಂತ ಬಿಸಿಯಾದ ವಾತಾವರಣದಲ್ಲಿ ಹಲವಾರು ದಿನಗಳ ಕಾಲ ಹಾರಾಟ ನಡೆಸಿದ ನಂತರ ನಾಸಾದ ಪಾರ್ಕರ್ ನೌಕೆ ನಾಸಾದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು. ಆಗ ನಾಸಾ ವಿಜ್ಞಾನಿಗಳ ಎದೆಬಡಿತ ಹೆಚ್ಚಾಯಿತು. ಸೂರ್ಯನ ಬೆಂಕಿಯಿಂದ ಅದು ನಾಶವಾಗಿದೆ ಅನ್ನೋ ಭಯ ಹೆಚ್ಚಾಗಿತ್ತು. ಗುರುವಾರ ರಾತ್ರಿ ಪಾರ್ಕರ್ ಸೋಲಾರ್ ಪ್ರೋಬ್ ವಿಜ್ಞಾನಿಗಳಿಗೆ ಸಂದೇಶ ರವಾನಿಸಿದ್ದು, ಇದನ್ನು ಕಂಡು ವಿಜ್ಞಾನಿಗಳು ಸಂತಸದಿಂದ ಕುಣಿದಿದ್ದಾರೆ..
ಸೂರ್ಯನ ಬಗ್ಗೆ ಮಾಹಿತಿ ನೀಡುತ್ತೆ ಈ ನೌಕೆ
2018ರಲ್ಲಿ ಉಡಾವಣೆಗೊಂಡ ಪಾರ್ಕರ್ ಸೋಲಾರ್ ಪ್ರೋಬ್‌ನ ಬಾಹ್ಯಾ ಕಾಶ ನೌಕೆಯು ಸೂರ್ಯನ ಸಮೀಪಕ್ಕೆ ತೆರಳಲು ಅಂದಿನಿಂದಲೂ ಸುತ್ತು ಹಾಕುತ್ತ ಪ್ರಯತ್ನಿಸುತ್ತಲೇ ಇದೆ. ಸೂರ್ಯನ ಮೇಲ್ಮೈನಿಂದ 61 ಲಕ್ಷ ಕಿ.ಮೀ. ದೂರಕ್ಕೆ ಪಾರ್ಕರ್ ಡಿ. 24 ರಂದು ತಲುಪಿದ್ದು, ಅಲ್ಲಿಂದ ಸುರಕ್ಷಿತವಾಗಿ ಪಾರಾಗಿ ಕೊರೋನಾದತ್ತ ಮುನ್ನುಗ್ಗುತ್ತಿದೆ. ಮಾನವರು ತಯಾರಿಸಿದ ಅತ್ಯಂತ ವೇಗದ ನೌಕೆ ಇದಾಗಿದೆ. ಪಾರ್ಕರ್ ಸೋಲಾರ್ ಪ್ರೋಬ್ ಅನ್ನು 980 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಡೆದುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಒದಗಿಸುವ ಮಾಹಿತಿಯು ಸೂರ್ಯನ ಕರೋನಾದಲ್ಲಿನ ಯಾವುದೇ ವಸ್ತುವು ಲಕ್ಷಾಂತರ ಡಿಗ್ರಿ ಸೆಲ್ಸಿಯಸ್‌ಗೆ ಹೇಗೆ ಬಿಸಿಯಾಗುತ್ತದೆ ಎಂಬುದನ್ನು ತಿಳಿಸುತ್ತೆ… ಸೂರ್ಯನಿಂದ ಹೊರಹೊಮ್ಮುವ ಗಾಳಿಯು ಏಕೆ ತುಂಬಾ ಬಿಸಿಯಾಗಿರುತ್ತದೆ ಮತ್ತು ಅವುಗಳಿಂದ ಶಾಖವು ಹೇಗೆ ಹೊರಬರುತ್ತದೆ ಎಂಬುದರ ಕುರಿತು ಅಧ್ಯಯನ ನಡೆಸಲಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ ಇಂಥ ಸಾಹಸಕ್ಕೆ ನಾಸಾ ಕೈಹಾಕಿ ಯಶ ಕಂಡಿದೆ.