ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯೇ ಬಿಜೆಪಿಗೆ ದೊಡ್ಡ ಅಸ್ತ್ರ – ರಾಮಮಂದಿರ ಲೋಕಾರ್ಪಣೆ ಮೂಲಕ ಕೋಟ್ಯಂತರ ಹಿಂದೂ ಮತಗಳಿಗೆ ಗಾಳ

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯೇ ಬಿಜೆಪಿಗೆ ದೊಡ್ಡ ಅಸ್ತ್ರ – ರಾಮಮಂದಿರ ಲೋಕಾರ್ಪಣೆ ಮೂಲಕ ಕೋಟ್ಯಂತರ ಹಿಂದೂ ಮತಗಳಿಗೆ ಗಾಳ

ಲೋಸಕಭಾ ಚುನಾವಣೆ ಕಾವು ಕ್ಷಣಕ್ಷಣಕ್ಕೂ ರಂಗೇರ್ತಿದ್ದು, ಪಕ್ಷಗಳ ತಂತ್ರಗಾರಿಕೆಯೂ ಜೋರಾಗ್ತಿದೆ. ಒಂದ್ಕಡೆ ಕಾಂಗ್ರೆಸ್ ಪಕ್ಷ ಮೈತ್ರಿಕೂಟದ ಮಿತ್ರಪಕ್ಷಗಳೊಂದಿಗೆ ಸುಮಾರು 300 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ತಯಾರಿ ನಡೆಸ್ತಿದೆ. ಮತ್ತೊಂದೆಡೆ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಭರ್ಜರಿ ಗೇಮ್ ಪ್ಲ್ಯಾನ್ ರೆಡಿ ಮಾಡಿದೆ. ಚುನಾವಣೆಯಲ್ಲಿ ಬಿಜೆಪಿ 450ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ವೇದಿಕೆ ಸಿದ್ಧ ಮಾಡ್ತಿದೆ. 2019 ರ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿತ್ತು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 436 ಸ್ಥಾನಗಳಲ್ಲಿ ಸ್ಪರ್ಧಿಸಿ 303 ಸ್ಥಾನಗಳನ್ನು ಗೆದ್ದಿತ್ತು. ದೇಶಾದ್ಯಂತ 22.9 ಕೋಟಿ ಮತಗಳನ್ನು ಗಳಿಸಿ 37.7 ಶೇಕಡಾ ಮತಗಳನ್ನು ಪಡೆದಿತ್ತು. ಇದೀಗ ಮತ್ತೊಮ್ಮೆ ಇತಿಹಾಸ ನಿರ್ಮಿಸಲು ಸಕಲ ತಯಾರಿ ಆರಂಭಿಸಿದೆ.

ಇದನ್ನೂ ಓದಿ:ರಾಷ್ಟ್ರ ಮಟ್ಟದಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಸದ್ದು – ಅಭ್ಯರ್ಥಿ ರೇಸ್ ನಲ್ಲಿ ಘಟಾನುಘಟಿಗಳ ತಂತ್ರಗಾರಿಕೆ

ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ!

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 421 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದ್ರೆ ಗೆಲುವು ಮಾತ್ರ ಎರಡಂಕಿ ದಾಟಿರಲಿಲ್ಲ. ಹೀಗಾಗಿ ಈ ಸಲ 290 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸಲು ಯೋಜಿಸುತ್ತಿದೆ. ಉಳಿದ ಕ್ಷೇತ್ರಗಳನ್ನ ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಡಲಿದೆ. ಆದರೆ ಬಿಜೆಪಿ ಮಾತ್ರ 450ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಲು ಅಖಾಡ ರೆಡಿ ಮಾಡ್ತಿದೆ. 2019 ರಲ್ಲಿ, ಬಿಜೆಪಿ ಬಿಹಾರದ 40 ಸ್ಥಾನಗಳ ಪೈಕಿ 17, ಮಹಾರಾಷ್ಟ್ರದ 48 ರಲ್ಲಿ 25 ಮತ್ತು ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 5 ರಲ್ಲಿ ಮಾತ್ರ ಸ್ಪರ್ಧಿಸಿತ್ತು. ಪಂಜಾಬ್‌ನ 13 ಸ್ಥಾನಗಳಲ್ಲಿ ಬಿಜೆಪಿ ಕೇವಲ ಮೂರು ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಆದ್ರೆ ಈ ಬಾರಿ ಬಿಜೆಪಿ ಈ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳಲ್ಲಿ ಚುನಾವಣೆ ಎದುರಿಸಲು ಬಯಸಿದೆ.

2014 ಹಾಗೂ 2019ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಬಿಜೆಪಿ ನಾಯಕರಿಗೆ ಈ ಬಾರಿಯೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದೆಂಬ ವಿಶ್ವಾಸ ಹೆಚ್ಚಾಗುತ್ತಿದೆ. ಅಲ್ಲದೆ ಪ್ರಧಾನಿ ಮೋದಿಯವ್ರನ್ನೇ ಪ್ರಚಾರದ ದೊಡ್ಡ ಅಸ್ತ್ರವಾಗಿ ಬಳಸೋಕೆ ಯೋಜನೆ ರೂಪಿಸಿದೆ. ಹಾಗೇ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಪ್ರಚಾರ ಮಾಡಲು ಬಿಜೆಪಿ ಪ್ಲ್ಯಾನ್ ಮಾಡಿದೆ.

ಮೋದಿ ಅಲೆ & ಪ್ರಚಾರ! 

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯೇ ಬಿಜೆಪಿಗೆ ಬಹುದೊಡ್ಡ ಅಸ್ತ್ರ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದು ಮಾಡಿದ್ದು, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಮೂಲಕ ಕೋಟ್ಯಂತರ ಹಿಂದೂ ಮತಗಳನ್ನ ಸೆಳೆಯುವುದು. ಪ್ರಧಾನಮಂತ್ರಿ ಉಜ್ವಲ ಯೋಜನೆ, ಜನೌಷಧಿ ಕೇಂದ್ರಗಳು ಹಾಗೂ ಕೊರೊನಾ ಲಸಿಕೆ, ಡಿಜಿಟಲ್ ಇಂಡಿಯಾ ಹೀಗೆ ಹಲವು ವಿಚಾರಗಳನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಮುಂದಾಗಿದೆ. ಹೀಗಾಗಿ 2019 ಕ್ಕಿಂತ ಈ ಸಲ ಮತ್ತಷ್ಟು ಕ್ಷೇತ್ರಗಳಲ್ಲಿ ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿದೆ.

ಬಿಜೆಪಿ ಹಾಗೂ ಮೋದಿಯವ್ರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕೋಕೆ ವಿಪಕ್ಷಗಳೆಲ್ಲಾ ಒಗ್ಗೂಡಿ ಮೈತ್ರಿ ಮಾಡಿಕೊಂಡಿವೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ತಂತ್ರಗಾರಿಕೆಯನ್ನೂ ಶುರು ಮಾಡಿವೆ. ಆದ್ರೆ ಬಿಜೆಪಿ ಮಾತ್ರ ಚುನಾವಣೆ ಹೊತ್ತಿಗೆ ರಾಮಮಂದಿರ ಅನ್ನೋ ಬಹುದೊಡ್ಡ ಅಸ್ತ್ರವನ್ನೇ ರೆಡಿ ಮಾಡಿಕೊಂಡಿದೆ. ಹಾಗೇ ತಮ್ಮ 10 ವರ್ಷಗಳ ಆಡಳಿತಾವಧಿಯ ವಿಚಾರಗಳನ್ನೇ ಮುಂದಿಟ್ಟುಕೊಂಡು ಮತ ಕೇಳೋಕೆ ತಯಾರಿ ನಡೆಸಿದ್ದಾರೆ.

Sulekha