ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು – ಮೋದಿ

ಜನತಾ ಜನಾರ್ದನರಿಗೆ ನಮಿಸುತ್ತೇವೆ, ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು – ಮೋದಿ

ನವದೆಹಲಿ: ಪಂಚರಾಜ್ಯ ಚುನಾವಣೆಗಳಲ್ಲಿ ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ ಹೊರಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಛತ್ತೀಸ್​ಗಡ ರಾಜ್ಯಗಳಲ್ಲಿ ಬಿಜೆಪಿ ಗೆದ್ದು ಬೀಗಿದೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಪಾಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯನ್ನು ಆಶೀರ್ವದಿಸಿದ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಮೂರು ರಾಜ್ಯಗಳಲ್ಲಿ ಧೂಳಿಪಟವಾದ ಕಾಂಗ್ರೆಸ್‌ – ತೆಲಂಗಾಣದಲ್ಲಿ ಕೈ ಕಮಾಲ್‌

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಜನತಾ ಜನಾರ್ದನರಿಗೆ ನಮಿಸುತ್ತೇವೆ. ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಫಲಿತಾಂಶಗಳಲ್ಲಿ ಭಾರತದ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯದೊಂದಿಗೆ ದೃಢವಾಗಿ ನಿಂತಿದ್ದಾರೆ. ಈ ರಾಜ್ಯಗಳ ಜನರಿಗೆ ಅವರ ಅಚಲ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಅಲ್ಲಿನ ಜನರ ಯೋಗಕ್ಷೇಮಕ್ಕಾಗಿ ನಾವು ದಣಿವರಿಯದೆ ಶ್ರಮಿಸುತ್ತೇವೆ ಎಂದು ಭರವಸೆ ನೀಡುತ್ತೇನೆ. ಚುನಾವಣೆಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ವಿಶೇಷವಾದ ಧನ್ಯವಾದಗಳು. ಅವರ ಪ್ರತಿಯೊಂದು ಕೆಲಸ ಅನುಕರಣೀಯ. ದಣಿವರಿಯದೆ ಕೆಲಸ ಮಾಡಿ ನಮ್ಮ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸಿದ್ದಾರೆ ಎಂದಿದ್ದಾರೆ.

ಇನ್ನು ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಎರಡಂಕಿ ಸಂಖ್ಯೆ ದಾಟದೇ ಹೋದರೂ ಕಳೆದ ಚುನಾವಣೆಗಿಂತ ಸಾಕಷ್ಟು ಉತ್ತಮ ಫಲಿತಾಂಶ ಪಡೆದಿದೆ. ಕಳೆದ ಕೆಲ ವರ್ಷಗಳಿಂದ ಈ ರಾಜ್ಯದಲ್ಲಿ ಬಿಜೆಪಿ ಬಲವೃದ್ಧಿ ಸತತವಾಗಿ ಆಗುತ್ತಿದೆ. ಈ ವಿಚಾರವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್‌ ಮಾಡಿ ತೆಲಂಗಾಣ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ನನ್ನ ಪ್ರೀತಿಯ ತೆಲಂಗಾಣದ ಸಹೋದರ, ಸಹೋದರಿಯರೇ, ಬಿಜೆಪಿಗೆ ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು. ಕಳೆದ ಕೆಲವು ವರ್ಷಗಳಿಂದ ಈ ಬೆಂಬಲವು ಹೆಚ್ಚುತ್ತಿದೆ. ಈ ಪ್ರವೃತ್ತಿಯು ಮುಂಬರುವ ಸಮಯದಲ್ಲೂ ಮುಂದುವರಿಯುತ್ತದೆ. ತೆಲಂಗಾಣದೊಂದಿಗಿನ ನಮ್ಮ ಬಾಂಧವ್ಯ ಮುರಿಯಲಾಗದು. ನಾವು ತೆಲಂಗಾಣ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರ ಶ್ರಮ ಮತ್ತು ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Shwetha M