ತೀವ್ರಗೊಂಡ ಕರವೇ ಹೋರಾಟದ ಕಿಚ್ಚು – ರಾತ್ರೋರಾತ್ರಿ ನಾರಾಯಣಗೌಡ ಅರೆಸ್ಟ್, 14 ದಿನ ನ್ಯಾಯಾಂಗ ಬಂಧನ
ಅಂಗಡಿಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬಣ ನಡೆಸುತ್ತಿರುವ ಹೋರಾಟ ತೀವ್ರಗೊಳ್ಳುತ್ತಿದೆ. ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿಲ್ಲಿಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟದ ಕಿಚ್ಚು ಜೋರಾಗುತ್ತಿದ್ದಂತೆ ಬುಧವಾರ ರಾತ್ರೋರಾತ್ರಿ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಬಂಧಿಸಲಾಗಿದೆ. ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಬುಧವಾರ ರಾತ್ರಿ ಇಂಗ್ಲಿಷ್ ನಾಮಫಲಕಗಳ ವಿರುದ್ಧ ಹೋರಾಟ ಮಾಡಿದ ಕರವೇ ನಾರಾಯಣಗೌರನ್ನ ಅರೆಸ್ಟ್ ಮಾಡಲಾಗಿದೆ. ಬಳಿಕ ಅವರನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಲಾಗಿತ್ತು. ಡಿಸಿಪಿ ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರಿಗೆ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಗುರುವಾರ ನಸುಕಿನ ಜಾವ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನರನ್ನು ದೇವನಹಳ್ಳಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಬಳಿಕ 29 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಜನವರಿ 10ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಬಂಧಿತರನ್ನು ಪರಪ್ಪನ ಅಗ್ರಹಾರ ಕಾರಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಕರವೇ ಸಧ್ಯಕ್ಷ ನಾರಾಯಣಗೌಡ ಅವರ ಬಂಧನ ಹಿನ್ನೆಲೆಯಲ್ಲಿ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ. ನಾರಾಯಣಗೌಡರನ್ನ ಅರೆಸ್ಟ್ ಮಾಡೋ ಮೊದಲೇ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಾರಾಯಣಗೌಡರನ್ನ ಅರೆಸ್ಟ್ ಮಾಡಿದ್ರೆ ನಾವು ಸುಮ್ಮನೆ ಇರಲ್ಲ. ಅರೆಸ್ಟ್ ಮಾಡಿದ್ರೆ ಪರಿಸ್ಥಿತಿ ಬೇರೆ ತರ ಇರುತ್ತೆ. ನಾಡಲ್ಲಿ ಬೆಂಕಿ ಹತ್ಕೊಂಡು ಉರಿಯುತ್ತೆ ಎಂದು ಕಿಡಿಕಾರಿದ್ದಾರೆ. ಸಿಎಂ ಮನೆ ಮುಂದೆ ಮುತ್ತಿಗೆ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಿಎಂ ಮನೆ ಮುಂದೆ ಅಲರ್ಟ್ ಆದ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ. ಸಿಎಂ ಮನೆ, ಗೃಹ ಕಚೇರಿ ಮುಂದೆ ಹೆಚ್ಚುವರಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸದ ಬಳಿ ಹೆಚ್ಚು ಬ್ಯಾರಿಕೇಡ್ ಹಾಕಲಾಗಿದೆ. ಅಷ್ಟೇ ಅಲ್ಲದೇ ಮುತ್ತಿಗೆಗೆ ಮುಂದಾದವರ ವಶಕ್ಕೆ ಪಡೆಯಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.