ತಿರುಪತಿಗೆ ನಂದಿನಿ ತುಪ್ಪ ಸ್ಥಗಿತ – ಕೆಎಂಎಫ್ ಅಧ್ಯಕ್ಷರ ಮಾತು ಸತ್ಯಕ್ಕೆ ದೂರವಾದದ್ದು ಎಂದ ಟಿಟಿಡಿ
ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಇನ್ನು ಮುಂದೆ ತುಪ್ಪ ಪೂರೈಕೆ ಮಾಡುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದರು. ಈ ವಿಚಾರ ಇದೀಗ ಭಾರಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಟಿಟಿಡಿ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದೆ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಅನುಮತಿ ನೀಡಿಲ್ಲ ಎಂಬ ಕೆಎಂಎಫ್ ಅಧ್ಯಕ್ಷ ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಟಿಟಿಡಿ ಮಂಗಳವಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟಿಟಿಡಿಯ ಧರ್ಮಾರೆಡ್ಡಿ, ‘ಕೆಎಂಎಫ್ ಅಧ್ಯಕ್ಷರು ನೀಡಿರುವ ಹೇಳಿಕೆ ಸರಿಯಲ್ಲ. ತುಪ್ಪವೂ ಸೇರಿ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಟಿಟಿಡಿ ಇ–ಟೆಂಡರ್ ಮೂಲಕ ಸಂಗ್ರಹಿಸುತ್ತದೆ. ಇ–ಟೆಂಡರ್ ಮೂಲಕ ಭಾರತದಾದ್ಯಂತ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಟೆಂಡರ್ ತೆರೆಯುವವರೆಗೂ ಯಾರೆಲ್ಲಾ ಬಿಡ್ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯೂ ನಮಗೆ ಇರುವುದಿಲ್ಲ. ಟಿಟಿಡಿ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಇ-ಟೆಂಡರ್ ನಿಯಮಗಳ ಪ್ರಕಾರ ನಾವು ಬಿಡ್ ಅಂತಿಮಗೊಳಿಸುತ್ತೇವೆ. ಇ-ಟೆಂಡರ್ ನಲ್ಲಿ ಯಾರು ಕಡಿಮೆ ಮೊತ್ತಕ್ಕೆ ಗುಣಮಟ್ಟದ ತುಪ್ಪ ಸರಬರಾಜು ಮಾಡಲು ಒಪ್ಪಿಗೆ ನೀಡಿರುತ್ತಾರೆಯೋ ಅವರಿಗೆ ಗುತ್ತಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.
‘2005ರಿಂದಲೂ ಕೆಎಂಎಫ್ ತುಪ್ಪವನ್ನು ಪೂರೈಸುತ್ತಿತ್ತು. ತಿರುಪತಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೆ ಶೇ 45ರಷ್ಟು ನಂದಿನಿ ಬ್ರ್ಯಾಂಡ್ ತುಪ್ಪವನ್ನೇ ಬಳಸಲಾಗುತ್ತಿತ್ತು. 2022ರಲ್ಲಿ ಕೋರಿಕೆಯ ಮೇರೆಗೆ ಮಾತ್ರ ಪ್ರತಿ ಕೆ.ಜಿ.ಗೆ 349 ರೂನಂತೆ 345 ಟನ್ ತುಪ್ಪ ಪೂರೈಸಲಾಗಿತ್ತು. ಆದರೆ, ಈ ಬಾರಿ ತುಪ್ಪದ ಬೇಡಿಕೆ ನಮ್ಮ ರಾಜ್ಯದಲ್ಲೇ ಹೆಚ್ಚಾಗಿದ್ದು, ಸಂಗ್ರಹದ ಕೊರತೆಯೂ ಇದೆ. ಜತೆಗೆ, ನಿರೀಕ್ಷೆಗೆ ತಕ್ಕಂತೆ ನಮಗೆ ದರ ದೊರೆತಿಲ್ಲ. ಟಿಟಿಡಿ ಟೆಂಡರ್‌ನಲ್ಲಿ ನಾವು ನಿಗದಿಪಡಿಸಿದ ದರ ಮೂರನೇ ಸ್ಥಾನದಲ್ಲಿದೆ. ಹೀಗಾಗಿ, ಕೆಎಂಎಫ್ ತುಪ್ಪ ಪೂರೈಸುತ್ತಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದರು.
ಕೆಎಂಎಫ್ ಟೆಂಡರ್ ಕೈ ಬಿಟ್ಟಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ. ನಮ್ಮ ಹೆಮ್ಮೆಯ “ನಂದಿನಿ”ಗೆ ಮಾರುಕಟ್ಟೆಯಲ್ಲಿತನ್ನದೇ ಆದ ಸ್ಥಾನವಿದೆ. ಉತ್ತಮ ಹೆಸರಿದೆ. ಗುಣಮಟ್ಟದಲ್ಲೂ ರಾಜಿಯಾಗುವುದಿಲ್ಲ. ಬೆಲೆಯಲ್ಲೂ ರಾಜಿಯಾಗುವುದಿಲ್ಲ. ಟೆಂಡರ್ ಪಡೆಯಬೇಕು ಎಂಬ ಒಂದೇ ಉದ್ದೇಶಕ್ಕಾಗಿ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟಕ್ಕೆ ಗುರಿಯಾಗುವ ಅಗತ್ಯವಿಲ್ಲ. ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಯಾವ ಟೆಂಡರ್ ಕೈತಪ್ಪಿದರೂ ನಷ್ಟವಾಗುವುದಿಲ್ಲ ಎಂದು ಟ್ವೀಟ್ ಮಾಡಿದೆ.