ವ್ಯಾಲೆಂಟೈನ್ಸ್ ಡೇಗೆ ನಂದಿಹಿಲ್ಸ್ ಹೋಗುವ ಪ್ಲ್ಯಾನ್ ಇದ್ಯಾ- ನಿಮ್ಮ ಪ್ಲ್ಯಾನ್ ಈಗಲೇ ಚೇಂಜ್ ಮಾಡಿ, ಯಾಕೆ ಗೊತ್ತಾ?

ಫೆಬ್ರವರಿ 14 ಪ್ರೇಮಿಗಳ ದಿನ ..ಅವತ್ತು ನಮ್ಮ ಹುಡುಗಿ ಜೊತೆ ಅಥವಾ ಹುಡುಗನ ಜೊತೆ ನಂದಿ ಹಿಲ್ಸ್ಗೆ ಹೋಗಬೇಕು ಅಂತ ಪ್ಲ್ಯಾನ್ ಹಾಕಿದ್ರೆ, ಈಗಲೇ ಚೇಂಜ್ ಮಾಡಿ.ಯಾಕಂದ್ರೆ ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ಆದೇಶ ಹೊರಡಿಸಿದೆ.
ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಇರುವುದರಿಂದ, ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಯುವ ಜೋಡಿಗಳು, ಪ್ರೇಮಿಗಳು ಮತ್ತು ಪ್ರವಾಸಿಗರು ನಂದಿ ಬೆಟ್ಟಕ್ಕೆ ಲಗ್ಗೆ ಇಡುವುದು ಸಾಮಾನ್ಯ. ಕಳೆದ ಕೆಲವು ವರ್ಷಗಳ ಅಂಕಿಅಂಶಗಳನ್ನು ನೋಡಿದರೆ, ಈ ದಿನದಂದು ನಂದಿ ಬೆಟ್ಟದಲ್ಲಿ ಜನಸಾಗರವೇ ಹರಿದು ಬರುತ್ತದೆ. ಗಿರಿಧಾಮದ ರಸ್ತೆಗಳು ಕಿರಿದಾಗಿರುವುದರಿಂದ ವಾಹನಗಳ ದಟ್ಟಣೆ ವಿಪರೀತವಾಗುತ್ತದೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿ ಸ್ಥಳೀಯರಿಗೆ ಮತ್ತು ಇತರೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ.
ಇದನ್ನೂ ಓದಿ: ಸರ್ಕಾರಿ ಬಸ್ಗಳ ಮೇಲಿನ ಜಾಹೀರಾತಿಗೆ ಬ್ರೇಕ್ – 15 ದಿನದೊಳಗೆ ಜಾಹೀರಾತು ತೆರವಿಗೆ ಸೂಚನೆ
ಅಲ್ಲದೆ, ಅತಿಯಾದ ಜನದಟ್ಟಣೆಯಿಂದಾಗಿ ನೂಕುನುಗ್ಗಲು ಉಂಟಾಗುವ ಸಾಧ್ಯತೆಗಳಿರುತ್ತವೆ. ಇನ್ನು ಕೆಲವು ಬಾರಿ ಉತ್ಸಾಹದ ಭರದಲ್ಲಿ ಯುವಕರು ಅಪಾಯಕಾರಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಾಪಾಯ ತಂದುಕೊಳ್ಳುವ ಘಟನೆಗಳೂ ನಡೆದಿವೆ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಮತ್ತು ಮುಖ್ಯವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಜಿ. ಪ್ರಭು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ, ಫೆಬ್ರವರಿ 14 ರಂದು ಬೆಳಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ನಂದಿ ಗಿರಿಧಾಮಕ್ಕೆ ಪ್ರವಾಸಿಗರಿಗೆ ಹಾಗೂ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ.ಜಿಲ್ಲಾಡಳಿತದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಕೂಡ ಸನ್ನದ್ಧವಾಗಿದೆ. ಬೆಟ್ಟದ ಬುಡದಲ್ಲಿರುವ ಚೆಕ್ಪೋಸ್ಟ್ ಮತ್ತು ಕ್ರಾಸ್ಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಯಾರಾದರೂ ನಿಯಮ ಮೀರಿ ಬೆಟ್ಟಕ್ಕೆ ಹೋಗಲು ಪ್ರಯತ್ನಿಸಿದರೆ ಅವರನ್ನು ಅಲ್ಲಿಂದಲೇ ವಾಪಸ್ ಕಳುಹಿಸಲಾಗುತ್ತದೆ. ನಂದಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿರುವ ಪ್ರವಾಸಿ ತಾಣಗಳ ಮೇಲೂ ನಿಗಾ ಇಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನೋಡಿರಿ

