ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಒಂದಾಗುತ್ತಿದೆ ನಮ್ಮ ಯಾತ್ರಿ ಮತ್ತು ಬಿಎಂಆರ್‌ಸಿಎಲ್!

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಒಂದಾಗುತ್ತಿದೆ ನಮ್ಮ ಯಾತ್ರಿ ಮತ್ತು ಬಿಎಂಆರ್‌ಸಿಎಲ್!

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ಸಾರಿಗೆ ಸಂಚಾರಕ್ಕೆ ನಮ್ಮ ಮೆಟ್ರೋ ಜೀವನಾಡಿಯಾಗಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಮೆಟ್ರೋ ಮಾರ್ಗವನ್ನು ಹಂತಹಂತವಾಗಿ ವಿಸ್ತರಣೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಪ್ರಯಾಣಿಕರ ಅನುಕೂಲಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದೀಗ ನಮ್ಮ ಮೆಟ್ರೋ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲು ಸಜ್ಜಾಗಿದೆ. ಸಿಲಿಕಾನ್ ಸಿಟಿ ಜನರ ನೆಚ್ಚಿನ ‘ನಮ್ಮ ಯಾತ್ರಿ’ ಶೀಘ್ರದಲ್ಲೇ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್  ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಸೇವೆಯನ್ನು ಪ್ರಾರಂಭಿಸಲಿದೆ.

ಇದನ್ನೂ ಓದಿ: ವಿಕೆಟ್ ಕೀಪರ್ಸ್.. ಬೆಸ್ಟ್ ಫಿನಿಶರ್ಸ್ – ಧೋನಿ Or ಡಿಕೆ.. ಯಾರಿಗೆ ಲಾಸ್ಟ್ IPL?

ಇಷ್ಟು ದಿನ ಮೆಟ್ರೋ ನಿಲ್ದಾಣಗಳ ಬಳಿ ಪ್ರಯಾಣಿಕರು ಆಟೋ ಸೇವೆಗಳಿಗಾಗಿ ಪರದಾಡಬೇಕಿತ್ತು. ಸಾಮಾನ್ಯವಾಗಿ ಆಟೋ ರಿಕ್ಷಾ ಚಾಲಕರು ಕಡಿಮೆ ದೂರಕ್ಕೆ ಹೆಚ್ಚಿನ ದರ ವಿಧಿಸುವುದರಿಂದ ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಂದಿನ ಪ್ರಿಪೇಯ್ಡ್ ಆಟೋ ಸೇವೆಗಳು ಹೆಚ್ಚು ಜನಪ್ರಿಯವಾಗಿರಿಸಲು ಇದು ಕೂಡ ಒಂದು ಕಾರಣ. ಹೀಗಾಗಿ  ಬಿಎಂಆರ್‌ಸಿಎಲ್‌ ನಗರದಲ್ಲಿ ಮೆಟ್ರೋ ನಿಲ್ದಾಣಗಳಿಗೆ ಕೊನೆಯ ಮೈಲಿ ಸಂಪರ್ಕದ ಅಂತರವನ್ನು ಸರಿಪಡಿಸಲು ಆಟೋರಿಕ್ಷಾ ಸೇವೆಗಳನ್ನು ಒದಗಿಸಲಿದೆ.

ಮೊದಲ ಪ್ರಯೋಗ ಇಂದಿರಾ ನಗರ ಮೆಟ್ರೋ ಸ್ಟೇಷನ್‌ನಲ್ಲಿ ನಡೆಯಲಿದೆ. ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಮತ್ತು ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಬಿಎಂಆರ್‌ಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಿದೆ. ಯಶಸ್ಸಿನ ಆಧಾರದ ಮೇಲೆ, ಸೌಲಭ್ಯವನ್ನು ಇತರ ಮೆಟ್ರೋ ನಿಲ್ದಾಣಗಳಿಗೂ ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋ ಪ್ರಯಾಣಿಕರಿಗಾಗಿ ಪ್ರಾಯೋಗಿಕ ಅಪ್ಲಿಕೇಶನ್ ಆಧಾರಿತ ಆಟೋ-ರಿಕ್ಷಾ ಸೇವೆಯನ್ನು ಪ್ರಾರಂಭಿಸಲು ನಮ್ಮ ಯಾತ್ರಿ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಬಿಎಮ್‌ಆರ್‌ಸಿಎಲ್ ಕೈಜೋಡಿಸಿದೆ. ಮೆಟ್ರೋ ಪ್ರಯಾಣಿಕರಿಗಾಗಿ ಸುರಕ್ಷಿತ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೇವೆ ನೀಡಲು ಯೋಜನೆ ರೂಪಿಸುತ್ತಿದೆ.

ಹೊಸ ಯೋಜನೆಯ ಅಂಗವಾಗಿ, ಮೂವಿಂಗ್ ಟೆಕ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿರುವ ನಮ್ಮ ಯಾತ್ರಿ, ಮೇ ಅಂತ್ಯದ ವೇಳೆಗೆ ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಚಿಂತಿಸುತ್ತಿದೆ. ಈ ಸೇವೆಯು ಆಟೋ ರಿಕ್ಷಾ ಚಾಲಕರು ‘ಕ್ಯೂ’ ವ್ಯವಸ್ಥೆಯನ್ನು ಬಳಸಿಕೊಂಡು ಮೆಟ್ರೋ ನಿಲ್ದಾಣಗಳಿಂದ ಸೇವೆ ನೀಡುತ್ತಾರೆ. ಸರದಿಯಲ್ಲಿ ಯಾವುದೇ ಗ್ರಾಹಕರು ಇಲ್ಲದಿದ್ದರೆ, ಚಾಲಕರು ಸಾಮಾನ್ಯ ರೈಡ್ ತೆಗೆದುಕೊಳ್ಳಬಹುದು.

“ಬಿಎಂಆರ್‌ಸಿಎಲ್, ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ನಮ್ಮ ಯಾತ್ರಿಯೊಂದಿಗೆ ಮೆಟ್ರೋ ಪ್ರಯಾಣಿಕರಿಗಾಗಿ ಅಪ್ಲಿಕೇಶನ್ ಆಧಾರಿತ ಆಟೋ ರಿಕ್ಷಾ ಬುಕಿಂಗ್ ವ್ಯವಸ್ಥೆಯನ್ನು ನಿರ್ವಹಿಸಲು ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಸುರಕ್ಷಿತ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಕೊನೆಯ ಮೈಲಿ ಸಂಪರ್ಕಗಳನ್ನು ಒದಗಿಸುವುದು ಇದರ ಪ್ರಸ್ತಾವನೆಯಾಗಿದೆ” ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

Shwetha M