ನಮ್ಮ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ – ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ

ನಮ್ಮ ಮೆಟ್ರೋ ಮಾರ್ಗದಲ್ಲಿ ತಾಂತ್ರಿಕ ದೋಷ – ಈ ಮಾರ್ಗದಲ್ಲಿ ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದೆ. ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ಬೆಳ್ಳಂ ಬೆಳಗ್ಗೆ ವ್ಯತ್ಯಯವಾಗಿದೆ. ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ಮಂಗಳವಾರ ಮುಂಜಾನೆ ನೇರಳೆ ಮಾರ್ಗದ ರೈಲುಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಬೈಯಪ್ಪನಹಳ್ಳಿಯಿಂದ ಗರುಡಾಚಾರ್‌ಪಾಳ್ಯ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಭಾರೀ ತೊಂದರೆಯಾಗಿದ್ದು ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ ಉಂಟಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಹೊಸ ಪ್ಲಾನ್!‌ – ಯಶವಂತಪುರ, ಗೊರಗುಂಟೆಪಾಳ್ಯದಲ್ಲಿ ಸುರಂಗ ನಿರ್ಮಾಣಕ್ಕೆ ಚಿಂತನೆ

ಈ ಬಗ್ಗೆ ಬಿಎಂಆರ್‌ಸಿಎಲ್‌ ಎಕ್ಸ್​ ಖಾತೆ ಮೂಲಕ ಟ್ವೀಟ್ ಮಾಡಿದೆ. ತಾಂತ್ರಿಕ ದೋಷದಿಂದ ಬೈಯಪ್ಪನಹಳ್ಳಿಯಿಂದ ಗರುಡಾಚಾರ್ಪಾಳ್ಯ ನಡುವೆ ನೇರಳೆ ಮಾರ್ಗದ ರೈಲುಗಳು ನಿಧಾನಗತಿಯಲ್ಲಿ ಚಲಿಸುತ್ತಿವೆ. ಇದರಿಂದ ರೈಲು ವೇಳಾಪಟ್ಟಿಯಲ್ಲಿ ಅಡಚಣೆಯಾಗುತ್ತದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ನೇರಳೆ ಮಾರ್ಗದಲ್ಲಿ ಸುಮಾರು 45 ನಿಮಿಷದಿಂದ ಯಾವುದೇ ಮೆಟ್ರೋ ರೈಲುಗಳು ಸಂಚರಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿಯೇ ಪ್ರಯಾಣಿಕರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಭಾರೀ ಜನದಟ್ಟಣೆ ಉಂಟಾಗಿದ್ದು, ಎಲ್ಲ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ತಾಂತ್ರಿಕ ಸಮಸ್ಯೆಗೂ ಮುನ್ನ ಹಲವು ನಿಲ್ದಾಣಗಳಲ್ಲಿ ಮೆಟ್ರೋ ಹತ್ತಿದ್ದ ಪ್ರಯಾಣಿಕರನ್ನು ಇಳಿಯುವಂತೆ ಮನವಿ ಮಾಡಲಾಗುತ್ತಿದ್ದು, ಪರ್ಯಾಯ ಸಾರಿಗೆಯನ್ನು ಬಳಸುವಂತೆ ನಿಲ್ದಾಣಗಳಲ್ಲಿ ಬಿಎಂಆರ್‌ಸಿಎಲ್‌ ಘೋಷಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.

Shwetha M