ಅನ್ನದಾತನಿಗೆ ನಮ್ಮ ಮೆಟ್ರೋದಲ್ಲಿ ಅವಮಾನ – ಹಳೆಯ ಬಟ್ಟೆ ಹಾಕಿದ್ದಕ್ಕೆ ರೈತನನ್ನು ಪ್ರಯಾಣಿಸಲು ಬಿಡದ ಸಿಬ್ಬಂದಿ!

ಅನ್ನದಾತನಿಗೆ ನಮ್ಮ ಮೆಟ್ರೋದಲ್ಲಿ ಅವಮಾನ – ಹಳೆಯ ಬಟ್ಟೆ ಹಾಕಿದ್ದಕ್ಕೆ ರೈತನನ್ನು ಪ್ರಯಾಣಿಸಲು ಬಿಡದ ಸಿಬ್ಬಂದಿ!

ನಮ್ಮ ಮೆಟ್ರೋ ಪ್ರಯಾಣಿಕರಲ್ಲಿ ಬಡವ, ಶ್ರೀಮಂತ ಎಂದು ತಾರತಮ್ಯ ಮಾಡಲಾಗುತ್ತಿದ್ಯಾ ಅನ್ನೋ ಪ್ರಶ್ನೆ ಈಗ ಉದ್ಬವವಾಗಿದೆ. ಇದಕ್ಕೆ ಕಾರಣ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋ. ಮೂಟೆ ಹೊತ್ತುಕೊಂಡಿದ್ದ ರೈತನೋರ್ವ ಹಳೆಯ ಬಟ್ಟೆ ಹಾಕಿದ್ದಾನೆ ಎಂಬ ಕಾರಣಕ್ಕೆ ಮೆಟ್ರೋ ಸಿಬ್ಬಂದಿ ಆತನನ್ನು ಮೆಟ್ರೋ ಒಳಗೆ ಬಿಟ್ಟಿಲ್ಲ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್‌ ನಕಾರ –  ಮುಸ್ಲಿಮರಿಗೆ ಮತ್ತೆ ಹಿನ್ನಡೆ

ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನ ನಮ್ಮ ಮೆಟ್ರೋ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇದೆ. ಇದೀಗ ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಿಬ್ಬಂದಿ ರೈತರೊಬ್ಬರನ್ನು ಮೆಟ್ರೋ ಒಳಗಡೆ ಬಿಟ್ಟಿಲ್ಲ. ಹಿಂದಿ ಭಾಷೆಯನ್ನಾಡುವ ರೈತನೊಬ್ಬ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಪಡೆದು ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾಗಿದ್ದಾರೆ. ಈ ವೇಳೆ ಲಗೇಜ್ ಪರಿಶೀಲನೆ ಮಾಡುವ ಸಿಬ್ಬಂದಿ ರೈತನನ್ನು ತಡೆದಿದ್ದಾರೆ. ಗಲೀಜು ಬಟ್ಟೆ ಹಾಕಿದ್ದೀರಾ, ತಲೆ ಮೇಲೆ ಮೂಟೆ ಇದೆ ಎಂದು ಹೇಳಿ ರೈತನನ್ನ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿಲ್ಲ. ಈ ಕುರಿತ ವಿಡಿಯೋ  ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದೀಗ ಮೆಟ್ರೋ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದು VIPಗಳಿಗೆ ಮಾತ್ರಾ ಮೇಟ್ರೋನಾ? ಬಸವಣ್ಣ ಹುಟ್ಟಿದ ನಾಡಲ್ಲಿ ಸಮಾನತೆ ಎಲ್ಲಿ ಹೋಯಿತು ಎಂದು ಪ್ರಶ್ನಿಸುತ್ತಿದ್ದಾರೆ.

ಇದೇ ವೇಳೆ ಆ ಬಡ ರೈತನನ್ನು ಯಾಕೆ ಒಳಕ್ಕೆ ಬಿಡಲ್ಲವೆಂದು ಕಾರ್ತಿಕ್​ ಸಿ ಐರನಿ ಎನ್ನುವ ಪ್ರಯಾಣಿಕ ಪ್ರಶ್ನೆ ಮಾಡಿದ್ದಾರೆ. ಕೇವಲ ವಿಐಪಿಗಳಿಗೆ ಮಾತ್ರ ಮೆಟ್ರೋನಾ. ಅವರಿಗೆ ಏನಾಗಿದೆ ಹೇಳಿ. ಅವರ ಮೂಟೆಯಲ್ಲಿ ಬಟ್ಟೆ ಇದೆ, ಅಂತದ್ದೇನಿದ್ರೂ ವಾಪಸ್ ಕಳಿಸಿ. ಟಿಕೆಟ್​ ತಗೊಂಡಿದ್ದಾರೆ ತಾನೇ ಬಿಡಿ. ಬೇರೆಯವರಿಗೆ ಅಸಹ್ಯವಾಗುತ್ತಂತೆ. ಇದೇನು ವಿಐಪಿ ಟ್ರಾನ್ಸ್​ಪೋರ್ಟ್​ ಆ.. ಎಂದು ಮೆಟ್ರೋ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದಾರೆ.

ಇನ್ನೊಬ್ಬ ವ್ಯಕ್ತಿ ಕೂಡ ಅವರೆಲ್ಲ ಹಳ್ಳಿಯ ರೈತರು ಹಾಗೇ ಇರುತ್ತಾರೆ. ಏನು ಆಗಲ್ಲ ಅವರಿಗೆ ಮೆಟ್ರೋದಲ್ಲಿ ಹೋಗಲು ಬಿಡಿ. ನೋಡಿ ಸರ್.. ಆ ರೈತನ ಬಳಿ ಅಂತಹದ್ದು ಏನಿದ್ದರೂ ಬಿಡಬೇಡಿ. ಪಾಪ ಅವರಿಗೆ ಏನು ಗೊತ್ತಾಗುತ್ತೆ ಹೇಳಿ. ಗಲೀಜು ಇದ್ದಾರೆ ಎಂದು ಒಳಗೆ ಬಿಡದಿರುವುದು ತಪ್ಪಾಗುತ್ತೆ ಎಂದಿದ್ದಾರೆ. ಆದರೆ ಇದು ಯಾವುದನ್ನು ಲೆಕ್ಕಿಸದ ಸಿಬ್ಬಂದಿ ಮಾತ್ರ ಆ ರೈತನಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಅನುಮತಿ ಕೊಡಲಿಲ್ಲ. ಹೀಗಾಗಿ ರೈತ ನಗುತ್ತಲೇ ಮೆಟ್ರೋ ನಿಲ್ದಾಣದಿಂದ ಹಾಗೇ ಹೊರ ನಡೆದಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಮೆಟ್ರೋ ಕೇವಲ ವಿಐಪಿಗಳಿಗೆ ಮಾತ್ರವಾ ಅಂತಾ ಅನೇಕರು ಪ್ರಶ್ನಿಸುತ್ತಿದ್ದಾರೆ.

Shwetha M