ಬೆಂಗಳೂರು ನಮ್ಮ ಮೆಟ್ರೋ ಕೆಂಪು ಮಾರ್ಗ ಕಾಮಗಾರಿ ಶೀಘ್ರದಲ್ಲೇ ಆರಂಭ! – ಎಲ್ಲೆಲ್ಲಿ ಹಾದುಹೋಗಲಿದೆ ರೆಡ್‌ ಲೈನ್‌?

ಬೆಂಗಳೂರು ನಮ್ಮ ಮೆಟ್ರೋ ಕೆಂಪು ಮಾರ್ಗ ಕಾಮಗಾರಿ ಶೀಘ್ರದಲ್ಲೇ ಆರಂಭ! – ಎಲ್ಲೆಲ್ಲಿ ಹಾದುಹೋಗಲಿದೆ ರೆಡ್‌ ಲೈನ್‌?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜಾಲ ವರ್ಷದಿಂದ ವರ್ಷಕ್ಕೆ ವಿಸ್ತರಣೆಗೊಳ್ಳುತ್ತಿದೆ. ಈಗಾಗಲೇ ಹಸಿರು, ನೇರಳೆ ಮಾರ್ಗ, ಹಳದಿ ಮಾರ್ಗ ಕಾರ್ಯಾಚರಣೆಯಲ್ಲಿದೆ. ನಿತ್ಯಾ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರ ನಡುವೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿಯಿದೆ. ಕೆಂಪು ಮಟ್ರೋ ರೈಲು ಮಾರ್ಗದ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: ದೊಡ್ಮನೆ ಡೋರ್‌ ಓಪನ್.. ಕಿಚ್ಚ ಸುದೀಪ್‌ ಹೇಳ್ತಿದ್ದಂತೆ ಕಾಕ್ರೋಚ್‌ ಸುಧಿ ಹೊರಕ್ಕೆ?

ನಮ್ಮ ಮೆಟ್ರೋದ ರೆಡ್ ಲೈನ್ ಬೆಂಗಳೂರು ನಗರದ ಹೃದಯ ಭಾಗದಲ್ಲಿ ಸಂಚರಿಸಲಿದ್ದು, ಸಾಕಷ್ಟು ಬಹುಮುಖ್ಯ ಸ್ಥಳಗಳಲ್ಲಿ ಓಡಾಟ ನಡೆಸಲಿದೆ. ಇದರಿಂದ ಬೆಂಗಳೂರು ನಗರದ ಹೃದಯ ಭಾಗದಲ್ಲಿ ಟ್ರಾಫಿಕ್ ಜಾಮ್ ನಿಂದ ಹೈರಾಣಾಗಿರುವ ವಾಹನ ಸವಾರರು ಇನ್ನು ಮುಂದೆ ನಮ್ಮ ಮೆಟ್ರೋವನ್ನು ಬಳಸಬಹುದಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ರೆಡ್ ಲೈನ್ ಹಂತ 3A ನ ಭೂತಾಂತ್ರಿಕ ಸಮೀಕ್ಷೆಗೆ 6.86 ಕೋಟಿ ರೂ. ಮೌಲ್ಯದ ಟೆಂಡರ್‌ ಪ್ರಕಟಿಸಿದೆ. ಟೆಂಡರ್ ಸಲ್ಲಿಕೆ ಕೊನೆಯ ದಿನಾಂಕ ನವೆಂಬರ್ 3 ಆಗಿದ್ದು, ಆಯ್ಕೆಯಾದ ಗುತ್ತಿಗೆದಾರರು 150 ದಿನಗಳಲ್ಲಿ ಅಧ್ಯಯನವನ್ನು ಪೂರ್ಣಗೊಳಿಸಬೇಕಾಗಿದೆ. ಭೂತಾಂತ್ರಿಕ ಅಧ್ಯಯನವು ಮೆಟ್ರೋ ನಿರ್ಮಾಣದ ಮೊದಲು ಅತ್ಯಂತ ಮುಖ್ಯ ಹಂತವಾಗಿದೆ. ಈ ಅಧ್ಯಯನದಲ್ಲಿ ಎತ್ತರದ ಕಂಬಗಳ ಅಡಿಪಾಯ, ಭೂಗತ ಸುರಂಗಗಳ ರಚನೆ, ಮಣ್ಣು ಮತ್ತು ಕಲ್ಲಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಇದರಿಂದ ಸುರಂಗ ಖೋಡನೆ ಯಂತ್ರಗಳು ಯಾವ ರೀತಿಯವಾಗಿರಬೇಕು ಮತ್ತು ನಿಖರ ವೆಚ್ಚ ಅಂದಾಜು ಹೇಗೆ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ.

ಎಲ್ಲಿಂದ ಎಲ್ಲಿಗೆ ರೆಡ್ ಲೈನ್ ರೈಲು ಸಂಚಾರ ನಡೆಸಲಿದೆ?

ಬಹುನಿರೀಕ್ಷಿತ ನಮ್ಮ ಮೆಟ್ರೋದ ರೆಡ್ ಲೈನ್ ಸರ್ಜಾಪುರದಿಂದ ಹೆಬ್ಬಾಳ ನಡುವೆ ಸಂಪರ್ಕ ಕಲ್ಪಿಸಲಿದೆ. ಪ್ರಸ್ತುತ ಬೆಂಗಳೂರು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವ – ಪಶ್ಚಿಮದಲ್ಲಿ ಹಸಿರು ಮತ್ತು ನೇರಳೆ ಮಾರ್ಗಗಳು ಸಂಚರಿಸುತ್ತಿವೆ. ಪಿಂಕ್ ಮಾರ್ಗವು 2026ರಲ್ಲಿ ಮತ್ತು ನೀಲಿ ಮಾರ್ಗವು 2027ರಲ್ಲಿ ಪ್ರಾರಂಭವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರ ನಡುವೆಯೇ ಸರ್ಜಾಪುರ, ಮಡಿವಾಳ, ಸೇಂಟ್ ಜಾನ್ಸ್, ಹೊಸೂರು ರಸ್ತೆ ಪ್ರದೇಶದಲ್ಲಿ ಮೆಟ್ರೋ ಬೇಕು ಎಂಬ ಜನಸಾಮಾನ್ಯರ ಬೇಡಿಕೆ ಬಹಳಷ್ಟು ಹೆಚ್ಚಿತ್ತು. ಇದರಿಂದ ಸಾಕಷ್ಟು ವಾಹನಗಳ ಸಂಚಾರ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಬಿಎಂಆರ್ ಸಿಎಲ್ ರೆಡ್ ಲೈನ್ ಮೆಟ್ರೋ ಪ್ರಾರಂಭಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ಮೂರನೇ ಹಂತದ ರೆಡ್ ಲೈನ್ ಮೆಟ್ರೋ ಮಾರ್ಗ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಎಷ್ಟು ನಿಲ್ದಾಣಗಳು ಇರಲಿವೆ ?

ಕೆಂಪು ಮಾರ್ಗವು ಸರ್ಜಾಪುರದಿಂದ ಹೆಬ್ಬಾಳ ವರೆಗೆ ಪ್ರಯಾಣಿಸಲಿದೆ. ಈ ಸಂಬಂಧ ಈ ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೊಂದು ವರ್ಷದೊಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ. ಬಹುನಿರೀಕ್ಷಿತ ಹೆಬ್ಬಾಳ – ಸರ್ಜಾಪುರ ಮೆಟ್ರೋ ಮಾರ್ಗದಲ್ಲಿ 28 ನಿಲ್ದಾಣಗಳು ಇರಲಿವೆ. ಈ ಕೆಂಪು ಮಾರ್ಗವು 36.59 ಕಿಲೋ ಮೀಟರ್ ಉದ್ದವಾಗಿದ್ದು, ಸುಮಾರು 28,405 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ಯೋಜನೆ ನಿರ್ಮಾಣವಾದರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಚಿಂತನೆ ನಡೆಸಲಾಗಿದೆ. 28,405 ಕೋಟಿ ರೂಪಾಯಿಯಲ್ಲಿ 8,080 ಕೋಟಿ ರೂಪಾಯಿ ಭೂ ಸ್ವಾಧೀನ ವೆಚ್ಚವಾಗಿರಲಿದೆ.

ಕೆಂಪು ಮಾರ್ಗ ಹಾದುಹೋಗುವ ಸ್ಥಳಗಳು

ಕೆಂಪು ಮೆಟ್ರೋ ಮಾರ್ಗವು ಬೆಂಗಳೂರಿನ ಹೃದಯ ಭಾಗದಲ್ಲಿ ಹಾದುಹೋಗಲಿದೆ. ಇದರಲ್ಲಿ ಕೋರಮಂಗಲ, ಡೈರಿ ಸರ್ಕಲ್, ಕೆ ಆರ್ ಸರ್ಕಲ್, ಗಾಲ್ಫ್ ಕೋರ್ಸ್ ದಿಂದ ಮೇಖ್ರಿ ಸರ್ಕಲ್ ಮೂಲಕ ಹೆಬ್ಬಾಳಕ್ಕೆ ತಲುಪಲಿದೆ. ಈ ಪ್ರದೇಶಗಳಲ್ಲಿ ಒಟ್ಟು 28 ಮೆಟ್ರೋ ನಿಲ್ದಾಣಗಳು ಇರಲಿವೆ.

Shwetha M