ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ! – ಇನ್ಮುಂದೆ ಈ ತಪ್ಪು ಮಾಡಿದ್ರೆ ₹5,000 ರಿಂದ ₹25,000ವರೆಗೆ ದಂಡ!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿಯಿದೆ. ಇನ್ಮುಂದೆ ನಮ್ಮ ಮೆಟ್ರೋದಲ್ಲಿ ಈ ತಪ್ಪುಗಳನ್ನ ಮಾಡುವಂತಿಲ್ಲ. ಒಂದ್ವೇಳೆ ನಮ್ಮ ಮೆಟ್ರೋದಲ್ಲಿ ಈ ನಿಯಮಗಳನ್ನ ಬ್ರೇಕ್ ಮಾಡಿದ್ರೆ ಭಾರಿ ದಂಡ ಪಾವತಿಸಬೇಕಾಗುತ್ತದೆ. ಇದೀಗ ಬಿಎಂಆರ್‌ಸಿಎಲ್ ಪ್ರಯಾಣಿಕರಿಗೆ ಹೊಸ ರೂಲ್ಸ್ ಜಾರಿಗೊಳಿಸಿದೆ.
ಇದನ್ನೂ ಓದಿ: ಆರೋಗ್ಯ ವೃದ್ಧಿಗೆ ಅಂಜೂರ ಬೆಸ್ಟ್! – ಪ್ರತಿದಿನ ಎಷ್ಟು ಹಣ್ಣು ಸೇವಿಸಬೇಕು?
ಮೆಟ್ರೋದಲ್ಲಿ ಶಿಸ್ತು ಕಾಪಾಡಲು ಹಾಗೂ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಕ್ರಮಕೈಗೊಳ್ಳುತ್ತಿದೆ. ಇದ್ರ ಭಾಗವಾಗಿ ಬಿಎಂಆರ್‌ಸಿಎಲ್ ದಂಡದ ಮೊತ್ತವನ್ನು ಹೆಚ್ಚಿಸಲು ಮುಂದಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಈಗಾಗಲೇ ‘ಚೆನ್ನೈ ಮೆಟ್ರೋದಲ್ಲಿ ದಂಡದ ಪ್ರಮಾಣ ಹೆಚ್ಚಿಸಲಾಗಿದ್ದು, ಅದೇ ಮಾದರಿಯನ್ನು ಅನುಸರಿಸಿ ನಮ್ಮ ಮೆಟ್ರೋದಲ್ಲೂ ದಂಡ ಹೆಚ್ಚಳದ ಕುರಿತು ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ.
ಹೊಸ ನಿಯಮಗಳ ಪ್ರಕಾರ, ಮೆಟ್ರೋ ಟ್ರ್ಯಾಕ್‌ಗೆ ಜಿಗಿಯುವುದು, ಟ್ರ್ಯಾಕ್ ಮೇಲೆ ಓಡಾಡುವುದು, ಟಿಕೆಟ್ ಅಥವಾ ಪಾಸ್ ದುರ್ಬಳಕೆ ಮಾಡುವುದು- ಇಂತಹ ಗಂಭೀರ ಉಲ್ಲಂಘನೆಗಳಿಗೆ ₹5,000 ರಿಂದ ₹25,000ವರೆಗೆ ದಂಡ ವಿಧಿಸುವ ಪ್ರಸ್ತಾವವಿದೆ.
ಈವರೆಗೆ ಮೆಟ್ರೋ ರೈಲಿನಲ್ಲಿ, ರೀಲ್ಸ್ ಚಿತ್ರೀಕರಣ, ಊಟ ಅಥವಾ ತಿಂಡಿ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು, ಲೌಡ್ ಮ್ಯೂಸಿಕ್ ಹಾಕಿ ಇತರ ಪ್ರಯಾಣಿಕರಿಗೆ ತೊಂದರೆ ನೀಡುವುದು- ಇತ್ಯಾದಿ ನಿಯಮ ಉಲ್ಲಂಘನೆಗಳಿಗೆ ₹500 ದಂಡ ವಿಧಿಸಲಾಗುತ್ತಿತ್ತು. ಹೊಸ ನಿಯಮಗಳಡಿ ಈ ದಂಡವನ್ನು ₹2,500 ರಿಂದ ₹10,000ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.
ಮೆಟ್ರೋ ರೈಲು ಅಥವಾ ನಿಲ್ದಾಣದ ಆವರಣದಲ್ಲಿ ಅನುಮತಿ ಇಲ್ಲದೆ ವ್ಯಾಪಾರ ಅಥವಾ ಮಾರಾಟ ಚಟುವಟಿಕೆ ನಡೆಸಿದರೆ 15,000 ದಂಡ ವಿಧಿಸಲು ಪ್ರಸ್ತಾವಿಸಲಾಗಿದೆ. ಇದುವರೆಗೆ ಮೆಟ್ರೋ ನಿಲ್ದಾಣದ ಗೋಡೆಗಳ ಮೇಲೆ ಬರೆಯುವುದು, ಪೋಸ್ಟರ್ ಅಂಟಿಸುವುದು, ಚಿತ್ರ ಬಿಡಿಸುವುದು- ಇಂತಹ ಕೃತ್ಯಗಳಿಗೆ ₹1,000 ದಂಡವಿತ್ತು. ಹೊಸ ನಿಯಮಗಳ ಪ್ರಕಾರ ಈ ದಂಡವನ್ನು ₹10,000ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.
Section 59(1) ಅಡಿಯಲ್ಲಿ, ಮದ್ಯಪಾನ ಮಾಡಿ ಮೆಟ್ರೋದಲ್ಲಿ ಪ್ರಯಾಣಿಸುವುದು, ಜಗಳ ಮಾಡುವುದು, ಉಗುಳುವುದು- ಇಂತಹ ಪ್ರಕರಣಗಳಿಗೆ ಈವರೆಗೆ ₹500 ದಂಡ ವಿಧಿಸಲಾಗುತ್ತಿತ್ತು. ಹೊಸ ನಿಯಮಗಳ ಪ್ರಕಾರ ₹2,500 ದಂಡ ವಿಧಿಸಲು ಪ್ರಸ್ತಾವಿಸಲಾಗಿದೆ. Section 60(1) ಅಡಿಯಲ್ಲಿ, ಪಟಾಕಿ, ಸ್ಪೋಟಕ ವಸ್ತುಗಳು, ಅಪಾಯಕಾರಿ ರಾಸಾಯನಿಕಗಳು, ಇವನ್ನು ಮೆಟ್ರೋದಲ್ಲಿ ಸಾಗಿಸಿದರೆ ಈಗಿನ *500 ದಂಡವನ್ನು ₹2,500ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಪ್ರಸ್ತಾವಿತ ನಿಯಮಗಳ ಪ್ರಕಾರ, ದಂಡದ ಮೊತ್ತವನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ 10%ರಷ್ಟು ಹೆಚ್ಚಿಸುವ ವ್ಯವಸ್ಥೆಯನ್ನೂ ಜಾರಿಗೆ ತರಲು ಚಿಂತನೆ ನಡೆದಿದೆ.

ನೋಡಿರಿ

