ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಔಟ್ – ಪ್ರಹ್ಲಾದ್ ಜೋಶಿಯಿಂದ ಸುಳಿವು!
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿದೆ. ಬರೋಬ್ಬರಿ 135 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. ಆದರೆ ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ವಿಚಾರವಾಗಿ ದೊಡ್ಡ ಹೈಡ್ರಾಮಾ ನಡೆಯುತ್ತಿದೆ. ಮತ್ತೊಂದೆಡೆ ಬಿಜೆಪಿಯಲ್ಲೂ ಸ್ಥಾನ ಬದಲಾವಣೆಯ ಪರ್ವ ಶುರುವಾದಂತಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ಸಿಎಂ.. ಡಿ.ಕೆ ಶಿವಕುಮಾರ್ ಡಿಸಿಎಂ..? – ನಾಳೆಯೇ ಪ್ರಮಾಣವಚನ ಸ್ವೀಕಾರ..?
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಬದಲಾವಣೆ ಸಾಧ್ಯತೆ ಕುರಿತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸುಳಿವು ನೀಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಯ ಅವಧಿ ಪೂರೈಸಿದ್ದರೂ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ನಾಯಕರು ಮತ್ತೆ ಅವರಿಗೆ ಜವಾಬ್ದಾರಿ ನೀಡಿದ್ದರು. ಈಗ ಚುನಾವಣೆ ಮುಗಿದಿದೆ. ಮುಂದಿನ ತೀರ್ಮಾನವನ್ನು ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುತ್ತಾರೆಂದು ಹೇಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ನಿರಾಶಾದಾಯಕವಾಗಿದೆ. ಈ ಸೋಲನ್ನು ಪಕ್ಷ ಹಾಗೂ ನಾನು ಸಹಜವಾಗಿ ಸ್ವೀಕರಿಸದೆ ಸವಾಲಾಗಿ ಸ್ವೀಕರಿಸಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ, ‘ಶೀಘ್ರದಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ರಾಷ್ಟ್ರೀಯ ನಾಯಕರೊಬ್ಬರು ಬರಲಿದ್ದು, ಚರ್ಚಿಸಿ ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬುದನ್ನು ತೀರ್ಮಾನಿಸಲಿದ್ದಾರೆ ಎಂದಿದ್ದಾರೆ. ಇಡೀ ದೇಶವೇ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಒಪ್ಪಿದೆ. ಲೋಕಸಭಾ ಚುನಾವಣೆ ಬೇರೆ ವಿಚಾರಗಳ ಮೇಲೆ ನಡೆಯುತ್ತದೆ. ರಾಜ್ಯ ಚುನಾವಣೆ ವಿಚಾರ ಬೇರೆಯೇ ಇತ್ತು. ದೇಶದ ಹಲವು ಸಮೀಕ್ಷೆಗಳಲ್ಲಿ ಈಗ ಚುನಾವಣೆ ನಡೆದರೂ ಬಿಜೆಪಿ 300-330 ಸ್ಥಾನ ಗೆಲ್ಲಲಿದೆ ಎಂಬ ನಿರೀಕ್ಷೆಯಿದೆ. ಹೀಗಾಗಿ ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.