ಆಂಧ್ರದ 400 ಪೊಲೀಸರಿಂದ ತೆಲಂಗಾಣ ಡ್ಯಾಂಗೆ ಮುತ್ತಿಗೆ – 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಆಂಧ್ರದ 400 ಪೊಲೀಸರಿಂದ ತೆಲಂಗಾಣ ಡ್ಯಾಂಗೆ ಮುತ್ತಿಗೆ – 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ದೇಶಾದ್ಯಂತ ಪಂಚರಾಜ್ಯ ಚುನಾವಣಾ ಕಾವು ಜೋರಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಕೆಲವೇ ಗಂಟೆಗಳು ಬಾಕಿ ಇವೆ. ತೆಲಂಗಾಣದಲ್ಲೂ ಕೂಡ ಸಿ ವೋಟರ್ ಸಮೀಕ್ಷೆಗಳ ಅಂಕಿಅಂಶಗಳು ಭಾರೀ ಕುತೂಹಲ ಮೂಡಿಸಿವೆ. ಆದರೆ ಈ ಚುನಾವಣಾ  ಕಾವಿನ ನಡುವೆ ತೆಲಂಗಾಣದಲ್ಲಿ ಹೈಡ್ರಾಮಾವೇ ನಡೆದಿದೆ.

ಕಳೆದ ಗುರುವಾರ ತೆಲಂಗಾಣ ವಿಧಾನಸಭೆಗೆ ಮತದಾನ ನಡೆದಿದ್ದು, ಎಲ್ಲರು ಕೂಡ ಫಲಿತಾಂಶದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಆದರೆ ಅದೇ ದಿನ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ 400 ಮಂದಿ ಆಂಧ್ರಪ್ರದೇಶ ಪೊಲೀಸರು ನಾಗಾರ್ಜುನ ಸಾಗರ ಅಣೆಕಟ್ಟೆಯನ್ನ ಮುತ್ತಿಗೆ ಹಾಕಿದ್ರು. ಇಡೀ ಡ್ಯಾಂನ ವಶಕ್ಕೆ ಪಡೆದು ಅದರಿಂದ ನೀರು ಬಿಡುಗಡೆ ಮಾಡಿದ್ದಾರೆ. ತೆಲಂಗಾಣದ ಅಧೀನದಲ್ಲಿರುವ ನಾಗಾರ್ಜುನ ಅಣೆಯಕಟ್ಟೆಯನ್ನು ವಶಪಡಿಸಿಕೊಂಡು ಆಂಧ್ರ ಪ್ರದೇಶ ಪೊಲೀಸರು ಸುಮಾರು 10 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ಇದನ್ನೂ ಓದಿ : ಮಾವನ ಮಗನೇ ಶಿಕ್ಷಕಿ ಅಪಹರಣದ ಮಾಸ್ಟರ್‌ ಮೈಂಡ್!‌ – ಘಟನೆ ನಡೆದ ಏಳು ಗಂಟೆಯಲ್ಲೇ ಆರೋಪಿ ಬಂಧನ

ನೀರು ಬಿಡುಗಡೆ ವೇಳೆ ಉಭಯ ರಾಜ್ಯಗಳ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದರೂ ಸಹ ನೀರು ಬಿಡುವಲ್ಲಿ ಆಂಧ್ರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗಾರ್ಜುನ ಸಾಗರ ಅಣೆಕಟ್ಟೆಗೆ ನಿರ್ಮಿಸಲಾಗಿರುವ ಬಲನಾಲೆಯ ಮೂಲಕ 10 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ತೆಲಂಗಾಣ ಸರ್ಕಾರ ಅಣೆಕಟ್ಟಿನ ಬಳಿ ಪೊಲೀಸ್‌ ಭದ್ರತೆಯನ್ನು ಹೆಚ್ಚು ಮಾಡಿದೆ. ಪ್ರಕರಣ ಸಂಬಂಧ ಆಂದ್ರ ಪೊಲೀಸರ ವಿರುದ್ಧ ನಲ್ಗೊಂಡ ಪೊಲೀಸ್‌ ಠಾಣೆಯಲ್ಲಿ 2 ಪ್ರಕರಣ ದಾಖಲು ಮಾಡಲಾಗಿದೆ. 2015ರ ಫೆ.13ರಂದು ಸಹ ಆಂಧ್ರ ಪೊಲೀಸರು ಈ ರೀತಿ ನೀರು ಬಿಡುಗಡೆ ಮಾಡಲು ಯತ್ನಿಸಿದ್ದರು. ಆದರೆ ತೆಲಂಗಾಣ ಪೊಲೀಸರು ಮೊದಲೇ ಎಚ್ಚೆತ್ತುಕೊಂಡು ಇದನ್ನು ತಡೆಗಟ್ಟಿದ್ದರು. ನಾಗಾರ್ಜುನ ಸಾಗರ ಅಣೆಕಟ್ಟು ತೆಲಂಗಾಣದ ನೀರಾವರಿ ಸಚಿವಾಲಯದ ನಿಯಂತ್ರಣದಲ್ಲಿದೆ. ಆದರೆ ಆಂಧ್ರಪ್ರದೇಶ ಪೊಲೀಸರು ಗುರುವಾರ ರಾತ್ರಿ ವಶಪಡಿಸಿಕೊಂಡಿರುವ ಅಣೆಕಟ್ಟೆಯ ಭಾಗ ಆಂಧ್ರಪ್ರದೇಶಕ್ಕೆ ಸೇರಿದ್ದಾಗಿದೆ. ಹೀಗಾಗಿ ಎರಡೂ ರಾಜ್ಯಗಳ ನಡುವೆ ಗಲಾಟೆಗಳು ನಡೆಯುತ್ತಿವೆ.

Shantha Kumari