ಮಹಿಷ ದಸರಾ ಆಚರಣೆಗೆ ಹೆಚ್ಚಾಯ್ತು ಪರ ವಿರೋಧ – ಸಾಂಸ್ಕ್ರತಿಕ ನಗರಿಯಲ್ಲಿ ಪೊಲೀಸ್ ಇಲಾಖೆಗೂ ತಲೆಬಿಸಿ

ಮಹಿಷ ದಸರಾ ಆಚರಣೆಗೆ ಹೆಚ್ಚಾಯ್ತು ಪರ ವಿರೋಧ – ಸಾಂಸ್ಕ್ರತಿಕ ನಗರಿಯಲ್ಲಿ ಪೊಲೀಸ್ ಇಲಾಖೆಗೂ ತಲೆಬಿಸಿ

ಮೈಸೂರು ದಸರಾ ಎಷ್ಟೊಂದು ಸುಂದರ ಅನ್ನೋ ಮಾತೇ ಇದೆ. ಕಣ್ಣಾರೆ ಕಂಡವರಿಗೇ ಗೊತ್ತು ಇತಿಹಾಸ ಸಾರುವ ವೈಭವದ ಗತ್ತು. ಆದ್ರೆ ಈ ಬಾರಿ ಮಳೆ ಕೊರತೆ, ಬರದ ಛಾಯೆ, ನೀರಿನ ಅಭಾವದ ಹಿನ್ನೆಲೆ ಸಿಂಪಲ್ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಸಿದ್ಧತೆಯೂ ನಡೀತಿದೆ. ಆದ್ರೀಗ ಮೈಸೂರು ದಸರಾಗಿಂತ ಮಹಿಷಾ ದಸರಾವೇ ಸದ್ದು ಮಾಡ್ತಿದೆ. ಮಹಿಷಾಸುರನ ದಸರಾ ಮಾಡಬೇಕು ಅಂತಾ ಕೆಲವರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪ್ರಬಲ ವಿರೋಧ ಕೂಡಾ ಇದೆ. ಪರವಿರೋಧದ ಅಲೆ ನಡುವೆ ಸಾಂಸ್ಕೃತಿಕ ನಗರಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಮಹಿಷದಸರಾವನ್ನ ಕಟುವಾಗಿ ವಿರೋಧಿಸುತ್ತಿದ್ದಾರೆ. ಮಹಿಷ ದಸರಾ ಆಯೋಜಕರು ನಾವು ಮಾಡಿಯೇ ಸಿದ್ಧ ಎನ್ನುತ್ತಿದ್ದಾರೆ. ಪರ ವಿರೋಧದ ನಡುವಿನ ಜಟಾಪಟಿ ತಾರಕಕ್ಕೇರಿದೆ. ಹೀಗಾಗಿ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಕಾರ್ಯಕ್ರಮಕ್ಕೆ ಅನುಮತಿ ಕೊಟ್ಟರೆ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಆಗುತ್ತೆ ಅಂತಾ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದರ ಹೊರತಾಗಿಯೂ ಪ್ರತಾಪ್ ಸಿಂಹ ಮನೆ ಮನೆಗೆ ತೆರಳಿ ಜಾಥಾಗೆ ಬರುವಂತೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ : ನಾಡಹಬ್ಬ ದಸರಾಗೆ ಕ್ಷಣಗಣನೆ – 9 ದಿನದಲ್ಲಿ ಅರಮನೆಯಲ್ಲಿ ಏನೇನು ಕಾರ್ಯಕ್ರಮ ನಡೆಯಲಿದೆ?

ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆಗೆ ಸಮಿತಿ ಅನುಮತಿ ಕೇಳಿತ್ತು. ಮೈಸೂರಿನ ಗಾಂಧಿನಗರದ ಮಹಿಷ ದಸರಾ ಆಚರಣೆಗೆ ಮನವಿ ಮಾಡಲಾಗಿತ್ತು. ಬೆಳಗ್ಗೆ 9.30 ಕ್ಕೆ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ  ತಾವರೆಕಟ್ಟೆ ಬಳಿಯಿಂದ ಮೃಗಾಲಯ ರಸ್ತೆ ಮೂಲಕ ಮೆರವಣಿಗೆಗೆ ಅವಕಾಶ ಮಾಡಿಕೊಂಡುವಂತೆ ಮನವಿ ಮಾಡಲಾಗಿದೆ. ಪುರಭವನದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಯೇ ಕಾರ್ಯಕ್ರಮ ನಡೆಸೋದು.ವೇದಿಕೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಸಮಿತಿ ತಿಳಿಸಿತ್ತು. ಮಹಿಷ ದಸರಾ ಆಚರಣೆಯನ್ನು ವಿರೋಧಿಸಿ ಅದೇ ದಿನ ಬಿಜೆಪಿ ಜಾಥಾ ನಡೆಸುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ವಿರೋಧಿಸಿ ಜಾಥಾಗೆ ಕರೆ ನೀಡಿದೆ. ಅ. 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಪ್ರತಾಪ್ ಸಿಂಹರಿಂದ ಕರೆ ಕೊಟ್ಟಿದ್ದಾರೆ. ಮೈಸೂರು ದಸರಾ ಎಲ್ಲರಿಗೂ ಗೊತ್ತು,. ಆದ್ರೆ ಮಹಿಷ ದಸರಾ ಇತ್ತೀಚೆಗೆ ಹುಟ್ಟು ಹಾಕಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಮಹಿಷ ದಸರಾ ವಿರೋಧಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಈ ನಡುವೆಯೂ ಜನರನ್ನ ಸಂಘಟಿಸಲು ಪ್ರತಾಪ್ ಸಿಂಹ ಮುಂದಾಗಿದ್ದಾರೆ. ಜಾಥಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಧರ್ಮ ರಕ್ಷಣೆಗೆ ಎಲ್ಲರೂ ಒಗ್ಗೂಡುವಂತೆ ಮನವಿ ಮಾಡಿದ್ದಾರೆ. ಶಾಶ್ವತವಾಗಿ ಮಹಿಷಾ ದಸರಾವನ್ನ ಮಟ್ಟಹಾಕಲು ಮುಂದಾಗುವಂತೆ ಸಂಸದ ಪ್ರತಾಪ್ ಸಿಂಗ್ ಕರೆ ಕೊಟ್ಟಿದ್ದಾರೆ. ಅನುಮತಿ ವಿಚಾರದಲ್ಲಿ ಪೊಲೀಸರ ಜತೆ ಮತ್ತೆ ಮಾತನಾಡುತ್ತೇನೆ ಅಂತಾನೂ ಹೇಳಿದ್ದಾರೆ.

ಒಂದ್ಕಡೆ ಮಹಿಷ ದಸರಾ ಪರ ಮತ್ತೊಂದು ಕಡೆ ವಿರೋಧದ ಕಾವು ಜೋರಾಗುತ್ತಿದೆ. ಈ ವಿವಾದದ ನಡುವೆ ಮಹಿಷಾಸುರನ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತೆ. ಚಾಮುಂಡಿ ಬೆಟ್ಟಕ್ಕೆ ತೆರಳುವ ವೇಳೆ ಮಹಿಷಾಸುರನ ಪ್ರತಿಮೆ ಎಲ್ಲರ ಗಮನ ಸೆಳೆಯುತ್ತೆ. ಮಹಿಷಾಸುರ ಮರ್ದಿನಿಯ ಕಥೆಯೂ ಜನಜನಿತವಾಗಿದೆ. ಅಸಲಿಗೆ ಮಹಿಷ ಅಂದ್ರೆ ಸಂಸ್ಕೃತದಲ್ಲಿ ಎಮ್ಮೆ, ಮಹಿಷಾಸುರ ಅಂದ್ರೆ ರಾಕ್ಷಸ. ತನ್ನನ್ನ ಯಾವುದೇ ಮನುಷ್ಯ ಕೊಲ್ಲೋಕೆ ಸಾಧ್ಯವೇ ಇಲ್ಲದಂಥಾ ವರ ಪಡೆದಿದ್ದ ಮಹಿಷನ ಆರ್ಭಟಕ್ಕೆ ದೇವತೆಗಳೆಲ್ಲಾ ಸೋತು ಹೋಗಿದ್ದರು. ಹೀಗಾಗಿ ದೈವಿಕ ಶಕ್ತಿಗಳೆಲ್ಲಾ ಒಂದಾಗಿ ಬಳಿಕ ದುರ್ಗಾ ದೇವಿಯ ಅವತಾರವಾಯ್ತು. ದುರ್ಗೆಯು ಸಿಂಹದ ಮೇಲೆ  ಬಂದು ತನ್ನ ತ್ರಿಶೂಲದಿಂದ ಮಹಿಷಾಸುರನನ್ನು ಕೊಂದಳು. ಹೀಗಾಗಿ ಆಕೆಗೆ ಮಹಿಷಾಸುರ ಮರ್ದಿನಿ ಅನ್ನೋ ಹೆಸರು ಬಂತು. ಆಕೆ ಚಾಮುಂಡಿ ದೇವಿ.. ಇಂದಿಗೂ ಚಾಮುಂಡಿ ಬೆಟ್ಟದಲ್ಲಿ ಆಕೆ ನೆಲೆಯಾಗಿದ್ದಾಳೆ ಅನ್ನೋದು ಪುರಾಣ ಕಥೆ. ಕಥೆಯ ಪ್ರಕಾರ ಮಹಿಷಾಸುರ ಒಬ್ಬ ರಾಕ್ಷಸ. ಇಂಥಾ ರಾಕ್ಷಸನನ್ನು ಪೂಜೆ ಮಾಡೋದು ಏಕೆ ಅನ್ನೋದು ಬಿಜೆಪಿ ಪ್ರಶ್ನೆ. ಮಹಿಷ ದಸರಾ ಆಚರಣೆ ಮಾಡೋದು ಚಾಮುಂಡಿ ತಾಯಿಗೆ ಮಾಡುವ ಅವಮಾನ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಆದರೆ ಮಹಿಷ ದಸರಾ ಆಯೋಜಕರ ವಾದವೇ ಬೇರೆ.. ಮಹಿಷ ರಾಕ್ಷಸ ಅಲ್ಲ. ಮಹಿಷಾಸುರನ ಬಗ್ಗೆ ಕಥೆ ಕಟ್ಟಲಾಗಿದೆ ಎನ್ನುತ್ತಾರೆ. ನೀವು ದಸರಾ ಮಾಡಿ, ನಮಗೆ ಮಹಿಷ ದಸರಾ ಮಾಡಲು ಬಿಡಿ ಅಂತಾ ಪ್ರಗತಿಪರರು ಆಗ್ರಹಿಸುತ್ತಿದ್ದಾರೆ.

ಮೈಸೂರಿನಲ್ಲಿ 2015ರಲ್ಲಿ ಸಿದ್ದರಾಮಯ್ಯ ಸರ್ಕಾರದ ವೇಳೆ ಮಹಿಷ ದಸರಾ ಆರಂಭವಾಗಿತ್ತು. ದಲಿತ ಪರ ಸಂಘಟನೆಗಳು, ಪ್ರಗತಿಪರರು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಮಾಡ್ತಿದ್ದಾರೆ. 2019ರಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಮಹಿಷ ದಸರಾಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮತ್ತೆ ಮಹಿಷ ದಸರಾ ಆಚರಣೆ ಮುನ್ನಲೆಗೆ ಬಂದಿದೆ. ಈ ಬಾರಿ 50ನೇ ವರ್ಷದ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ ಎಂದು ಪೋಸ್ಟರ್ ಹಾಕಲಾಗಿದೆ.  ಮಹಿಷ ದಸರಾ ಆಚರಣೆ ಸಮಿತಿ ಬಿಡುಗಡೆ ಮಾಡಿದ್ದ ಪೋಸ್ಟರ್ ಭಾರೀ ವೈರಲ್ ಆಗಿತ್ತು. ಪರ ವಿರೋಧದ ನಡುವೆಯೇ ಈ ಬಾರಿ ಮಹಿಷ ದಸರಾಗೆ ಸಿದ್ಧತೆ ನಡೆದಿದೆ. ಇನ್ನು ಮಹಿಷ ದಸರಾ ಆಚರಣೆ ವಿಚಾರ ಕೋರ್ಟ್ ಮೆಟ್ಟಿಲು ಕೂಡ ಏರಿದೆ. ಮಹಿಷ ದಸರಾ ಆಚರಣೆ ವಿರೋಧಿಸಿ ಮೈಸೂರಿನ 8ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಸ್ನೇಹಮಹಿ ಕೃಷ್ಣ ಎಂಬುವರು ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದೆ. ಒಟ್ಟಾರೆ ಮಹಿಷ ದಸರಾ ವಿವಾದ ಮೈಸೂರಿನಲ್ಲಿ ತಾರಕಕ್ಕೇರುತ್ತಿದ್ದು ಅಕ್ಟೋಬರ್ 13ರಂದು ಏನೆಲ್ಲಾ ಹೈಡ್ರಾಮಾ ನಡೆಯುತ್ತೋ ಕಾದು ನೋಡ್ಬೇಕು.

 

Shantha Kumari