ಅಂಬಾರಿ ಹೊರಲ್ಲ ಅಭಿಮನ್ಯು – ತುಂಟ ಭೀಮನೇ ಮುಂದಿನ ಕ್ಯಾಪ್ಟನ್?
ದಸರಾ ಗಜಪಡೆಗೆ ಮೇಜರ್ ಸರ್ಜರಿ

ಅಂಬಾರಿ ಹೊರಲ್ಲ ಅಭಿಮನ್ಯು – ತುಂಟ ಭೀಮನೇ ಮುಂದಿನ ಕ್ಯಾಪ್ಟನ್?ದಸರಾ ಗಜಪಡೆಗೆ ಮೇಜರ್ ಸರ್ಜರಿ

ಮೈಸೂರು ದಸರಾ ಅಂದ್ರೆ ನಮ್ಗೆಲ್ಲಾ ಥಟ್ ಅಂತಾ ನೆನಪಾಗೋದೇ ಜಂಬೂಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಸರ್ವಾಲಂಕೃತ ನಾಡದೇವಿ ಚಾಮುಂಡೇಶ್ವರಿ ತಾಯಿಯನ್ನ ಹೊತ್ತುಸಾಗೋ ಗಜಪಡೆಯೇ ನಾಡಹಬ್ಬಕ್ಕೆ ಕಳಶಪ್ರಾಯವಿದ್ದಂತೆ. ಈ ಬಾರಿ ಒಟ್ಟು 14 ಆನೆಗಳು ಭಾಗಿಯಾಗಿದ್ವು. ಸತತ ಆರನೇ ಬಾರಿಗೆ ಅಭಿಮನ್ಯು ನಾಡದೇವಿಯನ್ನ ಹೊತ್ತು ಸಾಗಿದ್ದಾನೆ. ಈ ಗತ್ತು, ಗಾಂಭೀರ್ಯ.. ಆ ನಡಿಗೆ ನೋಡುಗರ ಮೈರೋಮಾಂಚನವಾಗುತ್ತೆ. ಆದ್ರೆ ಅಭಿಮನ್ಯುವಿನ ಈ ನಾಯಕತ್ವ ಇದೇ ವರ್ಷವೇ ಕೊನೆಯಾದಂತಿದೆ. ಯಾಕಂದ್ರೆ ಮುಂದಿನ ನಾಡಹಬ್ಬಕ್ಕೆ ಹೊಸ ಸಾರಥಿ ನೇಮಕವಾಗೋದು ಬಹುತೇಕ ಪಕ್ಕಾ ಇದೆ.

60 ವರ್ಷದ ಮೇಲೆ ಆನೆಗಳಿಗೆ ಭಾರ ಹೊರಿಸುವಂತಿಲ್ಲ!

2019ರಲ್ಲಿ ಗಜಪಡೆಯ ಕ್ಯಾಪ್ಟನ್ ಸ್ಥಾನದಿಂದ ಅರ್ಜುನ ಇಳಿದ ನಂತರ 2020ರಲ್ಲಿ ಗಜಪಡೆಯ ನೇತೃತ್ವ ವಹಿಸಿಕೊಂಡ ಅಭಿಮನ್ಯು ಸತತ 6 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದಾನೆ. ಇದೀಗ ಅಭಿಮನ್ಯುವಿಗೆ 59 ವರ್ಷ ತುಂಬಿದೆ. ಅಭಿಮನ್ಯು ಆರೋಗ್ಯವಾಗಿ ಉತ್ಸಾಹಿಯಾಗಿದ್ದರೂ ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ನಿವೃತ್ತಿ ಕಡ್ಡಾಯವಾಗಿದೆ. ಅರಣ್ಯ ಇಲಾಖೆ ಮಾರ್ಗಸೂಚಿ ಅನ್ವಯ 60 ವರ್ಷ ದಾಟಿದ ಆನೆಗಳ ಮೇಲೆ ಯಾವುದೇ ಭಾರ ಹೊರಿಸಬಾರದು, ಹೆಚ್ಚಿನ ಕಾರ್ಯಾಚರಣೆಗಳಲ್ಲಿ ಅವುಗಳನ್ನು ಬಳಸಿಕೊಳ್ಳುವಂತಿಲ್ಲ. ಅದರಂತೆ ಈಗ 59 ವರ್ಷಕ್ಕೆ ಕಾಲಿಟ್ಟಿರುವ ಅಭಿಮನ್ಯು ಆನೆ ಅಂಬಾರಿ ಹೊರುವುದು ಇದೇ ವರ್ಷಕ್ಕೆ ಕೊನೆಯಾಗಲಿದೆ.  ಮುಂದಿನ ಸಲ ಅಭಿಮನ್ಯು ಅಂಬಾರಿ ಹೊರದೇ ಇದ್ರೂ ಕೂಡ ಗಜಪಡೆಯಲ್ಲಿ ಸ್ಥಾನ ಪಡೆಯಬಹುದು. ಹಿರಿಯಣ್ಣನಾಗಿ ಉಳಿದ ಆನೆಗಳ ಜೊತೆಗೂಡಲಿದ್ದಾನೆ.

ಅರಣ್ಯ ಇಲಾಖೆ ಪಾಲಿಗೆ ಎಕೆ 47 ಈ ಅಭಿಮನ್ಯು!

ಶಾಂತ ಸ್ವಭಾವದ ಅಭಿಮನ್ಯು ಕ್ಯಾಪ್ಟನ್ ಕೂಲ್ ಎಂದೇ ಫೇಮಸ್ ಆಗಿದ್ದಾನೆ. 1977 ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಾಳ ಅರಣ್ಯ ಪ್ರದೇಶದಲ್ಲಿ ಅಭಿಮನ್ಯು ಆನೆಯನ್ನು ಸೆರೆಹಿಡಿಯಲಾಯಿತು. ಕಳೆದ 25 ವರ್ಷಗಳಿಂದ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. 2015 ರ ವರೆಗೂ ಕರ್ನಾಟಕ ವಾದ್ಯಗೋಷ್ಠಿಯವರು ಕುಳಿತುಕೊಳ್ಳುವ ಗಾಡಿ ಎಳೆಯುವ ಕೆಲಸ ನಿರ್ವಹಣೆ ಮಾಡಿದ್ದಾನೆ. 2020ರಿಂದ ದಸರಾ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ. ಕಾಡಾನೆ ಪಳಗಿಸುವ ಸಾಮರ್ಥ್ಯ ಹೊಂದಿರೋ ಅಭಿಮನ್ಯು ಸುಮಾರು 200 ಕ್ಕೂ ಹೆಚ್ಚು ಕಾಡಾನೆ, 80 ಹುಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾನೆ. ಅಭಿಮನ್ಯುವನ್ನ ಕುಮ್ಕಿ ಸ್ಪೆಷಲಿಸ್ಟ್ ಅಂತಾನೇ ಅರಣ್ಯ ಇಲಾಖೆ ಬಿರುದು ಬೀಡಿದೆ. ಹುಲಿ ಮತ್ತು ಇತರೆ ಕಾಡುಪ್ರಾಣಿಗಳ ಕಾರ್ಯಾಚರಣೆಯಲ್ಲಿ ಆತನ ಕಾರ್ಯಕ್ಷಮತೆಗಾಗಿ AK47 ಅಂತಾನೇ ಹೆಸರಿಡಲಾಗಿದೆ. ಕರ್ನಾಟಕ ಮಾತ್ರವಲ್ಲದೆ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿಯೂ ಕಾಡು ಪ್ರಾಣಿಗಳ ಆಪರೇಷನ್​ನಲ್ಲಿ ಭಾಗಿಯಾಗಿದ್ದಾನೆ. ಅಂಬಾರಿ ಹೊರೋದ್ರ ಜೊತೆಗೆ ಕಾರ್ಯಾಚರಣೆಯಲ್ಲೂ ಮೇನ್ ವೆಪನ್ ಆಗಿದ್ದ ಅಭಿಮನ್ಯು ಮುಂದಿನ ಸಲ ದಸರೆಯ ಅಂಬಾರಿ ಹೊರೋದಿಲ್ಲ. ಹಾಗಾದ್ರೆ ಯಾರು ಕ್ಯಾಪ್ಟನ್ ಆಗ್ತಾರೆ ಅಂದ್ರೆ ಅಲ್ಲಿ ಮೂರು ಆನೆಗಳ ನಡುವೆ ರೇಸ್ ಇದೆ.

ಮಹೇಂದ್ರ, ಧನಂಜಯ, ಭೀಮ.. ಯಾರಿಗೆ ಕ್ಯಾಪ್ಟನ್ ಪಟ್ಟ?

ಇನ್ನು ಅಭಿಮನ್ಯು ಉತ್ತರಾಧಿಕಾರಿ ಲಿಸ್ಟ್​ನಲ್ಲಿ ಮೂರು ಆನೆಗಳು ಮುಂಚೂಣಿಯಲ್ಲಿವೆ. ಮಹೇಂದ್ರ, ಧನಂಜಯ, ಭೀಮ ಹಾಗೇ ಕಂಜನ್ ಆನೆ. 42 ವರ್ಷದ ಮಹೇಂದ್ರ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನೂ ಹೊಂದಿದ್ದಾನೆ. ಮತ್ತೀಗೋಡು ಶಿಬಿರದ ಈ ಆನೆಯನ್ನ ಭವಿಷ್ಯದಲ್ಲಿ ಗಜಪಡೆಯ ಕ್ಯಾಪ್ಟನ್ ಆಗಬಹುದು ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 2022ರಲ್ಲಿ ಶ್ರೀರಂಗಪಟ್ಟಣ ದಸರಾದಲ್ಲೂ ಭಾಗಿಯಾಗಿದ್ದ. ಕಾಡಾನೆ ಹಾಗೂ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲೂ ಭಾಗಿಯಾದ ಅನುಭವ ಇದೆ. ಹಾಗೇ ದುಬಾರೆ ಆನೆ ಶಿಬಿರದಲ್ಲಿರುವ 45 ವರ್ಷದ ಧನಂಜಯ ಆನೆ ಕೂಡ ರೇಸ್​ನಲ್ಲಿದೆ. 2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಸೆರೆ ಹಿಡಿಯಲಾಗಿತ್ತು. ಕಾಡಾನೆ ಮತ್ತು ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾ ಬಂದಿದೆ. ಐದು ವರ್ಷದಿಂದ ದಸರಾದಲ್ಲಿ ಭಾಗವಹಿಸುತ್ತಿದೆ. 2.80 ಮೀಟರ್ ಎತ್ತರ ಇರುವ ಆನೆ, 4000-4200 ಕೆ.ಜಿಗೂ ಹೆಚ್ಚು ತೂಕವಿದೆ. ಸದ್ಯ ಈ ಬಾರಿ ದಸರೆಯ ನಿಶಾನೆ ಆಗಿ ಹೆಜ್ಜೆ ಹಾಕಿದ್ದ. ಧನಂಜಯನನ್ನ ಮುಂದಿನ ದಿನಗಳಲ್ಲಿ ಅಂಬಾರಿ ಹೊರಲು ಬಳಸೋಕೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಇನ್ನು ಗಜಪಡೆಯಲ್ಲಿ ಅಭಿಮಾನಿಗಳ ಪಾಲಿನ ದಿ ಮೋಸ್ಟ್ ಫೇವರೆಟ್ ಹೀರೋ ಭೀಮ ಕೂಡ ಉತ್ತರಾಧಿಕಾರಿ ಲಿಸ್ಟ್​ನಲ್ಲಿದ್ದಾನೆ. ಮತ್ತಿಗೋಡು ಶಿಬಿರದ 25 ವರ್ಷದ ಭೀಮ ಚಿನ್ನದ ಅಂಬಾರಿ ಹೊರಲು ಬೇಕಿರುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾನೆ. ಈ ಆನೆಯ ದಂತ, ದೇಹ ರಚನೆ, ಸಮತಟ್ಟಾಗಿರುವ ಬೆನ್ನು ಅಂಬಾರಿ ಇಡಲು ಸೂಕ್ತವಾಗಿದೆ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆ ಹಿಡಿಯಲಾದ ಆನೆ ಇದು. ಸಾಲಾನೆಯಾಗಿ ದಸರಾದಲ್ಲಿ ಹೆಜ್ಜೆ ಹಾಕಿದ್ದಾನೆ. ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಭವಿಷ್ಯದ ದೃಷ್ಟಿಯಿಂದ ತರಬೇತಿಯನ್ನೂ ಆರಂಭಿಸಿದ್ದಾರೆ.

ಇಲಾಖೆ ಹತ್ತಾರು ಮಾನದಂಡಗಳ ಮೇಲೆ ಆಯ್ಕೆ ಮಾಡುತ್ತೆ. ಆನೆಗಳು ಸಾವಿರ ಕೆಜಿಗೂ ಹೆಚ್ಚು ಭಾರ ಹೊರಲು ಸಮರ್ಥವಾಗಿರಬೇಕು. ಇನ್ನು ಚಿನ್ನದ ಅಂಬಾರಿ 750 ಕೆಜಿ ತೂಕ ಇರುತ್ತೆ. ಹಾಗೇ ಈ ಅಂಬಾರಿ ಎತ್ತರವೂ ಇದೆ. ಹೀಗಾಗಿ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತೆ. ನಡೆಯುವಾಗ ಓರೆಯಾಗಬಾರದು. ಸಿಡಿಮದ್ದುಗಳಿಗೆ ಬೆದರಬಾರದು. ಶಾಂತ ಸ್ವರೂಪದ ಆನೆಗಳಿಗೆ ಹೆಚ್ಚು ಇಂಪಾರ್ಟೆನ್ಸ್ ಕೊಡಲಾಗುತ್ತೆ. ಈ ಎಲ್ಲಾ ಮಾನದಂಡಗಳ ಮೇಲೆಯೇ ಗಜಪಡೆ ಕ್ಯಾಪ್ಟನ್​ನ ಆಯ್ಕೆ ಮಾಡಲಾಗುತ್ತೆ.

Shantha Kumari