ಅಭಿಮನ್ಯುಗೆ ರಾಜಮರ್ಯಾದೆ! ಮೈಸೂರು ಪೇಟ ಹಾಕಿ ಅದ್ಧೂರಿ ಸ್ವಾಗತ!

ಮೈಸೂರು ದಸರಾ ಮಹೋತ್ಸವದಲ್ಲಿ ತನ್ನ ಶಕ್ತಿ, ಶಿಸ್ತು ಮತ್ತು ಗಾಂಭೀರ್ಯದಿಂದ ಎಲ್ಲರ ಗಮನ ಸೆಳೆಯುವ ಗಜಪಡೆಯ ನಾಯಕ ಅಭಿಮನ್ಯುಗೆ ಅದ್ಧೂರಿ ಸ್ವಾಗತ ದೊರೆತಿದೆ. ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಹೊತ್ತು, ಹಲವು ವರ್ಷಗಳಿಂದ ಅಭಿಮನ್ಯು ತನ್ನದೇ ಆದ ಛಾಪು ಮೂಡಿಸಿದ್ದಾನೆ.
ಅರಮನೆ ನಗರಿ ಮೈಸೂರಿಗೆ ಆಗಮಿಸಿದ ಅಭಿಮನ್ಯುವನ್ನು ಮೈಸೂರು ಪೇಟ ತೊಡಿಸಿ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ಸಲ್ಲಿಸಿ, ಮಾವುತರು ಹಾಗೂ ಅರಮನೆ ಸಿಬ್ಬಂದಿ ಅಭಿಮನ್ಯುವನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಭಿಮನ್ಯುವಿನ ಆಗಮನದ ವೇಳೆ ಸಾರ್ವಜನಿಕರು ಕೂಡ ಆನೆಯನ್ನು ಕಣ್ತುಂಬಿಕೊಂಡು ಸಂತಸಪಟ್ಟರು.
ಇದನ್ನೂ ಓದಿ: ಸೋಮವಾರ ಶಿವನಿಗೆ ಯಾಕೆ ವಿಶೇಷ? – ಈ ರಹಸ್ಯ ನಿಮಗೆ ಗೊತ್ತಾ?
2026ರ ಮೈಸೂರು ದಸರಾ ಮಹೋತ್ಸವಕ್ಕೆ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ಜಂಬೂ ಸವಾರಿಯ ಸಂದರ್ಭದಲ್ಲಿ ನಿಶಾನೆ ಆನೆಗೆ ವಿಶೇಷ ಸ್ಥಾನವಿದ್ದು, ಆನೆಗಳ ತಂಡದ ಮೆರವಣಿಗೆಗೆ ಅದು ಮುನ್ನಡೆ ನೀಡುತ್ತದೆ.
6 ವರ್ಷಗಳ ಕಾಲ ಮೈಸೂರು ದಸರಾ ಜಂಬೂಸವಾರಿಯಲ್ಲಿ ಬರೋಬ್ಬರಿ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಕಣ್ಮನ ಸೆಳೆದಿದ್ದ ಅಭಿಮನ್ಯು, ಗಜಪಡೆಯ ಕ್ಯಾಪ್ಟನ್ ಆಗಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾನೆ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ಹೊಂದಿರುವ ಅಭಿಮನ್ಯುವಿಗೆ ಈ ಬಾರಿಯ ದಸರಾ ಮಹೋತ್ಸವದಲ್ಲಿ ವಿಶೇಷ ಗೌರವ ನೀಡಬೇಕೆಂಬ ಅಭಿಮಾನಿಗಳು ಹಾಗೂ ನಾಡಿನ ಜನತೆಯ ಆಶಯದಂತೆ, ಈ ಬಾರಿ ಈತನನ್ನು ‘ನಿಶಾನೆ ಆನೆ’ಯಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಅಭಿಮನ್ಯುವಿನ ಮೈಸೂರಿನ ಈ ಬಾರಿಯ ಆಗಮನಕ್ಕೆ ವಿಶೇಷ ಮಹತ್ವ ಹಾಗೂ ಗಾಂಭೀರ್ಯತೆ ದೊರೆತಿದೆ.

ನೋಡಿರಿ

