ಹುಟ್ಟಿದ 5 ತಿಂಗಳಲ್ಲೇ ಮಾತು – ಒಂದೂವರೆ ವರ್ಷಕ್ಕೆ ಪುಟಾಣಿಗೆ ಅಂತಾರಾಷ್ಟ್ರೀಯ ಮನ್ನಣೆ!
ಸಾಮಾನ್ಯವಾಗಿ ಒಂದು ವರ್ಷದ ನಂತರ ಮಕ್ಕಳು ಮಾತು ಕಲಿಯಲು ಆರಂಭಿಸುತ್ತಾರೆ. ಈ ವೇಳೆ ಅಪ್ಪ, ಅಮ್ಮ ಅಂತಾ ಒಂದೊಂದೇ ಪದಗಳನ್ನು ತೊದಲುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ. ಆದರೆ ಒಂದೂವರೆ ವರ್ಷದ ಈ ಮಗು ತನ್ನ ಅಸಾಧಾರಣ ಬುದ್ಧಿಮತ್ತೆಯಿಂದ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ‘ಸೂಪರ್ ಟ್ಯಾಲೆಂಟೆಡ್ ಕಿಡ್’ ನಲ್ಲಿ ತನ್ನ ಹೆಸರು ದಾಖಲಿಸಿದ್ದಾಳೆ.
ಮೈಸೂರಿನ ವಿಜಯನಗರದ 4ನೇ ಹಂತದ ನಿವಾಸಿಗಳಾದ ವಿಂದ್ಯಾಶ್ರೀ ಮತ್ತು ಉಲ್ಲಾಸ್ ದೇವನೂರು ದಂಪತಿಯ ಪುತ್ರಿ ಯು. ದಿಯಾ ದೇವನೂರು ಗೆ 18 ತಿಂಗಳು. ಆಕೆ ಜ. 6 ರಂದು ‘ಸೂಪರ್ ಟ್ಯಾಲೆಂಟೆಡ್ ಕಿಡ್ -2023’ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದಲ್ಲದೆ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದಾಳೆ. ನಾನಾ ಆಕಾರಗಳನ್ನು ಗೊಂದಲಕ್ಕೀಡಾಗದೆ ಸುಲಭವಾಗಿ ಗುರುತಿಸುವ ವಿಡಿಯೋಗಳನ್ನು ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಗೆ ಪೋಷಕರು ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ತಂಡ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ದಿಯಾ ಹೆಸರನ್ನು ಪ್ರಕಟಿಸಿದೆ. ಜತೆಗೆ ಪ್ರಮಾಣ ಪತ್ರ ಮತ್ತು ಪದಕವನ್ನು ಪೋಸ್ಟ್ ಮೂಲಕ ಪೋಷಕರಿಗೆ ಕಳುಹಿಸಿದೆ.
ಇದನ್ನೂ ಓದಿ: 40 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲ ಈ ಮಹಿಳೆ!: ಕಾರಣ ಕೇಳಿ ತಬ್ಬಿಬ್ಬಾದ ವೈದ್ಯರು…
ಒಂದೂವರೆ ವಯಸ್ಸಿನ ಮಕ್ಕಳು ಅಂಬೆಗಾಲಿಡುತ್ತಾ, ತೊದಲು ನುಡಿಯಲು ಪ್ರಯತ್ನಿಸುತ್ತಿರುತ್ತವೆ. ಆದರೆ, ದಿಯಾ ಮಾತ್ರ ಡಾ.ಅಂಬೇಡ್ಕರ್, ಮಹಾತ್ಮಗಾಂಧಿ, ಇನ್ಫೋಸಿಸ್ ಸುಧಾಮೂರ್ತಿ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳನ್ನು ಗುರುತಿಸುತ್ತಾಳೆ. ಅಷ್ಟೇ ಅಲ್ಲ ದ್ರಾಕ್ಷಿ, ಸೇಬು, ಬಾಳೆಹಣ್ಣು, ಸೌತೆಕಾಯಿ, ಪಪ್ಪಾಯ, ಮೆಣಸಿನಕಾಯಿ, ಈರುಳ್ಳಿ, ಕೋಳಿ, ಪಾರಿವಾಳ, ಕಾಗೆ, ಟರ್ಕಿ, ಬೆಕ್ಕು, ನಾಯಿ, ಅಳಿಲು, ಇಲಿ, ಒಂಟೆ, ಹಸು, ಫ್ಯಾನ್, ಗಡಿಯಾರ, ಫ್ರಿಡ್ಜ್, ಬಾಲ್, ಕನ್ನಡಿ, ಛತ್ರಿ, ಬಾಚಣಿಗೆ, ಕತ್ತರಿ, ಟೂತ್‌ಬ್ರಷ್, ಹಾಸಿಗೆ, ಐರನ್‌ಬಾಕ್ಸ್, ಟಾರ್ಚ್, ಸ್ಪೂನ್, ಫೋನ್, ಸೋಪು… ಸೇರಿದಂತೆ ಪಕ್ಷಿಗಳು, ಬಣ್ಣಗಳು, ವಸ್ತುಗಳು, ವಾಹನಗಳು, ದೇಹದ ಭಾಗಗಳು, ಇಂಗ್ಲಿಷ್ ನ ವರ್ಣಮಾಲೆ ಎ ಯಿಂದ ಜಿ ವರೆಗೆ, ಕನ್ನಡ ವರ್ಣಮಾಲೆ ಅ ಯಿಂದ ಅಃ ವರೆಗೆ ಗುರುತಿಸಿ ಹೇಳುತ್ತಾಳೆ. 1ರಿಂದ 20 ಸಂಖ್ಯೆಗಳನ್ನು ಸ್ಪಷ್ಟವಾಗಿ ಹೇಳುತ್ತಾಳೆ. ಇದಲ್ಲದೆ ವಾರದ ಎಲ್ಲಾ ದಿನಗಳು, ವರ್ಷದ ಎಲ್ಲಾ ತಿಂಗಳುಗಳನ್ನು ನಿರರ್ಗಳವಾಗಿ ಹೇಳುತ್ತಿದ್ದಾಳೆ.
ಈ ಬಗ್ಗೆ ದಿಯಾ ತಾಯಿ ವಿಂದ್ಯಾ ಮಾತನಾಡಿದ್ದಾರೆ. ”ದಿಯಾ 3-4 ತಿಂಗಳಿನ ಕೂಸಾಗಿದ್ದಾಗಲೇ ಕೈ ಬೆರಳುಗಳನ್ನು ಎಣಿಕೆ ಮಾಡುತ್ತಿದ್ದಳು. ಇದು ನನಗೆ ತುಂಬಾ ವಿಭಿನ್ನ ಎನಿಸಿತು. ಆಗಲೇ ನಾನು ಒಂದು, ಎರಡು , ಮೂರು ಎಂದು ಸಂಖ್ಯೆ ಹೇಳಿಕೊಡುತ್ತಿದ್ದೆ. 5 ತಿಂಗಳಾಗಿದ್ದಾಗ ನಾವು ಏನು ಹೇಳುತ್ತೀವಿ ಅದನ್ನು ಗ್ರಹಿಸಿ ಪ್ರತಿಕ್ರಿಯೆ ನೀಡುತ್ತಿದ್ದಳು. ಆಟವಾಡುವಾಗ 5 ತಿಂಗಳಲ್ಲೇ ಅಪ್ಪ ಎಂದು ಕರೆದಳು. ಇದನ್ನೆಲ್ಲ ಗಮನಿಸಿದ ನಾನು ಆಕೆಯೊಂದಿಗೆ ಸಂವಹನ ಮಾಡುವುದನ್ನು ಹೆಚ್ಚಿಸಿದೆ. ಅದರಿಂದ ಬೇಗ ಮಾತು ಕಲಿತಳು. 9 ತಿಂಗಳಾಗುವಷ್ಟರೊಳಗೆ ಅಮ್ಮ, ಅಪ್ಪ, ತಾತ ಮತ್ತಿತರರನ್ನು ಕರೆಯುತ್ತಿದ್ದಳು. ಆಗಲೇ ನನ್ನ ತಲೆಯಲ್ಲಿ’ಟ್ಯಾಲೆಂಟೆಡ್ ಕಿಡ್ ಅವಾರ್ಡ್’ಗೆ ವಿಡಿಯೋ ಅಪ್‌ಲೋಡ್ ಮಾಡಬೇಕೆನಿಸಿತು. ಬಳಿಕ ಆಕೆ ಮಾತನಾಡುತ್ತಿರುವ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಸ್ಪರ್ಧೆಗೆ ಕಳುಹಿಸಿದೆ. ಇದೀಗ ದಿಯಾ ದಾಖಲೆ ಬರೆದಿರುವುದು ಖುಷಿ ತಂದಿದೆ” ಎಂದಿದ್ದಾರೆ.