ಮೈಸೂರಿನಲ್ಲಿ ಮುಂದುವರಿದ ಕಾಡಾನೆ ಅಟ್ಟಹಾಸ – ಕಬ್ಬಿನ ಗದ್ದೆಯಲ್ಲೇ ರೈತ ಬಲಿ

ಮೈಸೂರಿನಲ್ಲಿ ಮುಂದುವರಿದ ಕಾಡಾನೆ ಅಟ್ಟಹಾಸ –  ಕಬ್ಬಿನ ಗದ್ದೆಯಲ್ಲೇ ರೈತ ಬಲಿ

ಕಾಡಾನೆ ದಾಳಿಯಿಂದ ರೈತನೋರ್ವ ಮೃತಪಟ್ಟಿರುವ ಘಟನೆ ತಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಪರಿಣಾಮಿಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ಪರಿಣಾಮಿಪುರ ಗ್ರಾಮದ ಗುರುಮಲ್ಲಪ್ಪ (70) ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ

ಇದನ್ನೂ ಓದಿ: ರಣಜಿಯಲ್ಲಿ ಬಲಿಷ್ಠ ಬಂಗಾಳವನ್ನ ಬಗ್ಗು ಬಡಿದು ಫೈನಲ್‌ಗೆ ಎಂಟ್ರಿ ಕೊಟ್ಟ ಜಮ್ಮು – ಕಾಶ್ಮೀರ

ಗುರುಮಲ್ಲಪ್ಪ ಕಬ್ಬಿನ ಗದ್ದೆಗೆ ನೀರು ಹಾಯಿಸುವ ವೇಳೆ ಹಿಂದಿನಿಂದ ಬಂದ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದು, ಈ ಒಂಟಿ ಸಲಗ ಶಿವನಸಮುದ್ರ, ಸತ್ಯ ಮಂಗಲ ಭಾಗದ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಡಾನೆ ಕಾಣಿಸಿಕೊಂಡ ಬಳಿಕ ಗ್ರಾಮಸ್ಥರು ದೂರವಾಣಿ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅವರು ಸಕಾಲಕ್ಕೆ ಬಾರದಿದ್ದರಿಂದಲೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅರಣ್ಯ ಇಲಾಖೆಯವರ ಮೇಲೆ ಕ್ರಮ ಜರುಗಿಸಿ ಹಾಗೂ ಮೃತಪಟ್ಟ ವ್ಯಕ್ತಿಯ ಕುಟುಂಬದವರಿಗೆ ಹೆಚ್ಚಿನ ಪರಿಹಾರ ನೀಡಿ ಎಂದೂ ಆಗ್ರಹಿಸಿದ್ದಾರೆ.

ಸುದ್ದಿ ತಿಳಿದು ತಹಶಿಲ್ದಾ‌ರ್ ಸುರೇಶಾಚಾರ್, ತಿ.ನರಸೀಪುರ‌ ಪೊಲೀಸ್ ವೃತ್ತನಿರೀಕ್ಷಕ ಧನಂಜಯ್ ಹಾಗೂ ತಾಲೂಕು ವಲಯ ಅರಣ್ಯ ಅಧಿಕಾರಿ ಉಮೇಶ್ ಅವರು ಸ್ಥಳಕ್ಕೆ ಆಗಮಿಸಿ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವೊಲಿಸಿದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ.

ಡ್ರೋನ್​ ಕ್ಯಾಮರಾ ಬಳಸಿ ಕಾಡಾನೆ ಕಾರ್ಯಾಚರಣೆ: 

ಗ್ರಾಮಸ್ಥರ ಒತ್ತಾಯದ ಬಳಿಕ ಸಂಜೆ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಡ್ರೋನ್​ ಕ್ಯಾಮರಾ ಬಳಸಿ ಕಾಡಾನೆಯನ್ನು ಪತ್ತೆ ಹಚ್ಚಿ, ಅರಣ್ಯ ಪ್ರದೇಶಕ್ಕೆ ವಾಪಸ್‌ ಕಳುಹಿಸಲು ಕಾರ್ಯಾಚರಣೆ ನಡೆಸಲು ಆರಂಭಿಸಿದರು. ಇಂದು ಬೆಳಗ್ಗೆ ಅರಣ್ಯಾಧಿಕಾರಿಗಳು ಮತ್ತೆ ಗ್ರಾಮಸ್ಥರನ್ನು ಮನವೊಲಿಸಿದ ಪರಿಣಾಮ, ಮೃತನ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒಪ್ಪಿದ್ದಾರೆ.

Kishor KV

Leave a Reply

Your email address will not be published. Required fields are marked *