ಆಕಾಶದಲ್ಲಿ ನಿಗೂಢ ಸುರುಳಿಯಾಕೃತಿ –  ಏನಿದು ವಿಜ್ಞಾನ ವಿಸ್ಮಯ?

ಆಕಾಶದಲ್ಲಿ ನಿಗೂಢ ಸುರುಳಿಯಾಕೃತಿ –  ಏನಿದು ವಿಜ್ಞಾನ ವಿಸ್ಮಯ?

ನವದೆಹಲಿ: ಆಕಾಶದಲ್ಲಿ ನಿಗೂಢ ಸುರುಳಿಯಾಕೃತಿಯೊಂದು ಜ. 18 ರಂದು  ರಾತ್ರಿ ವೇಳೆ ಕಾಣಿಸಿಕೊಂಡಿದ್ದು, ವಿಜ್ಞಾನಿಗಳಲ್ಲಿ ವಿಸ್ಮಯ ಮೂಡಿಸಿದೆ. ಜಪಾನಿನಲ್ಲಿ ಇರಿಸಲಾಗಿರುವ ಸುಬಾರು – ಅಸಾಹಿ ಸ್ಟಾರ್ ಕ್ಯಾಮೆರಾದಲ್ಲಿ ಈ  ದೃಶ್ಯ ಸೆರೆಯಾಗಿದೆ.

ಜಪಾನಿನ ರಾಷ್ಟ್ರೀಯ ಖಗೋಳ ವೀಕ್ಷಣಾಲಯವು ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಎಡ ಭಾಗದಲ್ಲಿ ಚುಕ್ಕಿಯಂತೆ ಸೃಷ್ಟಿಯಾದ ಸುರುಳಿಯು ಚಲಿಸಲು ಪ್ರಾರಂಭಿಸುತ್ತದೆ. ಕೆಲವೇ ಸಮಯದಲ್ಲಿ ಆ ಚುಕ್ಕಿಯು ಕಮಾನಾಕಾರದಲ್ಲಿ ಸುತ್ತಿಕೊಳ್ಳುತ್ತಾ ಬರುತ್ತದೆ. ಕ್ರಮೇಣವಾಗಿ ಅದು ಸ್ವಲ್ಪ ದೊಡ್ಡದಾಗಿ ಗೋಚರಿಸುತ್ತದೆ. ಬಳಿಕ ಅದು ಆಕಾಶದಲ್ಲಿ ನೀಲಿ ಸುರುಳಿಯಾಗಿ ಬದಲಾಗುತ್ತಾ ಹೋಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹೊಸ ಸಂಶೋಧನೆಗೆ ನಾಂದಿ ಹಾಡಿದೆ.

ಇದನ್ನೂ ಓದಿ: ಮಂಗಳನ ಅಂಗಳ ಮುಟ್ಟಲು 7 ತಿಂಗಳಲ್ಲ 45 ದಿನ ಸಾಕು – ಇತಿಹಾಸ ಬರೆಯುತ್ತಾ ಹೊಸ ಯೋಜನೆ..!?

ಆಕಾಶದಲ್ಲಿ ಕಾಣಿಸಿಕೊಂಡ ದೃಶ್ಯದ ಕುರಿತು ಏಲಿಯನ್ ಇರಬಹುದೇ, ಯುಎಫ್‌ಒ ಅಥವಾ ಗ್ಯಾಲೆಕ್ಸಿ ಇರಬಹುದೇ ಎಂಬ ಚರ್ಚೆಗಳು ಕೂಡ ನಡೆದಿವೆ. ದೂರದರ್ಶನದ ಚಿಹ್ನೆಯನ್ನು ಹೋಲುವಂತೆಯೇ ಈ ಸುರಳಿ ಇದೆ. ಇದರ ಬಗ್ಗೆ ವಿಜ್ಞಾನ ಲೋಕದಲ್ಲಿ ನೂರಾರು ಚರ್ಚೆಗಳು ನಡೆದಿರುವ ನಡುವೆಯೇ, ಸಂಶೋಧಕರು ಅದರ ಮೂಲ ಕೆದಕುವ ಪ್ರಯತ್ನ ನಡೆಸಿದ್ದಾರೆ.

ಇನ್ನು ಈ ನಿಗೂಢ ಸುರುಳಿಯಾಕೃತಿ ಸ್ಪೇಸ್‌ ಎಕ್ಸ್ ಉಪಗ್ರಹ ಉಡಾವಣೆ ಸಂದರ್ಭದಲ್ಲಿ ಹೊರಬಂದ ಘನೀಕೃತ ರಾಕೆಟ್ ಇಂಧನವನ್ನು ಒಳಗೊಂಡು ಸೃಷ್ಟಿಯಾಗಿದೆ. “ಈ ಸುರುಳಿಯು ಸ್ಪೇಸ್ ಎಕ್ಸ್ ಕಂಪೆನಿಯ ಹೊಸ ಉಪಗ್ರಹ ಉಡಾವಣೆಗೆ ಸಂಬಂಧಿಸಿರಬಹುದು” ಎಂದು ಜಪಾನ್ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಜನವರಿ 18ರಂದು ಫ್ಲೋರಿಡಾದ ಕೇಪ್ ಕ್ಯಾನಾವೆರಾಲ್ ಸ್ಪೇಸ್ ಫೋರ್ಸ್ ಸ್ಟೇಷನ್‌ನಿಂದ ಫಾಲ್ಕನ್ 9 ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು. ಈ ಹಿಂದೆ ಕೂಡ ಇದೇ ರೀತಿಯ ಸುರುಳಿಗಳು ಕಂಡುಬಂದಿದ್ದವು. ಫಾಲ್ಕನ್ 9 ರಾಕೆಟ್, ಹೆಚ್ಚುವರಿ ಇಂಧನವನ್ನು ಸಮುದ್ರಕ್ಕೆ ವಿಸರ್ಜಿಸುವ ಹಂತದಲ್ಲಿ ಈ ರೀತಿ ಸುರುಳಿ ಉಂಟಾಗುತ್ತವೆ ಎಂದು ವರದಿಯಾಗಿದೆ.

suddiyaana