ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ – ಹಲವರಿಗೆ ಗಾಯ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿಗೂಢ ವಸ್ತು ಸ್ಪೋಟಗೊಂಡಿದೆ. ಇಂದಿರಾನಗರದಲ್ಲಿರುವ ರಾಮಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಪೋಟದ ತೀವ್ರತೆಗೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಿಗೂಢ ಸ್ಫೋಟದ ವೇಳೆ ಕೆಫೆಯಲ್ಲಿ ಹಲವು ಗ್ರಾಹಕರಿದ್ದರು. ಸ್ಪೋಟದ ತೀವ್ರತೆಗೆ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡವರು ಮೈಕ್ರೋ ಚಿಪ್ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಒಂದೇ ಟೇಬಲ್ನಲ್ಲಿ ಕುಳಿತು ಊಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಪೋಟವಾಗುತ್ತಿದ್ದಂತೆಯೇ ಜನರು ಭಯಭೀತರಾಗಿ ಓಡಿಡಾಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಇತಿಹಾಸಕ್ಕೆ ಸೇರಲಿದೆ – ಹಿಮಂತ ಬಿಸ್ವ ಶರ್ಮಾ ಸ್ಪೋಟಕ ಹೇಳಿಕೆ
ಇನ್ನು ಈ ಸ್ಪೋಟಕ್ಕೆ ಕಾರಣವೇನು ಎಂಬುವುದು ತಿಳಿದುಬಂದಿಲ್ಲ. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಕೂಡ ಆಗಿರಬಹುದೆಂದು ಎಂದು ಶಂಕಿಸಲಾಗಿತ್ತು. ಆದ್ರೆ, ಸ್ಫೋಟದ ಸ್ಥಳದಲ್ಲಿ ಕೆಲ ಐಡಿ ಕಾರ್ಡ್ಗಳು ದೊರೆತಿವೆ. ಇನ್ನು ಬ್ಲಾಸ್ಟ್ ನಡೆದ ಸ್ಥಳದ ಸಮೀಪದಲ್ಲೇ ಒಂದು ಬ್ಯಾಟರಿ ಪತ್ತೆಯಾಗಿದೆ. ಅಲ್ಲದೇ ಹೋಟೆಲ್ಗೆ ಗ್ರಾಹಕರೊಬ್ಬರ ಬ್ಯಾಗ್ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹಲವು ಅ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಸಹ ಸ್ಳಳಕ್ಕೆ ಬಂದಿದ್ದು, ಸುಟ್ಟ ಸ್ಥಿತಿಯಲ್ಲಿರುವ ಬ್ಯಾಗ್ ಹಾಗೂ ಸ್ಥಳದಲ್ಲಿ ಸಿಕ್ಕ ಐಡಿ ಕಾರ್ಡ್ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇನ್ನು ಹೋಟೆಲ್ನ ಸಿಸಿಟಿವಿಗಳನ್ನು ಸಹ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಫೋಟದ ಹಿಂದೆ ಕಿಡಿಗೇಡಿಗಳ ಕೃತ್ಯ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದಾರೆ. ಅಗತ್ಯ ಉಪಕರಣಗಳ ಜೊತೆ ರಾಮೇಶ್ವರಂ ಕೆಫೆಗೆ ಬಂದಿರುವ FSL ತಂಡ ಪರಿಶೀಲನೆ ನಡೆಸುತ್ತಿದ್ದಾರೆ.