ಝಗಮಗಿಸಲಿದೆ ಸಾಂಸ್ಕೃತಿಕ ನಗರಿ ಮೈಸೂರು – 135 ಕಿ.ಮೀ ರಸ್ತೆಯ 119 ವೃತ್ತಗಳಲ್ಲಿ ದೀಪಾಲಂಕಾರಕ್ಕೆ ಸಿದ್ಧತೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಝಗಮಗಿಸುವ ದೀಪಾಲಂಕಾರ ಕೂಡ ಒಂದು. ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರಿನ 119 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ತಯಾರಿ ನಡೆದಿದೆ.
ಮೈಸೂರು ದಸರಾ ಮಹೋತ್ಸವವನ್ನು ಅರ್ಥಪೂರ್ಣ, ಅದ್ದೂರಿಯಾಗಿ ಆಚರಿಸಬೇಕು ಮತ್ತು ದಸರಾ ಜನರ ಉತ್ಸವವಾಗಬೇಕು ಎಂದು ಈ ಹಿಂದೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆಯೇ ಈ ಬಾರಿಯೂ ವಿದ್ಯುತ್ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹೀಗಾಗಿ ಮೈಸೂರಿನ 119 ವೃತ್ತಗಳಲ್ಲಿ ಅಂದ್ರೆ ಬರೋಬ್ಬರಿ 135 ಕಿ.ಮೀ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲು ಚಿಂತನೆ ನಡೆದಿದೆ.
ಇದನ್ನೂ ಓದಿ: ದಸರಾಗೆ ಸಜ್ಜಾಗುತ್ತಿದೆ ಮೈಸೂರು – ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮರಾ ಬಳಕೆಗೆ ನಿರ್ಬಂಧ
ಕೆ.ಆರ್.ವೃತ್ತ, ಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್ಹೌಸ್ ವೃತ್ತ, ಎಲ್ಐಸಿ ವೃತ್ತ ಸೇರಿ ನಗರದ ಹಲವು ಕಡೆ ದೀಪಾಲಂಕಾರ ಮಾಡಲಾಗುತ್ತೆ. ಮೈಸೂರಿನ ಸರ್ಕಾರಿ ಕಟ್ಟಡಗಳಿಗೂ ವಿಶೇಷ ದೀಪಾಲಂಕಾರ ಮಾಡಲಾಗುತ್ತೆ. 6.03 ಕೋಟಿ ರೂ. ಅಲ್ಪಾವಧಿ ಟೆಂಡರ್ ಮೂಲಕ ಚೆಸ್ಕಾಂನಿಂದ ಆಕರ್ಷಕ ವಿದ್ಯುತ್ ದೀಪಾಲಂಕಾರಕ್ಕೆ ಸಿದ್ದತೆ ನಡೆಯುತ್ತಿದೆ.
ಅಕ್ಟೋಬರ್ 15ರ ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಸಿಎಂ ಸೂಚಿಸಿದ್ದಾರೆ.