ನದಿ, ಡ್ಯಾಂ, ಝೂ, ಕೆರೆ, ಅರಮನೆ, ಮ್ಯೂಸಿಯಂ – ದಸರಾ ನೋಡಲು ಮೈಸೂರಿಗೆ ಹೋಗುವವರು ಈ ಸ್ಥಳಗಳಿಗೂ ಭೇಟಿ ನೀಡಿ!

ನದಿ, ಡ್ಯಾಂ, ಝೂ, ಕೆರೆ, ಅರಮನೆ, ಮ್ಯೂಸಿಯಂ – ದಸರಾ ನೋಡಲು ಮೈಸೂರಿಗೆ ಹೋಗುವವರು ಈ ಸ್ಥಳಗಳಿಗೂ ಭೇಟಿ ನೀಡಿ!

ಸಾಂಸ್ಕೃತಿಕ ನಗರಿಯಲ್ಲೀಗ ದಸರಾ ಸಂಭ್ರಮ ಕಳೆಗಟ್ಟಿದೆ. ಪಾರಂಪರಿಕ ತಾಣವಾಗಿರುವ ಮಲ್ಲಿಗೆ ನಗರಿ ಮೈಸೂರಿಗೆ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡ್ತಾರೆ. ಈಗ ದಸರಾ ಇರೋದ್ರಿಂದ ಎಲ್ಲೆಲ್ಲೂ ಜನರೇ ಕಾಣ್ತಾರೆ. ಮಕ್ಕಳಿಗೂ ದಸರಾ ಹಾಲಿಡೇಸ್ ಇರೋದ್ರಿಂದ ಬಹುತೇಕ ಮಂದಿ ಮೈಸೂರು ಟ್ರಿಪ್ ಪ್ಲ್ಯಾನ್ ಮಾಡ್ತಾರೆ. ಹೀಗೆ ಹೋಗುವವರಿಗೆ ನೋಡಲೇಬೇಕಾದ ಒಂದಷ್ಟು ಸ್ಥಳಗಳಿವೆ.

ಸಾಂಸ್ಕೃತಿಕ ನಗರಿ ಮೈಸೂರು ಅಂದಾಕ್ಷಣ ಬಹುತೇಕರಿಗೆ ನೆನಪಾಗುವುದು ಅಂಬಾವಿಲಾಸ ಅರಮನೆ. ಭವ್ಯವಾದ ಅರಮನೆಯನ್ನು ಬ್ರಿಟಿಷ್ ವಾಸ್ತುಶಿಲ್ಪ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಭಾರತದ ಪ್ರಸಿದ್ಧ ಹಾಗೂ ಅತಿ ದೊಡ್ಡ ಅರಮನೆಗಳಲ್ಲಿ ಅಂಬಾವಿಲಾಸ ಅರಮನೆ ಕೂಡ ಒಂದು. ಮೂರು ಅಂತಸ್ತಿನ ಕಟ್ಟಡ ಎಲ್ಲರ ಕಣ್ಮನ ಸೆಳೆಯುವಂತಿದ್ದು, 145 ಅಡಿಯ ಐದು ಅಂತಸ್ತಿನ ಗೋಪುರವಿದೆ. ಜಗನ್ಮೋಹನ ಪ್ಯಾಲೇಸ್ ಮೈಸೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಅತ್ಯಂತ ಪ್ರಮುಖವಾದುದು. ಜಗನ್ಮೋಹನ ಆರ್ಟ್ ಗ್ಯಾಲರಿ, ಪ್ಯಾಲೇಸ್, ಆಡಿಟೋರಿಯಂ ಮೈಸೂರನ್ನು ನೋಡಲು ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ಗ್ಯಾಲರಿಯಲ್ಲಿ ತಿರುವಂಕೂರಿನ ರಾಜ ರವಿ ವರ್ಮ ಅವರು ರಚಿಸಿರುವ ತೈಲವರ್ಣ ಚಿತ್ರಗಳು ಹಾಗೂ ಚೀನಾ, ಜಪಾನ್ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ : ದಳ ಶಾಸಕರ ಬೆಂಬಲ ನನಗೆ ಇದೆ ಎಂದಿದ್ದ ಸಿ.ಎಂ ಇಬ್ರಾಹಿಂ – ಜೆಡಿಎಸ್ ಇಬ್ಭಾಗವಾಗುವ ಭಯದಲ್ಲಿದ್ರಾ ದೊಡ್ಡಗೌಡರು..?

ನಾಡಿನ ಅಧಿದೇವತೆ, ಕರುನಾಡ ಮಹಾತಾಯಿ ಚಾಮುಂಡೇಶ್ವರಿ ಮೈಸೂರಿನಲ್ಲಿ ನೆಲೆಸಿದ್ದಾಳೆ. ಚಾಮುಂಡಿಬೆಟ್ಟ ಪ್ರಸಿದ್ದ ಧಾರ್ಮಿಕ ಕ್ಷೇತ್ರ. ಬೆಟ್ಟದ ಮೇಲೆ ಚಾಮುಂಡೇಶ್ವರಿಯ ದೇವಾಲಯವಿರುವುದರಿಂದ ಈ ಬೆಟ್ಟಕ್ಕೆ ಆ ದೇವತೆಯ ಹೆಸರೇ ಬಂದಿದೆ. ಬೆಟ್ಟದ ಮೇಲೆ ನಿಂತು ನೋಡಿದಾಗ ಮೈಸೂರಿನ ಸುತ್ತಲಿನ ಪ್ರಕೃತಿ ಸೌಂದರ್ಯ ರಮಣೀಯವಾಗಿ ಕಾಣಿಸುತ್ತದೆ. ಚಾಮುಂಡೇಶ್ವರಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸ್ಕಂದ ಪುರಾಣ ಮತ್ತಿತರ ಪ್ರಾಚೀನ ಗ್ರಂಥಗಳು ಎಂಟು ಬೆಟ್ಟಗಳಿಂದ ಸುತ್ತುವರಿದ ತ್ರಿಮುಕುಟ ಕ್ಷೇತ್ರ ವೆಂಬ ಪವಿತ್ರ ಕ್ಷೇತ್ರವನ್ನು ಉಲ್ಲೇಖಿಸುತ್ತವೆ. ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನವಾದುದು. ಮೈಸೂರು ಅರಸರು ಈ ದೇವಿ ಅರಾಧಕರಾಗಿದ್ದರು. ಈ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಲಾಗಿದ್ದು ಹೆಬ್ಬಾಗಿಲು, ಪ್ರವೇಶ ದ್ವಾರ, ನವರಂಗ, ಅಂತರಾಳ, ಗರ್ಭಗೃಹ ಹೊಂದಿದೆ. ಚಾಮುಂಡೇಶ್ವರಿ ದೇವಾಲಯದ ಮಹಾದ್ವಾರದ ಮೇಲೆ ಸುಂದರವಾದ ‘ಗೋಪುರ’ ಹಾಗೂ ಗರ್ಭ ಗುಡಿಯ ಮೇಲೆ ‘ವಿಮಾನ’ ಶಿಖರಗಳಿವೆ.

ಮೈಸೂರು ರೈಲ್ವೆ ಮ್ಯೂಸಿಯಂ ಈ ಅಪರೂಪದ ಮ್ಯೂಸಿಯಂ ಪುಟಾಣಿಗಳ ಪಾಲಿನ ಅಚ್ಚುಮೆಚ್ಚಿನ ತಾಣ ಹಾಗೂ ಸಾಂಸ್ಕೃತಿಕ ನಗರಿಯ ಪ್ರಮುಖ ಪ್ರೇಕ್ಷಣೀಯ ಸ್ಥಳ. 32 ಎಕರೆ ವಿಶಾಲ ಪ್ರದೇಶದಲ್ಲಿರುವ ಮ್ಯೂಸಿಯಂನಲ್ಲಿ ಆಕರ್ಷಕ ಹಾಗೂ ಅಪರೂಪದ ಬ್ರಿಟಿಷರ ಕಾಲದ ರೈಲು ಎಂಜಿನ್‌ಗಳಿಗೆ ಹಾಗೂ ಸ್ಟೀಮ್ ಎಂಜಿನ್‌ಗಳಿವೆ. ಇವೆಲ್ಲವೂ ನೋಡುಗರನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ. ಭಾರತೀಯ ರೈಲ್ವೆ 1979ರಲ್ಲಿ ಈ ಮ್ಯೂಸಿಯಂನನ್ನು ಸ್ಥಾಪಿಸಿತು. ದೇಶದಲ್ಲಿ ಇರುವುದೇ ಎರಡೇ ರೈಲ್ವೆ ಮ್ಯೂಸಿಯಂ. ಒಂದು ಹೊಸದಿಲ್ಲಿಯ ನ್ಯಾಷನಲ್ ರೈಲ್ವೆ ಮ್ಯೂಸಿಯಂ, ಮತ್ತೊಂದು ಮೈಸೂರಿನ ಈ ರೈಲ್ವೆ ಮ್ಯೂಸಿಯಂ.

ಚಾಮರಾಜೇಂದ್ರ ಮೃಗಾಲಯ ಮೈಸೂರು ಮೃಗಾಲಯ ಮೈಸೂರು ಅರಮನೆ ಸಮೀಪವಿದೆ. 245 ಎಕರೆಯಷ್ಟು ವಿಸ್ತೀರ್ಣದಲ್ಲಿರುವ ಈ ಮೃಗಾಲಯವು ದಕ್ಷಿಣ ಭಾರತದ ಪ್ರಸಿದ್ದ ಮೃಗಾಲಯ. ವಿವಿಧ ರೀತಿಯ ಪ್ರಾಣಿ –ಪಕ್ಷಿಗಳಿರುವುದು ಇಲ್ಲಿನ ವಿಶೇಷತೆ. 1892ರಲ್ಲಿ ರಾಜವಂಶದ ಆಶ್ರಯದಲ್ಲಿ ಪ್ರಾರಂಭವಾದ ಈ ಮೃಗಾಲಯವು ವಿಶ್ವದ ಪ್ರಸಿದ್ದ ಮೃಗಾಲಯಗಳ ಪಟ್ಟಿಯಲ್ಲಿದೆ.

ನಾಡಹಬ್ಬ ನೋಡಲು ಹೋಗುವವರು ಕಾರಂಜಿ ಕೆರೆಯನ್ನ ನೋಡಬಹುದು. ರೈಲ್ವೆ ಮ್ಯೂಸಿಯಂಗೆ ಭೇಟಿ ನೀಡಬಹುದು. ಹಾಗೇ ಪುರಾಣ ಕಥೆ ಹೊಂದಿರುವ ತಲಕಾಡು ಪುಣ್ಯಕ್ಷೇತ್ರವನ್ನ ಕಣ್ತುಂಬಿಕೊಳ್ಳಬಹುದು. ಸೆಂಟ್ ಫಿಲೋಮಿನಾಸ್ ಚರ್ಚ್, ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ಚಾಮರಾಜೇಂದ್ರ ಮೃಗಾಲಯ, ಕಬಿನಿ ನದಿ, ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಬೃಂದಾವನ ಗಾರ್ಡನ್ಸ್, ಚೆನ್ನಕೇಶವ ದೇವಾಲಯ, ಜಗನ್ಮೋಹನ ಅರಮನೆ, ರಂಗನತಿಟ್ಟು ಪಕ್ಷಿಧಾಮ, ಎಡ್ಮುರಿ ಜಲಪಾತ ಹಾಗೂ ಕೆಆರ್ ಎಸ್ ಡ್ಯಾಂನೂ ವೀಕ್ಷಣೆ ಮಾಡಬಹುದು. ಹೀಗಾಗಿ ದಸರಾ ನೋಡಲು ಹೋಗುವವರು ಮಿಸ್ ಮಾಡದೆ ಈ ಸ್ಥಳಗಳಿಗೂ ಭೇಟಿ ನೀಡಿ.

Shantha Kumari