ದಸರಾಗೆ ಸಜ್ಜಾಗುತ್ತಿದೆ ಮೈಸೂರು –  ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮರಾ ಬಳಕೆಗೆ ನಿರ್ಬಂಧ

ದಸರಾಗೆ ಸಜ್ಜಾಗುತ್ತಿದೆ ಮೈಸೂರು –  ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮರಾ ಬಳಕೆಗೆ ನಿರ್ಬಂಧ

ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಇದೆ. ಮೈಸೂರು ದಸರಾವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ನಾಡಹಬ್ಬಗೆ ಅಕ್ಟೋಬರ್ 15 ರಂದು ಸಿಎಂ ಸಿದ್ದರಾಮಯ್ಯ ದಸರಾಗೆ ಚಾಲನೆ ನೀಡಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಆರಂಭಗೊಂಡಿವೆ. ಅರಣ್ಯ ಇಲಾಖೆ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು, ಮೈಸೂರು ದಸರಾ ಕಳೆ ಹೆಚ್ವಿಸಲು ಗಜ ಪಡೆ ಇದೇ ಸೆಪ್ಟೆಂಬರ್ ‌1ಕ್ಕೆ ಆಗಮಿಸಲಿವೆ. ಇದೀಗ ಮೈಸೂರು ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಕೆಗೆ ನಿರ್ಬಂಧ ಹೇರಿದೆ.

ಈ ಬಗ್ಗೆ ಮೈಸೂರು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿಎಸ್ ಸುಬ್ರಮಣ್ಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೈಸೂರು ಅರಮನೆಯೂ ವಿಶ್ವ ವಿಖ್ಯಾತಿಯನ್ನು ಹೊಂದಿದ್ದು, ಅರಮನೆಯ ಸುತ್ತಮುತ್ತಲ ಪ್ರದೇಶವನ್ನು ‘ಹಳದಿ ವಲಯ’ (Yellow Zone) ವೆಂದು ಘೋಷಿಸಲಾಗಿದೆ. ಆದ್ದರಿಂದ ಅರಮನೆಯ ಹೊರಾಂಗಣದಲ್ಲಿ ಡ್ರೋನ್ ಕ್ಯಾಮೆರಾ ಬಳಸುವುದನ್ನು ನಿರ್ಬಂಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ!

ಹಳದಿ ವಲಯದಲ್ಲಿ ಒಂದು ವೇಳೆ ಡ್ರೋನ್ ಕ್ಯಾಮೆರಾವನ್ನು ಬಳಸುವುದಾದರೆ ಮೈಸೂರು ಅರಮನೆ ಮಂಡಳಿಯಿಂದ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯದೆ ಅನಧಿಕೃತವಾಗಿ ಡ್ರೋನ್ ಹಾರಾಟ ಮಾಡಿದಲ್ಲಿ ಅಂತವರ ವಿರುದ್ಧ ಕಾನುನೂ ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಡಹಬ್ಬ ದಸರಾ ಮಹೋತ್ಸವವನ್ನ ಅದ್ಧೂರಿಯಾಗಿ ಆಚರಣೆ ಮಾಡುವುದಕ್ಕೆ ರಾಜ್ಯ ಸರ್ಕಾರ ಈಗಿನಿಂದಲೇ ಸಿದ್ಧವಾಗುತ್ತಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ಕೂಡ ನಡೆಸಿದ್ದಾರೆ. ಅಕ್ಟೋಬರ್ 15 ರಂದು ಬೆಳಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ. ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನ ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ಹಿಡಿದು, ದಸರಾ ಮುಗಿಯುವರೆಗೂ ಹಾಗೂ ನಂತರ ಒಂದು ವಾರದವವರೆಗೆ ಇರಲಿದೆ. ಈ ಬಾರಿ ಸ್ತಬ್ಧ ಚಿತ್ರಗಳ ಆಯ್ಕೆ ಮಾಡುವ ವೇಳೆ ರಾಜ್ಯದ ಪರಂಪರೆ, ಜಿಲ್ಲಾ ವೈಶಿಷ್ಟ್ಯತೆ ಜತೆಗೆ 5 ಗ್ಯಾರಂಟಿಗಳನ್ನು ಬಿಂಬಿಸಿ ಜನರಿಗೆ ಸಂದೇಶವನ್ನು ನೀಡುವಂತಿರಬೇಕು ಅಂತ ಸ್ವತಃ ಸಿಎಂ ಸಿದ್ಧರಾಮಯ್ಯ ಹೇಳಿದ್ದರು.

suddiyaana