ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲು –  ಕೇಸ್‌ ಏನು?

ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲು –  ಕೇಸ್‌ ಏನು?

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದಾರೆ. ತನ್ನ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿ ದೂರಿ ನೀಡಿದ್ದಾರೆ ಎಂದು ವರದಿಯಾಗಿದೆ.

ಕಳೆದ ತಿಂಗಳು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನಡೆದ ಗ್ರಾ.ಪಂ. ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮದ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್  ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ತನ್ನ ವಿರುದ್ಧ ಏಕವಚನದಲ್ಲಿ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಕ್ರಿಮಿನಲ್ ಮಾನನಷ್ಟ ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ: ಬಹುಭಾಷಾ ಗಾಯಕ ಪಂಕಜ್ ನಿಧನ – ಮಂಗಳವಾರ ಅಂತ್ಯಕ್ರಿಯೆ

ದೂರಿನಲ್ಲಿ ಏನಿದೆ? 

ಪ್ರತಾಪ್ ಸಿಂಹ ಒಬ್ಬ ದೊಡ್ಡ ಅಯೋಗ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬಾಯಿ ಮುಚ್ಕಂಡು ಸುಮ್ಮನಿದ್ದರೆ ಸರಿ. ಇಲ್ಲವಾದಲ್ಲಿ ಇಡೀ ಕಾಂಗ್ರೆಸ್ ಪಾಳಯ ಮೈಸೂರಿಗೆ ಇಳಿಯಬೇಕಾಗುತ್ತೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಡಾ ಕೆ ಸುಧಾಕರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ತಾನು ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಸಿದ್ಧ ಎಂದು ಪ್ರದೀಪ್ ಈಶ್ವರ್ ಗುಡುಗಿದ್ದರು. ಸದ್ಯ ಈಗ ತಮ್ಮ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಪ್ರತಾಪ್ ಸಿಂಹ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್‌ ನನ್ನ ವಿರುದ್ಧ ಮಾಧ್ಯಮಗಳಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ಮುಠಾಳ, ಅಯೋಗ್ಯ ಎಂಬಿತ್ಯಾದಿ ನಿಂದನತ್ಮಾಕ ಶಬ್ದಗಳಿಂದ ತೇಜೋವಧ ಮಾಡಲು ಪ್ರಯತ್ನಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜನರಿಗೆ ನನ್ನ ಮೇಲೆ ತಪ್ಪು ಅಭಿಪ್ರಾಯ ಮೂಡಲು ದಾರಿಮಾಡಿಕೊಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಕನಿಷ್ಠ ಸೌಜನ್ಯವನ್ನು ಕೂಡ ತೋರದ ಚಾರಿತ್ರ್ಯ ವಧೆ ಮಾಡುವ ಮಾತುಗಳನ್ನು ಆಡಿದ್ದಾರೆ. ಹಾಗೂ ನನ್ನನ್ನು ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಪ್ರತಾಪ್ ಸಿಂಹ ಅವರು ಖಾಸಗಿ ದೂರು ಸಲ್ಲಿಸಿದ್ದಾರೆ.

ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದೀಪ್ ಈಶ್ವರ್ ಅವರು ಪ್ರತಾಪ್ ಸಿಂಹರನ್ನು ನಿಂದಿಸಿರುವ, ಮಾಧ್ಯಮದಲ್ಲಿ ಪ್ರಸಾರವಾದ ವಿಡಿಯೋ ಸಾಕ್ಷಿಯನ್ನೂ ಕೂಡ ಪೇನ್‌ಡ್ರೈವ್‌ ಮೂಲಕ ಸಲ್ಲಿಸಿದ್ದಾರೆ. ಹಾಗೂ ದಿನಪತ್ರಿಕೆಗಳಲ್ಲಿ ಬಂದಿರುವ ಹೇಳಿಕೆಗಳನ್ನೂ ಸಹ ಸಾಕ್ಷಿಯಂತೆ ನೀಡಿದ್ದಾರೆ.

Shwetha M