ಯದುವೀರ್ ಸೋಲಿಗೆ ಸಿದ್ಧವಾಯ್ತು ತಂತ್ರ – ಮೈಸೂರು ಗೆಲ್ಲಲು ಸಿದ್ದು ಪ್ಲ್ಯಾನ್ ಏನು?

ಯದುವೀರ್ ಸೋಲಿಗೆ ಸಿದ್ಧವಾಯ್ತು ತಂತ್ರ – ಮೈಸೂರು ಗೆಲ್ಲಲು ಸಿದ್ದು ಪ್ಲ್ಯಾನ್ ಏನು?

ಟಿಕೆಟ್ ವಿಚಾರವಾಗಿಯೇ ಸಾಕಷ್ಟು ಸದ್ದು ಮಾಡಿದ್ದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಕಣವಾಗಲಿದೆ. ಹಾಲಿ ಸಂಸದ ಪ್ರತಾಪ್ ಸಿಂಹಕ್ಕೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು ರಾಜವಂಶಸ್ಥ ಯದುವೀರ್ ಒಡೆಯರ್​ಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್​ನಿಂದ ಎಂ. ಲಕ್ಷ್ಮಣ್ ಅಖಾಡದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ಇದ್ದು, ಈ ಬಾರಿ ಇಬ್ಬರಿಗೂ ಕೂಡ ಗೆಲುವಿನ ಸವಾಲಿದೆ. ಮೈಸೂರು ಲೋಕಸಭಾ ಕ್ಷೇತ್ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ 4 ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಆದ್ರೆ ಈ ಸಲ ಹ್ಯಾಟ್ರಿಕ್ ಕನಸಿನಲ್ಲಿರೋ ಬಿಜೆಪಿಗೆ ಈ ಸಲ ಹಲವು ಸವಾಲುಗಳಿವೆ.

ಇದನ್ನೂ ಓದಿ: ಒಂದು ನಿಂಬೆ ಹಣ್ಣಿನ ದರ ಒಂದು ಕೆಜಿ ಟೊಮ್ಯಾಟೋ ಬೆಲೆಗೆ ಸಮ! – ಬಿಸಿಲ ಝಳದಂತೆ ದರವೂ ಏರಿಕೆ

ಉಭಯ ಅಭ್ಯರ್ಥಿಗಳಿಗೂ ಸವಾಲು!  

ಕಳೆದ ಲೋಕಸಭಾ ಚುನಾವಣೆಗೂ ಈ ಬಾರಿಯೂ ಲೋಕಸಭಾ ಚುನಾವಣೆಗೂ ಸಾಕಷ್ಟು ಬದಲಾವಣೆಗಳಾಗಿವೆ. ಈ ಬಾರಿ ಕೊಡಗಿನಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಕೃಷ್ಣರಾಜ ಕ್ಷೇತ್ರವೊಂದನ್ನೇ ಗೆದ್ದಿರುವುದು ಬಿಜೆಪಿ ಸಾಧನೆ. ಅದನ್ನ ಹೊರತು ಪಡಿಸಿದರೆ ದೋಸ್ತಿ ಪಕ್ಷ ಜೆಡಿಎಸ್ ಮೈತ್ರಿಯಿಂದ ಒಕ್ಕಲಿಗರ ಮತ ಸೆಳೆಯುವ ಅವಕಾಶ ಇದೆ. ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದು, ಪಿರಿಯಾಪಟ್ಟಣ ಭಾಗದಲ್ಲಿ ಜೆಡಿಎಸ್ ಒಲವುಳ್ಳ ಮತದಾರರು ಇದ್ದಾರೆ. ಆದರೆ, ಜೆಡಿಎಸ್ ಬಿಜೆಪಿಯ ಜೊತೆ ಹೋದಾಗಿನಿಂದ ನಿಷ್ಠಾವಂತ ಕಾರ್ಯಕರ್ತರು, ಮುಸ್ಲಿಂ, ಒಕ್ಕಲಿಗ ಸಮುದಾಯ ಒಂದು ಹೆಜ್ಜೆ ಹಿಂದೆ ಹೋದಂತೆ ಕಂಡುಬರುತ್ತಿದೆ. ಹೀಗಾಗಿ, ಈ ಬಾರಿಯ ಚುನಾವಣೆ ಅಷ್ಟು ಸುಲಭವಲ್ಲ. ಇನ್ನು ಕಾಂಗ್ರೆಸ್ ಪಕ್ಷ ಲಕ್ಷ್ಮಣ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದೆ. ಲಕ್ಷಣ್ ಮೂಲತಃ ದಳವಾಯಿ ಹೈಸ್ಕೂಲ್ ಪ್ರಾಂಶುಪಾಲರಾಗಿ ಕೆಲಸ ಮಾಡುವಾಗಿನಿಂದಲೂ, ದಳವಾಯ್ ಲಕ್ಷ್ಮಣ್ ಎಂದೇ ಚಿರಪರಿಚಿತರಾಗಿದ್ದಾರೆ.  ಯಾವುದೇ ಭ್ರಷ್ಟಾಚಾರದ ಆರೋಪವಿಲ್ಲ. ವ್ಯಕ್ತಿತ್ವದ ಮೇಲೆ ಕಪ್ಪು ಛಾಯೆ ಇಲ್ಲ. ಕಾಂಗ್ರೆಸ್ ರಾಜ್ಯ ವಕ್ತಾರರಾಗಿ ಸಮರ್ಥವಾಗಿ ಕಾರ್ಯ ನಿಭಾಯಿಸಿದ ವ್ಯಕ್ತಿ. ಆದ್ರೆ ರಾಜಕೀಯದಲ್ಲಿ ಮೈಸೂರಿನಿಂದ ಕೊಡಗಿನವರೆಗೆ ತಮ್ಮ ಛಾಪನ್ನು ಹೊಂದಿಲ್ಲ. ಕಾಂಗ್ರೆಸ್ ಪಕ್ಷ ಸದ್ಯ ಐದು ಕ್ಷೇತ್ರದಲ್ಲಿ ಗೆದ್ದಿರುವುದೇ ಇವರ ಶಕ್ತಿ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ತವರು. ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈಹಿಡಿಯುತ್ತಾ ನೋಡಬೇಕಿದೆ.

ಇನ್ನು ಯದುವೀರ್ ಅವರಿಗೆ ರಾಜಕೀಯ ಹೊಸದು. ತಳ ಮಟ್ಟದ ಕಾರ್ಯಕರ್ತರನ್ನು ತಲುಪುವ ಸವಾಲು ಇದೆ. ಯದುವೀರ್ ಅವರ ಮೇಲೆ ಆಕ್ರೋಶ ಇಲ್ಲದೆ ಇದ್ದರೂ ಪ್ರತಾಪ್ ಸಿಂಹ ಮೈಸೂರು-ಕುಶಾಲ ನಗರ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ವಿಚಾರಗಳಲ್ಲಿ ರೈತರ ನಡುವಿನ ಭಿನ್ನಾಭಿಪ್ರಾಯ ಮುನ್ನಲೆಗೆ ಬರಲಿದೆ. ಅದು ಕೂಡ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದನ್ನು ತಳ್ಳಿ ಹಾಕುವಂತಿಲ್ಲ. ಇನ್ನು ಮೈಸೂರು ಜಿಲ್ಲೆ ಹೇಳಿ ಕೇಳಿ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ. ಹೀಗಾಗಿ ಕಾಂಗ್ರೆಸ್​ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಸಿದ್ದರಾಮಯ್ಯ ಹೊಸ ಪ್ಲ್ಯಾನ್ ಮಾಡಿದ್ದಾರೆ.

ಆಪರೇಷನ್ ಪಾಲಿಟಿಕ್ಸ್! 

ಮೈಸೂರು, ಕೊಡುಗು ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಮೈಸೂರಿನ ರೆಸಾರ್ಟ್​ನಲ್ಲಿ ಕೂತು ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ. ಈಗಾಗಲೇ ಬಿಎಸ್​ಯಡಿಯೂರಪ್ಪರ ಆಪ್ತರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಬಿಜೆಪಿ ಕೂಡ ಕೌಂಟರ್ ಕೊಡಲು ಮುಂದಾಗಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸೆಳೆಯುತ್ತಿದೆ. ಕಳೆದ ಮೂರು ದಿನಗಳಿಂದ ಮೈಸೂರಿನಲ್ಲೇ ವಾಸ್ತವ್ಯ ಹೂಡಿರೋ ಸಿಎಂ ಸಿದ್ದರಾಮಯ್ಯ, ಬಿಎಸ್​ವೈ ಆಪ್ತ ಹೆಚ್​.ವಿ.ರಾಜೀವ್​ ಬಳಿಕ ಮತ್ತೊಬ್ಬರಿಗೆ ಗಾಳ ಹಾಕಿದ್ದಾರೆ. ಯಡಿಯೂರಪ್ಪ ಆಪ್ತ ಸದಾನಂದ ಅವರನ್ನು ಸೆಳೆದಿದ್ದಾರೆ. ಬಿಜೆಪಿಯಿಂದ ವರುಣಾ ಕ್ಷೇತ್ರದ ಆಕಾಂಕ್ಷಿಯೂ ಆಗಿದ್ದ ಸದಾನಂದ್​​ರನ್ನ ಕಾಂಗ್ರೆಸ್​ಗೆ ಸೆಳೆಯುವಲ್ಲಿ ಸಿಎಂ ಸಕ್ಸಸ್ ಆಗಿದ್ದಾರೆ. ವೀರಶೈವ ಸಮುದಾಯದ ಮುಖಂಡ ಆಗಿರೋದ್ರಿಂದ, ವೀರಶೈವ ಮತಗಳನ್ನ ಕ್ರೋಢೀರಣಕ್ಕೂ ಸಿಎಂ ಪ್ಲ್ಯಾನ್ ಮಾಡಿದ್ದಾರೆ. ಈ ಮಧ್ಯೆ ಪಾಲಿಕೆಯ ಮಾಜಿ ಸದಸ್ಯರುಗಳು ಕೂಡ ಕಾಂಗ್ರೆಸ್​ಗೆ ಸೇರ್ಪಡೆಯಾಗಿರೋದು ಮತ್ತಷ್ಟು ಬಲ ಬಂದಂತಾಗಿದೆ. ಇನ್ನು ಅಪರೇಷನ್ ಹಸ್ತಕ್ಕೆ ಕೌಂಟರ್ ಆಪರೇಷನ್ ಮಾಡಲು ಬಿಜೆಪಿ ಮುಂದಾಗಿದೆ. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್​ನ ಸ್ಥಳೀಯ ನಾಯಕರನ್ನ ಸೆಳೆಯಲು ಬಿಜೆಪಿ ತಂತ್ರ ಹೆಣೆಯುತ್ತಿದೆ.

ಮೈಸೂರು ಕೊಡಗು ಕ್ಷೇತ್ರ ಹೇಳಿಕೇಳಿ ಒಕ್ಕಲಿಗರ ಪ್ರಾಬಲ್ಯ ಹೊಂದಿದೆ. ಬಳಿಕ, ಮುಸ್ಲಿಂ, ಎಸ್ಸಿ ನಿರ್ಣಾಯಕ ಮತಗಳು. ಈ ಸಮುದಾಯಗಳು ಯಾರ ಕೈಹಿಡಿಯುತ್ತವೋ, ಅವರ ಗೆಲುವು ನಿಶ್ಚಿತ ಎನ್ನುವಂತಿದೆ. ಇನ್ನು ಲಿಂಗಾಯತ, ಕುರುಬ, ಕೊಡವ, ಆದಿವಾಸಿ, ಬುಡಕಟ್ಟು, ಬ್ರಾಹ್ಮಣರು ಸೇರಿದಂತೆ ಈ ಎಲ್ಲ ಜಾತಿಗಳ ಲೆಕ್ಕಾಚಾರ ಎಲ್ಲ ಪಕ್ಷಗಳಿಗೂ ಕಗ್ಗಂಟಾಗಿದೆ.

Shwetha M