ಮೈಸೂರು ದಸರಾ ಎಷ್ಟೊಂದು ಸುಂದರ – ಸಾಂಸ್ಕೃತಿಕನಗರಿಯಲ್ಲಿ ನಾಡಹಬ್ಬದ ವೈಭವ ಶುರು
ಮೈಸೂರು ದಸರಾ ಎಷ್ಟೊಂದು ಸುಂದರ. ಒಮ್ಮೆಯಾದರೂ ನೋಡು ಬಾರಾ ಈ ನಾಡಹಬ್ಬ. ಹೌದು. ಮೈಸೂರಿನಲ್ಲಿ ಇವತ್ತಿನಿಂದ ದಸರಾ ದರ್ಬಾರ್ ಶುರುವಾಗಿದೆ. ನಾಡಿನ ಸಂಸ್ಕೃತಿಯನ್ನು ಸಾರುವ ಈ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಮೈಸೂರು ಯಾಕೆ, ಇಡೀ ಕರುನಾಡೇ ಕಾಯುತ್ತಿದೆ. ಮೈಸೂರು ದಸರಾ ಉತ್ಸವ ಕರ್ನಾಟಕದ ಪ್ರಮುಖ ಉತ್ಸವ ಕೂಡಾ ಹೌದು. ನಾಡಹಬ್ಬದ ವೈಭವ, ನವರಾತ್ರಿಯ ಮಹೋತ್ಸವ ನೋಡುವುದೇ ಕಣ್ಣಿಗೆ ಹಬ್ಬ. ನಾಡಹಬ್ಬವನ್ನು ಈ ಬಾರಿ ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಈ ಭವ್ಯಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ – ಕೆಎಸ್‌ಆರ್‌ಟಿಸಿ 350 ಹೆಚ್ಚುವರಿ ಬಸ್‌ಗಳ ಸೇವೆ
ಹತ್ತು ದಿನಗಳ ಕಾಲ ನಾಡಹಬ್ಬದ ವೈಭವ ಮೈಸೂರಿನಲ್ಲಿ ಮುಗಿಲುಮುಟ್ಟಲಿದೆ. ದಸರಾ ಆಚರಣೆಗೆ ಸಾಕ್ಷಿಯಾಗಲು ರಾಜ್ಯಾದ್ಯಂತ, ದೇಶಾದ್ಯಂತ ಅಷ್ಟೇ ಯಾಕೆ ವಿದೇಶಗಳಿಂದಲೂ ಗಣ್ಯರು ಬರುತ್ತಾರೆ. ದಸರಾ ಹಬ್ಬದಲ್ಲಿ ದುಷ್ಟಶಕ್ತಿಯ ಮೇಲೆ ಒಳ್ಳೆಯತನದ ಜಯಿಸುವಿಕೆಯನ್ನು ಆಚರಿಸಲಾಗುತ್ತದೆ. ಚಾಮುಂಡೇಶ್ವರಿ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ವಧಿಸಿ ಶಾಂತಿ ಪಾಲನೆಗೆ ಕಾರಣವಾಗಿರುವುದು ಕೂಡಾ ನಾಡಹಬ್ಬದ ಆಚರಣೆಗೆ ಕಾರಣವಾಗಿದೆ.
ದಸರಾ ದರ್ಬಾರ್ ನ ಪ್ರಮುಖ ಆಕರ್ಷಣೆಯೇ ಕೊನೇ ದಿನದ ಜಂಬೂ ಸವಾರಿ. ವಿಶೇಷ ತರಬೇತಿ ಪಡೆದ ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು (750 ಕಿ.ಗ್ರಾಂ ಚಿನ್ನದಿಂದ ಮಾಡಲ್ಪಟ್ಟಿದೆ) ಭವ್ಯ ಮೆರವಣಿಗೆಯಲ್ಲಿ ಸಾಗಿಸುತ್ತವೆ. ಇದು ಮೈಸೂರು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದ ಬಳಿ ಮುಕ್ತಾಯಗೊಳ್ಳುತ್ತದೆ. ಮೆರವಣಿಗೆಯಲ್ಲಿ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳೂ ಇರಲಿವೆ. ಇನ್ನು ನಾಡಹಬ್ಬದಲ್ಲಿ ಕಲಾಕೃತಿಗಳು, ಕೈಮಗ್ಗ ಮತ್ತು ಇತರ ಸ್ಥಳೀಯ ಸಾಂಪ್ರದಾಯಿಕ ಕರಕುಶಲತೆಯನ್ನು ಪ್ರದರ್ಶಿಸುವ ಹಲವಾರು ಪ್ರದರ್ಶನಗಳನ್ನು ದಸರಾ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಸಾಮಾನ್ಯ ಬೆಲೆಗಳಿಗಿಂತ ಅಗ್ಗವಾಗಿಯೂ ಖರೀದಿಸಬಹುದು. ದಸರಾ ಸಮಯದಲ್ಲಿ ಮೈಸೂರು ಅರಮನೆಯನ್ನು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಬಳಸಿ ಅಲಂಕರಿಸಲಾಗುವುದು ಮತ್ತು ರಾತ್ರಿಯಲ್ಲಿ ಜಗಮಗಿಸುವ ಮೈಸೂರು ಅರಮನೆಯನ್ನು ದೂರದಿಂದ ನೋಡುವುದಕ್ಕೆ ಎರಡು ಕಣ್ಣು ಸಾಲವು. ದಸರಾ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆ, ಮರಳು ಶಿಲ್ಪಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ
ಭಾನುವಾರ ಬೆಳಿಗ್ಗೆ 10.15ಕ್ಕೆ ಸಿಎಂ ಸಿದ್ದರಾಮಯ್ಯ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುತ್ತಾರೆ. ಈ ಮೂಲಕ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ದಸರಾ ಕುಸ್ತಿ ಪಂದ್ಯಾವಳಿಗೆ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದು, ದೇವರಾಜ ಅರಸು ವಿವಿದೊದ್ದೇಶ ಕ್ರೀಡಾಂಗಣದಲ್ಲಿ ವಸ್ತು ಪ್ರದರ್ಶನವನ್ನ ಉದ್ಘಾಟನೆ ಮಾಡಲಿದ್ದಾರೆ. ರಾತ್ರಿ 7ಕ್ಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೈಸೂರಿನ ಅರಮನೆ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.