ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ – ಕೆಎಸ್‌ಆರ್‌ಟಿಸಿ 350 ಹೆಚ್ಚುವರಿ ಬಸ್‌ಗಳ ಸೇವೆ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ದಸರಾ ಹಬ್ಬಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಭಾನುವಾರದಿಂದ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿಯಾಗಿ 350 ಬಸ್‌ಗಳನ್ನು ರಸ್ತೆಗಳಿಸಲಾಗಿದೆ. ಈ ಮೂಲಕ ಮೈಸೂರಿಗೆ ರಾಜ್ಯ ವಿವಿಧೆಡೆಯಿಂದ ಸುಲಭವಾಗಿ ಬಸ್‌ಗಳು ಲಭ್ಯವಾಗಲಿವೆ.
ವರ್ಷಕ್ಕೊಮ್ಮೆ ನಡೆಯುವ ವಿಶ್ವವಿಖ್ಯಾತ ದಸರಾ ಜಂಬು ಸವಾರಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಜನ ಮೈಸೂರಿಗೆ ತೆರಳಲು ಬರುತ್ತಾರೆ. ಅದರಲ್ಲೂ ನವರಾತ್ರಿಯ ಎಲ್ಲಾ ದಿನಗಳಲ್ಲಿಯೂ ಮೈಸೂರು ನಗರದಲ್ಲಿ ವಿವಿಧ ಕಾರ್ಯಕ್ರಮ ಇದ್ದು, ಆ 9 ದಿನ ಜನರ ಆಗಮನ ನಿರ್ಗಮನ ಹೆಚ್ಚಿರುತ್ತದೆ ಹೀಗಾಗಿ, ಸದ್ಯ ಮೈಸೂರು ಜಿಲ್ಲೆಯಲ್ಲಿ ಓಡಾಡುತ್ತಿರುವ 1000 ಬಸ್‌ಗಳ ಜತೆಗೆ ಭಾನುವಾರದಿಂದ ಹೆಚ್ಚುವರಿಯಾಗಿ 350 ಬಸ್ ಓಡಾಡಲಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಮಹಿಷ ದಸರಾಕ್ಕಿಲ್ಲ ಅನುಮತಿ – ಜಿಲ್ಲೆಯಾದ್ಯಾಂತ ಎರಡು ದಿನ ನಿಷೇದಾಜ್ಞೆ ಜಾರಿ
ಎಲ್ಲೆಲ್ಲಿ ಹೆಚ್ಚುವರಿ ಬಸ್?
ಹೆಚ್ಚುವರಿ ಬಸ್‌ಗಳ ಪೈಕಿ ಬಹುತೇಕ ಬಸ್ ಮೈಸೂರು – ಬೆಂಗಳೂರು, ಮೈಸೂರು – ಹಾಸನ, ಮೈಸೂರು – ಚಾಮರಾಜನಗರ, ಮೈಸೂರು – ಕೊಡಗು ಮಾರ್ಗದಲ್ಲಿ ಸಂಚರಿಸಲಿವೆ. ಇನ್ನು ಮೈಸೂರು ಪ್ರವಾಸಿ ಸ್ಥಳಗಳಿಗೆ ಬಸ್ ಸಂಖ್ಯೆ ಹೆಚ್ಚಿಸಲಾಗಿದೆ. ಇನ್ನು ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿಯೂ 10 ದಿನಗಳ ಮಟ್ಟಿಗೆ ಮೈಸೂರಿಗೆ ವಿಶೇಷ ಬಸ್ ಓಡಿಸಲಾಗುತ್ತಿದೆ. ಬೇಡಿಕೆ ಹೆಚ್ಚಾದರೆ ಬೇರೆ ಜಿಲ್ಲೆಗಳ ಡಿಪೋಗಳಿಂದ ಬಸ್ಸುಗಳನ್ನು ತರಬೇಕಾಗಬಹುದು. ದಸರಾ ದಟ್ಟಣೆಯನ್ನು ನಿರ್ವಹಿಸಲು ವಿಭಾಗವು ಸಂಪೂರ್ಣ ಸನ್ನದ್ಧವಾಗಿದೆ ಎಂದು ಕೆಎಸ್ ಆರ್‌ಟಿಸಿ ಮಾಹಿತಿ ನೀಡಿದೆ.
ಉಚಿತ ಬಸ್ ಹಿನ್ನೆಲೆ ಬೇಡಿಕೆ ಹೆಚ್ಚಳ ಸಾಧ್ಯತೆ
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ ಜಾರಿ ಮಾಡಿದೆ. ಇದರಿಂದ ಮಹಿಳೆಯರ ಪ್ರವಾಸ ಹೆಚ್ಚಳವಾಗಿದೆ. ಸದ್ಯ ಮೈಸೂರು ದಸರಾ ಹಿನ್ನೆಲೆ ಹೆಚ್ಚಿನ ಮಹಿಳೆಯರು ಮೈಸೂರು ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಹೀಗಾಗಿಯೇ, ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.