ಐದು ವರ್ಷಗಳ ಬಳಿಕ ನಡೆಯಲಿದೆ ಮೈಸೂರು ದಸರಾ ಏರ್​ ಶೋ – ಈ ಸಮಯಕ್ಕೆ ಬಂದವರಿಗೆ ಉಚಿತ ಪ್ರವೇಶ!

ಐದು ವರ್ಷಗಳ ಬಳಿಕ ನಡೆಯಲಿದೆ ಮೈಸೂರು ದಸರಾ ಏರ್​ ಶೋ – ಈ ಸಮಯಕ್ಕೆ ಬಂದವರಿಗೆ ಉಚಿತ ಪ್ರವೇಶ!

ವಿಶ್ವ ವಿಖ್ಯಾತ ಮೈಸೂರು ದಸರಾ ಈಗಾಗಲೇ ಆರಂಭವಾಗಿದೆ. ಲಕ್ಷಾಂತರ ಜನರು ಮೈಸೂರು ದಸರಾ ನೋಡಲು ಭೇಟಿ ನೀಡುತ್ತಾರೆ. ಈ ಬಾರಿಯ ದಸರಾ ಉತ್ಸವದಲ್ಲಿ ಏರ್ ಶೋ ಸಹ ಇರಲಿದೆ. ಸೂರ್ಯ-ಕಿರಣ್ ತಂಡದಿಂದ ಎರಡು ದಿನ ಬನ್ನಿಮಂಟಪದಲ್ಲಿ ಏರ್ ಶೋ ನಡೆಯಲಿದೆ. ಐದು ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್​ಶೋ ನಡೆಯುತ್ತಿದೆ. ಈ ಬಾರಿಯ ಏರ್‌ ಶೋ ವೀಕ್ಷಿಸಲು ತೆರಳುವವರಿಗೆ ಗುಡ್‌ ನ್ಯೂಸ್‌ ಇದೆ. ಈ ಏರ್​ ಶೋಗೆ ಪಾಸ್ ಇರುವುದಿಲ್ಲ. ಉಚಿತವಾಗಿ ವೀಕ್ಷಿಸಬಹುದು.

ಹೌದು ಅ.22 ಹಾಗೂ ಅ.23ರಂದು ಸಂಜೆ 4 ಗಂಟೆಯಿಂದ 5 ಗಂಟೆಯವರೆಗೆ ಏರ್ ಶೋ ನಡೆಯಲಿದೆ. ಅ.22 ರಂದು ನಡೆಯುವ ಏರ್​ ಶೋಗೆ ಪಾಸ್ ಇರುವುದಿಲ್ಲ. ಆ ದಿನ ಎಲ್ಲರಿಗೂ ಉಚಿತ ಪ್ರವೇಶ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತೆ. 3 ಗಂಟೆಯ ನಂತರ ಬಂದವರಿಗೆ ಪ್ರವೇಶವಿರುವುದಿಲ್ಲ. 23ರಂದು ಪಂಜಿನ ಕವಾಯತು ಪಾಸ್‌ ಮೂಲಕ ಏರ್ ಶೋ ನೋಡಲು ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಸ್ಟ್ರೀಟ್ ಫೆಸ್ಟಿವಲ್‌ಗೆ ಬ್ರೇಕ್ ಹಾಕಲಾಗಿದೆ. ಪರ ವಿರೋಧ ಹಿನ್ನೆಲೆ ಸ್ಟ್ರೀಟ್ ಫೆಸ್ಟಿವಲ್‌ಗೆ ಬ್ರೇಕ್ ಹಾಕಲಾಗಿದೆ. ದಸರಾ ಮುಗಿದ ನಂತರ ಬ್ರ್ಯಾಂಡ್ ಮೈಸೂರು ಹೆಸರಿನಲ್ಲಿ ನಿರಂತರ ಕಾರ್ಯಕ್ರಮಗಳಿರಲಿವೆ.

ಇದನ್ನೂ ಓದಿ: ಸಂಗೀತಾ ಮತ್ತು ಕಾರ್ತಿಕ್ ಜೋಡಿಯಾಗುವ ಸಮಯ – ನೈಸ್ ಆಗಿ ಮಸಾಜ್ ಮಾಡ್ತಾ ಮತ್ತಷ್ಟು ಹತ್ತಿರವಾದ ಸ್ನೇಹಿತರು..!

ಮಂಗಳವಾರ ಮೈಸೂರು ಅರಮನೆಯ ವಸ್ತು ಪ್ರದರ್ಶನ ಆವರಣದಲ್ಲಿ 3ನೇ ಬಾರಿ ತಾಲೀಮು ನಡೆಸಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಲಾಯ್ತು. 7 ಪಿರಂಗಿಗಳ ಮೂಲಕ ಮೂರು ಸುತ್ತಿನ ತಾಲೀಮು ಮಾಡಲಾಗಿದೆ. ತಾಲೀಮಿನಲ್ಲಿ 41 ಕುದುರೆಗಳು, ಜಂಬೂ ಸವಾರಿಯ ನೇತೃತ್ವ ವಹಿಸಿರುವ ಅಭಿಮನ್ಯು, 12 ಆನೆಗಳು ಭಾಗಿಯಾಗಿದ್ವು. ಮೊದಲ ಬಾರಿ ದಸರೆಗೆ ಕಾಡಿನಿಂದ ನಾಡಿಗೆ ಬಂದಿರುವ ಹಿರಣ್ಯ ಮತ್ತು ರೋಹಿತ ಆನೆಗಳು ತಾಲೀಮಿನಲ್ಲಿ ದೂರು ಉಳಿದಿವೆ.

ಅಕ್ಟೋಬರ್ 15 ರಿಂದ 24 ರವರೆಗೆ ಕುಪ್ಪಣ್ಣ ಪಾರ್ಕ್​ನಲ್ಲಿ ದಸರಾ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಈ ಬಾರಿ 2 ಲಕ್ಷ ಗುಲಾಬಿ ಹೂವುಗಳಿಂದ ಚಂದ್ರಯಾನದ ಪರಿಕಲ್ಪನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಚಾಮುಂಡೇಶ್ವರಿ ದೇವಿ ಹಾಗು ದೇವಸ್ಥಾನದ ಗೋಪುರ, ಸುವರ್ಣ ಕರ್ನಾಟಕ – ಕರ್ನಾಟಕದ ಶ್ರೀಮಂತ ಪರಂಪರೆ, ಕ್ರೀಡೆಗಳ ಥೀಮ್, ಕ್ರಿಕೆಟ್ ಹೂವಿನ ಕಲಾಕೃತಿ, ಅಂಬಾರಿ ಹೂವಿನ ಕಲಾಕೃತಿ, ಕಾಫಿ ಕಪ್ ಹೂವಿನ ಕಲಾಕೃತಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳಾಗಿವೆ.

Shwetha M