ಅರಮನೆ ನಗರಿಗೆ ಎಂಟ್ರಿಕೊಟ್ಟ ಅಭಿಮನ್ಯು ಟೀಂ – ಅಭಿಜಿತ್​​​​​​ ಲಗ್ನದಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ

ಅರಮನೆ ನಗರಿಗೆ ಎಂಟ್ರಿಕೊಟ್ಟ ಅಭಿಮನ್ಯು ಟೀಂ – ಅಭಿಜಿತ್​​​​​​ ಲಗ್ನದಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ

ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದೆ. ಅದ್ದೂರಿ ಕಾರ್ಯಕ್ರಮಕ್ಕೆ ಅರಮನೆ ನಗರಿ ಸಜ್ಜಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗಳು ಅರಮನೆಯಂಗಳಕ್ಕೆ ಆಗಮಿಸಿದ್ದು, ಮಂಗಳವಾರ ಆನೆಗಳನ್ನು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

ಮಂಗಳವಾರ ಮಧ್ಯಾಹ್ನ 12.01ಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಅರಮನೆಗೆ ಆಗಮಿಸಿದವು. ನಂತರ ಅಭಿಜಿನ್ ಲಗ್ನದಲ್ಲಿ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ಮೈಸೂರು ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಇದನ್ನೂ ಓದಿ: ಝಗಮಗಿಸಲಿದೆ ಸಾಂಸ್ಕೃತಿಕ ನಗರಿ ಮೈಸೂರು – 135 ಕಿ.ಮೀ ರಸ್ತೆಯ 119 ವೃತ್ತಗಳಲ್ಲಿ ದೀಪಾಲಂಕಾರಕ್ಕೆ ಸಿದ್ಧತೆ

ಗಜಪಡೆಯನ್ನು 15ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಂಡವು. ಆನೆಗಳನ್ನು ಮೆರವಣಿಗೆಯಲ್ಲಿ ಕೆಲ ದೂರ ಕರೆದೊಯ್ಯಲಾಯಿತು. ಈ ವೇಳೆ ಆನೆಗಳ ಎದರು ವಿವಿಧ ವಾದ್ಯಗಳನ್ನು ಬಾರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್​ಸಿ ಮಹದೇವಪ್ಪ ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಎಸ್​ಪಿ ಸೀಮಾ ಲಾಟ್ಕರ್, ಡಿಸಿಪಿ ಮುತ್ತುರಾಜ್ ಜಾನ್ಹವಿ, ಡಿಸಿಎಫ್ ಸೌರಭ್ ಕುಮಾರ್, ಸಂಸದ ಪ್ರತಾಪಸಿಂಹ, ಶಾಸಕರಾದ ಶ್ರೀವತ್ಸ ಹರೀಶ್ ಗೌಡ, ಎಂಎಲ್‌ಸಿ ಸಿ.ಎನ್ ಮಂಜೇಗೌಡ ಮೇಯರ್ ಶಿವಕುಮಾರ್, ಅರಮನೆ ಉಪನಿರ್ದೇಶಕ ಟಿ ಎಸ್ ಸುಬ್ರಮಣ್ಯ ಭಾಗಿಯಾಗಿದ್ದರು.

ಈ ಬಾರಿ ಮೈಸೂರು ದಸರಾ ಜಂಬೂ ಸವಾರಿಯಲ್ಲಿ 14 ಆನೆಗಳು ಭಾಗಿಯಾಗಲಿವೆ. ಕ್ಯಾಪ್ಟನ್​​ ಅಭಿಮನ್ಯು ಈ ಬಾರಿಯೂ ಅಂಬಾರಿಯನ್ನು ಹೊರಲಿದ್ದಾನೆ. ನಿಶಾನೆ ಆನೆಯಾದ ಅರ್ಜುನ ಜಂಬೂಸವಾರಿಯಲ್ಲಿ 22 ವರ್ಷಗಳ ಕಾಲ ಭಾಗವಹಿಸಿದ ಅನುಭವವಿದೆ. ಈ ಹಿಂದೆ ಅಂಬಾರಿ ಹೊರುತ್ತಿದ್ದನಾದರೂ ಈ ಬಾರಿ ನಿಶಾನೆ ಆನೆಯಾಗಿ ಕಾರ್ಯನಿರ್ವಹಿಸಲಿದ್ದಾನೆ. ಇನ್ನು ಚೈತ್ರಾ ಹಾಗೂ ವಿಕ್ರಮ ಆನೆಗಳು ಈ ಬಾರಿಯ ದಸರಾ ಜಂಬೂಸವಾರಿಗೆ ಮಿಸ್ ಆಗಲಿದ್ದಾರೆ. ಚೈತ್ರಾ ಗರ್ಭಿಣಿ, ವಿಕ್ರಮ ಆನೆಗೆ ಮದ ಹಿನ್ನೆಲೆ ಜಂಬೂಸವಾರಿಗೆ ಮಿಸ್ ಆಗಲಿವೆ.

suddiyaana