ಮೈಸೂರಿನ ಶಿಲ್ಪಿಯಿಂದ ಅಯೋಧ್ಯೆಯ ಬಾಲ ರಾಮನ ವಿಗ್ರಹ ಕೆತ್ತನೆ

ಮೈಸೂರಿನ ಶಿಲ್ಪಿಯಿಂದ ಅಯೋಧ್ಯೆಯ ಬಾಲ ರಾಮನ ವಿಗ್ರಹ ಕೆತ್ತನೆ

ಕೋಟ್ಯಾಂತರ ಹಿಂದೂಗಳ ಶತ ಶತಮಾನಗಳ ಕನಸು ನನಸಾಗುವ ಕಾಲ ಹತ್ತಿರ ಬರುತ್ತಿದೆ. ಅಯೋಧ್ಯೆಯ ಶ್ರೀರಾಮ ದೇಗುಲ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಶೇಕಡಾ 60 ರಷ್ಟು ರಾಮಮಂದಿರ ಕಾರ್ಯ ಪೂರ್ಣಗೊಂಡಿದ್ದು, ರಾಮಮಂದಿರದ ಒಳಗೆ ಬಿಲ್ಲು ಹಿಡಿದಿರುವ ರೂಪದಲ್ಲಿ ನಿಂತಿರುವ 5 ವರ್ಷದ ಪುಟ್ಟ ಶ್ರೀ ರಾಮನ ವಿಗ್ರಹ ಕೆತ್ತನೆ ಮಾಡುವ ಜವಾಬ್ದಾರಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ವಹಿಸಲಾಗಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮುಖ್ಯದ್ವಾರಕ್ಕೆ ಚಂದ್ರಾಪುರದ ‘ತೇಗ’ದ ಮರ

ವರದಿಗಳ ಪ್ರಕಾರ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವತಿಯಿಂದ ನಡೆದ ಎರಡು ದಿನಗಳ ಸಭೆಯಲ್ಲಿ ಅರುಣ್‌ಗೆ ಶಿಲ್ಪಕಲೆಯ ಜವಾಬ್ದಾರಿಯನ್ನು ವಹಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ವಿಗ್ರಹವು ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾನ ಪಡೆಯಲಿದೆ. ಈ ಪುಟ್ಟ ಶ್ರೀ ರಾಮನ ವಿಗ್ರಹಕ್ಕೆ ಕರ್ನಾಟಕದ ಕಪ್ಪು ಕಲ್ಲುಗಳು ಅಥವಾ ಕೃಷ್ಣ ಶಿಲೆಯನ್ನು ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ, ಉಡುಪಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದ್ದು, ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕರ್ನಾಟಕದ ಕಪ್ಪು ಕಲ್ಲುಗಳನ್ನು (ಕೃಷ್ಣ ಶಿಲೆ) ಬಳಸಿ ಬಿಲ್ಲು ಬಾಣ ಹಿಡಿದಿರುವ ಪುಟ್ಟ ಶ್ರೀ ರಾಮನ ರೂಪವನ್ನು ಕೆತ್ತಲಿದ್ದಾರೆ.  “ರಾಮ ಲಲ್ಲಾ (ಸಣ್ಣ ವಯಸ್ಸಿನ ಶ್ರೀ ರಾಮ) ವಿಗ್ರಹವು ಐದು ಅಡಿ ಎತ್ತರವಿರುತ್ತದೆ ಮತ್ತು ಬಿಲ್ಲು ಮತ್ತು ಬಾಣದಿಂದ ಶಸ್ತ್ರಸಜ್ಜಿತವಾದ 5 ವರ್ಷದ ರಾಮ್ ಲಲ್ಲಾನನ್ನು ಒಳಗೊಂಡಿದ್ದು, ಅದು ನಿಂತಿರುವ ಭಂಗಿಯಲ್ಲಿರುತ್ತದೆ” ಎಂದು ಹೇಳಿದ್ದಾರೆ.

suddiyaana