ಆಧಾರ್​ ತಿದ್ದುಪಡಿ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ! –  ಮದುವೆಯಾಗಿ 7 ತಿಂಗಳ ಬಳಿಕ ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ದೂರು

ಆಧಾರ್​ ತಿದ್ದುಪಡಿ ಮಾಡಿ ಅಪ್ರಾಪ್ತ ಬಾಲಕಿಯೊಂದಿಗೆ ವಿವಾಹ! –  ಮದುವೆಯಾಗಿ 7 ತಿಂಗಳ ಬಳಿಕ ಗ್ರಾ.ಪಂ ಉಪಾಧ್ಯಕ್ಷನ ವಿರುದ್ಧ ದೂರು

ಬಾಹ್ಯ ವಿವಾಹ ತಡೆಯಲು ಸರ್ಕಾರ ನಿರಂರವಾಗಿ ಪ್ರಯತ್ನಿಸುತ್ತಿದೆ. ಸರ್ಕಾರಿ ಅಧಿಕಾರಿಗಳು ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಆದರೆ ಬಾಲ್ಯ ವಿವಾಹ ತಡೆಯಬೇಕಾದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷನೇ ಬಾಲ್ಯ ವಿವಾಹವಾಗಿದ್ದು, ಈತನ ವಿರುದ್ಧ ಗ್ರಾಮಸ್ಥರೇ ದೂರು ಸಲ್ಲಿಸಿರುವ ಘಟನೆ ನಡೆದಿದೆ.

ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಹಾಡ್ಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕುಮಾರ್ ಎಂಬುವರ ವಿರುದ್ಧ ಆರೋಪ ಕೇಳಿಬಂದಿದೆ. ಹರೀಶ್ ಅರಿಯೂರು ಗ್ರಾಮದ ನಿವಾಸಿ. ಆತನ ಗ್ರಾಮಸ್ಥರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು, ಹರೀಶ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಕ್ಕಳು ಕನಸಿನಲ್ಲಿ ಬರ್ತಿದ್ದಾರೆ ಎಂದು ಜೈಲಿನಿಂದ ಆರೋಪಿ ಎಸ್ಕೇಪ್ – ಮತ್ತೆ ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ ಪೋಷಕರು  

ಆಧಾರ್‌ನಲ್ಲಿ ಹುಟ್ಟಿದ ದಿನಾಂಕ ತಿದ್ದುಪತಿ!

ಹರೀಶ್‌ ಕುಮಾರ್‌ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಆಧಾರ್ ಕಾರ್ಡ್​ನಲ್ಲಿನ ಹುಟ್ಟಿದ ದಿನಾಂಕವನ್ನು ತಿದ್ದುಪಡಿ ಮಾಡಿಸಿಕೊಂಡಿದ್ದಾನೆ. ಬಳಿಕ ಈ ಬಾಲಕಿಯನ್ನು ಮದುವೆಯಾಗಿದ್ದಾನೆ ಎಂದು ಅರಿಯೂರು ಗ್ರಾಮಸ್ಥರು ದಾಖಲೆ ಸಮೇತ ಆರೋಪ ಮಾಡಿದ್ದಾರೆ. ಶಾಲಾ ದಾಖಾಲಾತಿಯನ್ನು ಸಾಕ್ಷಿಯಾಗಿ ನೀಡಿದ್ದು, ಅದರ ಪ್ರಕಾರ ವಧುವಿಗೆ ಇನ್ನೂ 18 ವರ್ಷ ಕೂಡ ತುಂಬಿಲ್ಲ. ಆದರೆ, ಆಧಾರ್​ ಕಾರ್ಡ್​ ತಿದ್ದುಪಡಿ ಮೂಲಕ ವಯಸ್ಸನ್ನು ಮರೆಮಾಚಿ ಮದುವೆ ಮಾಡಿಕೊಂಡಿದ್ದಾರೆ ಎಂದು ಹರೀಶ್​ ವಿರುದ್ಧ ಆರೋಪ ಮಾಡಲಾಗಿದೆ.

ಮದುವೆಯಾಗಿ 7 ತಿಂಗಳ ಬಳಿಕ ದೂರು!

ಕಳೆದ ಫೆ. 15ರಂದು ನಂಜನಗೂಡಿನಲ್ಲಿ ಅದ್ಧೂರಿ ವಿವಾಹ ನೆರವೇರಿತು. ಅಂದಿನಿಂದ ಗ್ರಾಮಸ್ಥರು ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಯು ಸಹ ಕಾಡುತ್ತಿದೆ. ಮದುವೆಯಾಗಿ 7 ತಿಂಗಳು ಕಳೆದ ಬಳಿಕ ಹರೀಶ್​ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಪ್ರಾಪ್ತೆಯನ್ನು ಮದುವೆ ಆಗುವ ಮೂಲಕ ಉಪಾಧ್ಯಕ್ಷ ಹರೀಶ್​ ಕುಮಾರ್​ ಇದೀಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

Shwetha M