ಬಾಲಕಿಯೊಂದಿಗೆ ಮೈನಾಹಕ್ಕಿ ಸ್ನೇಹ – ಶಾಲೆಗೂ ಹೋಗುತ್ತೆ.. ಪಾಠನೂ ಕೇಳುತ್ತೆ!

ಬಾಲಕಿಯೊಂದಿಗೆ ಮೈನಾಹಕ್ಕಿ ಸ್ನೇಹ – ಶಾಲೆಗೂ ಹೋಗುತ್ತೆ.. ಪಾಠನೂ ಕೇಳುತ್ತೆ!

ಪಶ್ಚಿಮ ಬಂಗಾಳ: ಮನುಷ್ಯನೊಟ್ಟಿಗೆ ಪ್ರಾಣಿ- ಪಕ್ಷಿಗಳ ಅನುಬಂಧ, ಪ್ರೀತಿ ನಿಜಕ್ಕೂ ವಿಶೇಷವಾಗಿರುತ್ತದೆ. ಅವುಗಳ ಪ್ರೀತಿ, ವಾತ್ಸಲ್ಯಕ್ಕೆ ಎಂತಹವರೂ ಕರಗಿ ಹೋಗುತ್ತಾರೆ. ಅವುಗಳಿಗೆ ಮಾತು ಬರದಿದ್ದರೂ ಮನುಷ್ಯನ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತವೆ. ನೆರಳಿನಂತೆ ತನ್ನ ಯಜಮಾನನನ್ನು ಹಿಂಬಾಲಿಸುತ್ತವೆ ಅನ್ನೋದಕ್ಕೆ ಹಲವು ನಿದರ್ಶನಗಳು ಸಿಕ್ಕಿವೆ. ಇಂತಹ ಸಾಕಷ್ಟು ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುತ್ತವೆ. ಇದೀಗ ಮೈನಾ ಹ್ಕಕಿ ಹಾಗೂ ಬಾಲಕಿಯ ವಿಶೇಷ ಪ್ರೀತಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.

ಹೌದು, ಪಶ್ಚಿಮ ಬಂಗಾಳದ ಶಿವಪುರದಲ್ಲಿ ಮಿತೂ ಎಂಬ ಹೆಸರಿನ ಮೈನಾ ಹಕ್ಕಿಯೊಂದು ಅಂಕಿತಾ ಬಗ್ಡಿ  ಎಂಬ ಬಾಲಕಿಯೊಂದಿಗೆ ವಿಶೇಷ ಸ್ನೇಹವನ್ನು ಹೊಂದಿದೆ. ಇವರಿಬ್ಬರ ನಡುವಿನ ಬಾಂಧವ್ಯ ಎಷ್ಟಿದೆ ಎಂದರೆ ಅವರಿಬ್ಬರು ಒಬ್ಬರನ್ನೊಬ್ಬರು ಒಂದು ಕ್ಷಣವೂ ಬಿಟ್ಟಿರುವುದಿಲ್ಲ. ಅವರಿಬ್ಬರು ಎಲ್ಲಿ ಹೋದರೂ ಜೊತೆಯಾಗೆ ಇರುತ್ತಾರೆ. ಊಟ, ತಿಂಡಿ, ಆಟ, ಪಾಠ ಜೊತೆಯಾಗೆ ಮಾಡುತ್ತಾರೆ.

ಇದನ್ನೂ ಓದಿ: ಶ್ವಾನಗಳಿಗೂ ಆರಂಭವಾಯ್ತು “ಡಾಭಾ” – ಇಲ್ಲಿ ನಾಯಿಗಳಿಗೂ ಸಿಗುತ್ತೆ ಭರ್ಜರಿ ಊಟ

ಅಂಕಿತಾ ಇತ್ತೀಚೆಗೆ ಪಶ್ಚಿಮ ಬರ್ಧಮಾನ್‌ನ ಕಾಂಕ್ಸಾದ ಶಿವಪುರ ಪ್ರಾಥಮಿಕ ಶಾಲೆಗೆ ಸೇರಿದ್ದಾಳೆ. ಅಂಕಿತಾಳನ್ನು ಬಿಟ್ಟು ಇರಲಾರದ ಮಿತೂ ಕೂಡ ಅಂಕಿತಾ ಶಾಲೆಗೆ ಹೋಗುವಾಗಲೆಲ್ಲಾ ಜೊತೆಯಾಗಿ ಹೋಗುತ್ತಿದೆ. ಅಂಕಿತಾ ತರಗತಿಗೆ ಹೋದರೂ ಆಕೆಯನ್ನೇ ಹಿಂಬಾಲಿಸುತ್ತೆ. ಶಿಕ್ಷಕರು ಪಾಠ ಮಾಡುವಾಗ ಮಿತೂ, ಅಂಕಿತಾ ಕುಳಿತುಕೊಳ್ಳುವ ಡೆಸ್ಕ್ ಮೇಲೆ ಚೂರು ಸದ್ದು ಮಾಡದೇ ಸುಮ್ಮನೆ ಕುಳಿತುಕೊಳ್ಳುತ್ತಂತೆ. ಊಟದ ಸಮಯದಲ್ಲಿ ಅಂಕಿತಾ ತಾನೂ ತಿಂದೂ, ಮಿತೂವಿಗೂ ತಾನೂ ತಂದಿರುವ ತಿನಿಸುಗಳನ್ನು ತಿನ್ನಿಸುತ್ತಾಳೆ. ಶಾಲೆಯಿಂದ ಮನೆಗೆ ಹೋಗುವಾಗಲೂ ಅಂಕಿತಾಳನ್ನೇ ಮಿತೂ ಹಿಂಬಾಲಿಸುತ್ತಂತೆ.

ಮಿತೂ ಅಂಕಿತಾಳೊಂದಿಗೆ ಮಾತ್ರವಲ್ಲ ಇದೀಗ ಇಡೀ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ಅಂಕಿತಾ, ಮಿತೂ ಬಾಂಧವ್ಯ ನೋಡಿ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಹ ಹಕ್ಕಿಗೆ ಊಟ ಹಾಕುತ್ತಾರೆ. ಜನರೊಂದಿಗೆ ಈ ಪಕ್ಷಿ ಹೊಂದಿರುವ ಪ್ರೀತಿಯನ್ನು ನೋಡಿ ಶಿವಪುರ ಭಾಗದ ಜನರು ಆಶ್ಚರ್ಯ ಪಡುತ್ತಿದ್ದಾರೆ.

ಈ ಬಗ್ಗೆ ಅಂಕಿತಾ ಶಾಲೆಯ ಶಿಕ್ಷಕರು ಮಾತನಾಡಿದ್ದು, ಅಂಕಿತಾ ಜೊತೆ ಮಿತೂ ಪ್ರತಿನಿತ್ಯ ಶಾಲೆಗೆ ಬರುತ್ತದೆ. ಅಂಕಿತಾ ಎಲ್ಲಿ ಹೋದರೂ ಆಕೆಯನ್ನು ಮಿತೂ ಹಿಂಬಾಲಿಸುತ್ತೆ. ತರಗತಿ ನಡೆಯುವ ವೇಳೆಯೂ ಆಕೆಯೊಂದಿಗೆ ಇರುತ್ತದೆ. ಕೆಲವೊಂದು ಬಾರಿ ಶಾಲೆಯ ಅಕ್ಕಪಕ್ಕದಲ್ಲೇ ಸುತ್ತಾಡುತ್ತದೆ.  ಇಲ್ಲಿಯವರೆಗೂ ಮಿತೂ ಯಾರಿಗೂ ಯಾವುದೇ ತೊಂದರೆ ನೀಡಿಲ್ಲ ಅಂತಾ ಹೇಳಿದ್ದಾರೆ.

ಮಿತೂ ಕಣ್ಣಮುಂದೆ ಒಂದು ಕ್ಷಣ ಇಲ್ಲದಿದ್ದರೂ ತುಂಬಾ ಬೇಸರವಾಗುತ್ತದೆ ಅಂತಾ ಅಂಕಿತಾ ತಿಳಿಸಿದ್ದಾಳೆ. ಇವರಿಬ್ಬರ ನಡುವಿನ ಪ್ರೀತಿಯನ್ನು ನೋಡಿ ಸ್ಥಳೀಯರು ತುಂಬಾ ಸಂತೋಷಪಡುತ್ತಿದ್ದಾರೆ. ಅಂಕಿತಾ ಮಾತ್ರವಲ್ಲ, ಈಗ ಶಿಕ್ಷಕರೂ, ಮಕ್ಕಳೂ ಕೂಡ ಮಿತೂವಿನ ಪ್ರೀತಿಯಲ್ಲಿ ಬಿದ್ದಿದ್ದಾರೆ.

suddiyaana